Kannada NewsKarnataka NewsLatest

ರೇಡ್‌‌ಗೆ ಹೋದ ಅಧಿಕಾರಿಯದ್ದೇ ಒಂದು ಸಿಡಿ ಸಿಕ್ಕಿದೆ – ರಮೇಶ ಜಾರಕಿಹೊಳಿ ಬಾಂಬ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ವಿನಾಕಾರಣ ನನ್ನ ವಿರುದ್ಧ ಬಂದರೆ ಯಾವುದೇ ಪರಿಸ್ಥಿತಿಯಲ್ಲಿ ಡಿಕೆಶಿ ವೈಯಕ್ತಿಕ ವಿಚಾರವನ್ನೂ ಮುಂದೆ ಮಾತನಾಡಬೇಕಾಗುತ್ತೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಎಚ್ಚರಿಕೆ ನೀಡಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಅದನ್ನ ಗಟ್ಟಿಯಾಗಿ ನಿಂತು ಎದುರಿಸಿ ಹೊರಗೆ ಬಂದಿದ್ದೇನೆ. ನನ್ನ ಸಿಡಿ ಕೇಸ್ ಸಿಬಿಐಗೆ ಕೊಡಿಸುತ್ತೇನೆ‌. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾತಾಡಿದ್ದೇನೆ. ಸಿಡಿಯಲ್ಲಿ ಮಹಾನಾಯಕನ ಕೈವಾಡ ಇರುವುದಕ್ಕೆ ಸಾಕ್ಷಿ ಇದೆ.  40 ಕೋಟಿ ಖರ್ಚು ಮಾಡಿ ರಮೇಶ್ ಜಾರಕಿಹೊಳಿಯನ್ನ ಅದರಲ್ಲಿ ಸಿಕ್ಕಿಹಾಕಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ ಹೇಳಿರುವ ಸಾಕ್ಷಿ ಇದೆ. ಸ್ವತಃ ಅವನೇ ಮಾತಾಡಿದ್ದಾನೆ ಎಂದು  ಆತ ಮಾತಾಡಿರುವ ಸಂಭಾಷಣೆ ಇದೆ. ಸಿಬಿಐಗೆ ಒಪ್ಪಿಸುವ ಕುರಿತು ರಾಜ್ಯ ಸರಕಾರಕ್ಕೂ ಮನವಿ ಮಾಡಿದ್ದೇನೆ ಎಂದರು.
ಸಿಡಿ ಕೇಸ್ ಸಿಬಿಐಗೆ ಒಪ್ಪಿಸಬೇಕು ಎಂದು ಪಕ್ಷದ ವರಿಷ್ಠರಿಗೆ ಹೇಳಿದ್ದೇನೆ. ಸಿಡಿ ಕೇಸ್ ನ ಇಬ್ಬರು ಪ್ರಮುಖ ಆರೋಪಿಗಳಾದ ಶಿರಾ ಹಾಗೂ ದೇವನಹಳ್ಳಿ ಮೂಲದವರು. ಇದರಲ್ಲಿ ದೇವನಹಳ್ಳಿ ಮೂಲದವನ ಮನೆ ಮೇಲೆ ದಾಳಿಯಾದಾಗ 90-110 ಸಿಡಿ ಆತನ ಮನೆಯಲ್ಲಿ ಸಿಕ್ಕಿವೆ. ಇಡೀ ರಾಜ್ಯದ ಜನರ ಸಿಡಿ ಸಿಕ್ಕಿವೆ. ಮಹಾನಾಯಕನ ಕುತಂತ್ರದಿಂದ ಆಗಿವೆ. ಅವು ಎಲ್ಲಾ ಸಿಬಿಐ ವಿಚಾರಣೆ ಆದರೆ ಎಲ್ಲವೂ ಹೊರಗೆ ಬರುತ್ತೆ ಎಂದ ಅವರು, ಅಲ್ಲಿ ರೆಡ್‌‌ಗೆ ಹೋದ ಅಧಿಕಾರಿಯದ್ದೇ ಒಂದು ಸಿಡಿ ಸಿಕ್ಕಿದೆ. ಅದನ್ನ ಮುಚ್ಚಿಟ್ಟಿದ್ದಾರೆ. ಹೀಗಾಗಿ ಇದನ್ನ ಸಿಬಿಐಗೆ ಕೊಡಬೇಕು. ಮುಂದಿನ ವಾರ ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನು ಭೇಟಿಯಾಗುತ್ತೇನೆ. ಸಿಬಿಐ ವಿಚಾರಣೆಗೆ ಕೊಟ್ಟು ಮಹಾನಾಯಕನ ಪೂರ್ತಿ ಕಳಚಬೇಕು, ಅವನಿಗೆ ಬುದ್ದಿ ಕಲಿಸಬೇಕು. ನಾನು ಒಬ್ಬನೇ ಸಂಕಷ್ಟ ಅನುಭವಿಸಿದ್ದು ಬೇರೆಯವರು ಸಂಕಷ್ಟಕ್ಕೆ ಸಿಲುಕಬಾರದು. ಬಹಳಷ್ಟು ಜನರನ್ನು ಬ್ಲ್ಯಾಕ್ ಮೇಲ್ ಮಾಡಲು ರೆಡಿಯಾಗಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
ಗುತ್ತಿಗೆದಾರ ಸಂತೋಷ ಪಾಟೀಲ್ ಕೇಸ್ ಕೂಡ ಸಿಬಿಐಗೆ ಕೊಡಬೇಕು. ಸಂತೋಷ ಪಾಟೀಲ್ ಹಗರಣದಲ್ಲಿ ಯಾರಿದ್ದಾರೆ ಅನ್ನೋದು ಹೊರಗೆ ಬರಬೇಕು ಸಂತೋಷ್ ಪಾಟೀಲ್ ಉಡುಪಿಗೆ ಬರುವ ಮುನ್ನ ಚಿಕ್ಕಮಗಳೂರಿಗೆ ಹೋಗಿದ್ದ. ಒಂದೇ ರೂಮ್ ನಲ್ಲಿ ಅಂದು ಎಲ್ಲರೂ ಇದ್ದರು. ಉಡುಪಿಗೆ ಬಂದ ಬಳಿಕ ಎರಡು ರೂಮ್ ಯಾಕೆ ಮಾಡಿದರು ?  ಬಹಳ ಮುಖ್ಯವಾದ ಅಂಶ ಇದೆ.  ಸಿಬಿಐಗೆ ಕೊಟ್ಟರೆ ಎಲ್ಲವೂ ಹೊರಗೆ ಬರುತ್ತೆ. ನಮ್ಮ ಸರಕಾರಕ್ಕೆ ಮುಜುಗರ ಆಗಬಾರದು ಎಂದು ಸುಮ್ಮನೆ ಕುಳಿತಿದ್ದೇವೆ. ಸಂತೋಷ ಪಾಟೀಲ್ ಆತ್ಮಹತ್ಯೆ ಹಿಂದೆ ಮಹಾನಾಯಕ ಇರಬಹುದು. ಇದನ್ನು ಸಿಬಿಐಗೆ ಕೊಡುವಂತೆ ಈಗಾಗಲೇ ಸಿಎಂ ಹಾಗೂ ಕೇಂದ್ರ ಗೃಹ ಸಚಿವರಿಗೆ ಹೇಳಿದ್ದೇನೆ ಎಂದರು.
ಡಿಕೆ ಶಿವಕುಮಾರ್ ರಮೇಶ್ ಜಾರಕಿಹೊಳಿ ಟಾರ್ಗೆಟ್ ಮಾಡಿದ್ದಾರೆನ್ನುವ ವಿಚಾರಕ್ಕೆ ಉತ್ತರಿಸಿದ ಅವರು,  ಡಿಕೆಶಿಗೆ ನನ್ನ ಒಬ್ಬನದ್ದೇ ಹೆದರಿಕೆ ಇದೆ‌, ಅವನನ್ನ ಮುಗಿಸುತ್ತೇನೆ ಅಂತಾ ಹೆದರಿಕೆ ಇದೆ. ನಾನೊಬ್ಬನೇ ಅವನನ್ನ ಎದುರಿಸುವವ. ಇಂತಹ ನೂರು ಸಿಡಿ ಬರಲಿ ನಾನು ಗಟ್ಟಿ ಇದ್ದೇನೆ ಎಂದರು. ಸ್ಥಳೀಯ ನಾಯಕರ ಪಾತ್ರ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ, ಅವರು ಏಜೆಂಟ್‌ರು ನಾನು ಅವರ ಬಗ್ಗೆ ಮಾತನಾಡವುದರಲ್ಲಿ ಅರ್ಥ ಇಲ್ಲ. ಎನಿದ್ದರೂ ಡಿಕೆಶಿ ಆ್ಯಂಡ್ ಕಂಪನಿ ನೋಡೋಣ.
ನನ್ನ ಕೇಸ್ ಬಿಡುವುದಿಲ್ಲ ಸಿಬಿಐಗೆ ಕೊಡಿಸುತ್ತೇನೆ ಎಂದು ಪುನರಚ್ಚರಿಸಿದರು.
ಚುನಾವಣೆ ಸಂದರ್ಭದಲ್ಲಿ ಮಂತ್ರಿಮಂಡಳ ವಿಸ್ತರಣೆ ಬೇಡಾ ಅಂತಾ ನಾನೇ ಹೇಳಿದ್ದೇನೆ. ಮೂರು ತಿಂಗಳು ಮಂತ್ರಿಯಾಗಿ ಎನೂ ಉಪಯೋಗ ಇಲ್ಲ. ಮುಂದಿನ 2023ರ ನಂತರ ಅಧಿಕಾರಕ್ಕೆ ಬಂದು ಮಂತ್ರಿ ಆಗೋಣ. ಅವಾಗ ಡಿಕೆಶಿ ತಪ್ಪಿಸುತ್ತಾರಲ್ಲಾ ತಪ್ಪಿಸಲಿ ನೋಡೋಣ. ಸಂಪುಟ ವಿಸ್ತರಣೆ ಮಾಡಬೇಡಿ ಅಂತಾ ಸಿಎಂಗೆ ನಾನೇ ಹೇಳಿದ್ದೇನೆ. ಚುನಾವಣೆ ಮಾಡಿ ಪಕ್ಷ ಅಧಿಕಾರಕ್ಕೆ ತರೋಣ ಅಂತಾ ಹೇಳಿದ್ದೇವೆ. ನಮ್ಮಲ್ಲಿ ಸಾಮೂಹಿಕ ನಾಯಕತ್ವ, ಬೊಮ್ಮಾಯಿ ಅವರು ಸಿಎಂ ಇರೋ ಕಾರಣಕ್ಕೆ ಅವರ ನೇತೃತ್ವ.
ಮೋದಿ, ಅಮಿತ್ ಶಾ, ಕಟೀಲ್, ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದರು.
ಕಾಂಗ್ರೆಸ್‌ನಿಂದ ದೂರು ದಾಖಲಾಗಿರುವ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಆರನೇ ಅವಧಿ ಶಾಸಕ ನನಗೆ ಕಾನೂನು ಅರಿವು ಇದೆ.
ಯಾವ ಅಭ್ಯರ್ಥಿ ಪರವಾಗಿ ನಾನು ಹೇಳಿಲ್ಲ. ಕಾರ್ಯಕ್ರಮದಲ್ಲಿ ಎನು ಮಾತಾಡಿದೀನಿ ಗೊತ್ತಿಲ್ಲ. ಗ್ರಾಮೀಣ ಶಾಸಕರು ಓಪನ್ ಆಗಿಯೇ ಹಂಚುತ್ತಿದ್ದಾರೆ ಅದು ಆಮಿಷ ಅಲ್ವಾ ? ಅಂತಹ ಸಣ್ಣ ರಾಜಕಾರಣ ಮಾಡಬಾರದು. ಡಿಕೆ ಶಿವಕುಮಾರ್‌ಗೆ ರಮೇಶ್ ಜಾರಕಿಹೊಳಿ ಬಗ್ಗೆ ಹೆದರಿಕೆ ಇದೆಯಲ್ಲಾ ಬಹಳ ಸಂತೋಷ ಎಂದರು.
ಅಮಿತ್ ಶಾ, ಮೋದಿ ಅವರ ಬಗ್ಗೆ ಎಷ್ಟು ಹೆದರಿಕೆ ಇರಬಹುದು ಅವರಿಗೆ. ಕಳೆದ ಬಾರಿ ನಾನು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದಾಗ ನನ್ನ ಮಾತು ಕೇಳಿ ವೋಟ್ ಹಾಕಿದ್ದಾರೆ. ಈಗಿನ ಶಾಸಕರು ತಮ್ಮ ಅಧಿಕಾರದ ದರ್ಪದಿಂದ ಬೆಂಗಳೂರು, ದೆಹಲಿ ಓಡಾಟದಲ್ಲಿ ಜನರನ್ನ ಮರೆತರು.
ಆರು ಸಾವಿರದಿಂದ ಹತ್ತು ಸಾವಿರ ಕೋಟಿ ಖರ್ಚು ಆಗಲಿ ಅಂತಾ ಬೇರೆ ಉದ್ದೇಶಕ್ಕೆ ಹೇಳಿದ್ದೇನೆ. ಅಲ್ಲಿ ಮೂಲಭೂತ ಸೌಕರ್ಯಕ್ಕೆ ಹಣ ಕೊಡುವುದಾಗಿ ಹೇಳಿದ್ದೇನೆ. ಅವರು ಉಚಿತ ಕರೆಂಟ್ ಕೊಡುತ್ತೇನೆ ಅಂದಿದ್ದು ಆಮಿಷ ಅಲ್ವಾ ? ಅಷ್ಟು ಕೆಳ ಮಟ್ಟಕ್ಕೆ ಹೋಗಬಾರದು ಅಂತಾ ನಾವು ಕೇಸ್ ಕೊಟ್ಟಿಲ್ಲ. ನನ್ನ ಒಬ್ಬನ ಮೇಲೆ ಕೇಸ್ ಮಾಡಬಹುದಿತ್ತು, ಮುಖ್ಯಮಂತ್ರಿ ಮೇಲೆ ಯಾಕೆ ? ಡಿಕೆ ಶಿವಕುಮಾರ್‌ಗೆ ಬೇರೆ ಕ್ಷೇತ್ರ ಕಾಣಿಸುತ್ತಿಲ್ಲವಾ ? ನಾನು ಹೇಳಿದ ಹೇಳಿಕೆ ಟ್ವಿಸ್ಟ್ ಆಗಿದೆ. ನಾನು ಅಭಿವೃದ್ಧಿಗಾಗಿ ಹಣ ಕೊಡುತ್ತೇನೆ ಎಂದಿದ್ದೇನೆ. ನಾನು ವೋಟ್‌ಗೆ ಹಣ ಕೊಡ್ತೇನಿ ಅಂದಿಲ್ಲ ಎಂದರು.
https://pragati.taskdun.com/election-malpractice-jp-nadda-cm-basavaraj-bommai-naleen-kumar-kateel-ramesh-jarakiholi-complaint-filed-congress/
https://pragati.taskdun.com/cm-basavaraj-bommaihaverid-k-sihivakumar/
https://pragati.taskdun.com/ramesh-jarakiholid-k-shivakumarcongresscomplaint-file/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button