Kannada NewsKarnataka NewsLatest

ರಾಜ್ಯದಲ್ಲೇ ದಾಖಲೆ ಅಂತರದಿಂದ ಲಕ್ಷ್ಮೀ ಹೆಬ್ಬಾಳಕರ್ ಗೆಲ್ಲಿಸಿ – ಸತೀಶ್ ಜಾರಕಿಹೊಳಿ ಕರೆ

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ  ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಘಟಕಗಳ ಸಮಾವೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಿಂದ ಯಾರಾದರೂ ರಾಜ್ಯದ ಮುಖ್ಯಮಂತ್ರಿ ಆಗುವುದಿದ್ದರೆ ಅದು ಸತೀಶ ಜಾರಕಿಹೊಳಿಯವರು ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

 

ಅವರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ತಾರೀಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಘಟಕಗಳ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪಕ್ಷವನ್ನು ಜಿಲ್ಲೆಯಲ್ಲಿ ಬಲಪಡಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 15 ಸೀಟುಗಳನ್ನು ಗೆಲ್ಲಬೇಕು. ಇದು ಅನಿವಾರ್ಯವೂ ಹೌದು. ಕಾರಣ ಬೆಳಗಾವಿ ಜಿಲ್ಲೆಗೆ ಬರಬೇಕಾದ ಅನೇಕ ಯೋಜನೆಗಳನ್ನು ಬಿಜೆಪಿ ನಾಯಕರು ಹುಬ್ಬಳ್ಳಿ- ಧಾರವಾಡಕ್ಕೆ ಒಯ್ಯುತ್ತಿದ್ದು ಇದಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ. ಸತೀಶ ಜಾರಕಿಹೊಳಿಯವರ ಕೈ ಬಲಪಡಿಸಬೇಕು ಎಂದರು.

 

 

ಬೆಲೆ ಏರಿಕೆ ಸೇರಿದಂತೆ ಪ್ರತಿ ಹಂತದಲ್ಲಿ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಗೂ ಪರ್ಸೆಂಟೇಜ್ ಕೊಡಬೇಕಾದ ಅನಿವಾರ್ಯತೆ ಈ ಸರಕಾರದಲ್ಲಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಆರಿಸಿ ತರಬೇಕಿದೆ ಎಂದ ಚನ್ನರಾಜ ಹಟ್ಟಿಹೊಳಿ, ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮೆಲ್ಲರ ಗೆಲುವಿಗೆ ಸತೀಶ ಜಾರಕಿಹೊಳಿ ಅವರು ಸಂಪೂರ್ಣ ಸಹಕಾರ ನೀಡಿದ್ದು ನಾವು ಮುಂಬರುವ ಚುನಾವಣೆಯಲ್ಲಿ ಅವರ ನಾಯಕತ್ವದಲ್ಲಿ ಪಕ್ಷವನ್ನು ಬಲಪಡಿಸಿ ಗೆಲ್ಲಿಸುವುದಾಗಿ ಮಾತು ಕೊಟ್ಟಿದ್ದೇವೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಎಲ್ಲರೂ ಶ್ರಮಿಸಬೇಕಿದೆ ಎಂದರು.

 

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಅಧಿಕಾರ ಎಷ್ಟು ಮುಖ್ಯವೋ, ದೇಶ ಉಳಿಸುವುದು ಅಷ್ಟೇ ಮುಖ್ಯವಾಗಿದೆ. 9 ವರ್ಷಗಳಲ್ಲಿ ಮೋದಿ ಸರಕಾರ ಹಲವಾರು ಸುಳ್ಳು ಭರವಸೆಗಳನ್ನು ನೀಡಿ ಒಂದೂ ಭರವಸೆ ಈಡೇರಿಸಿಲ್ಲ. ಜೊತೆಗೆ ದೇಶವನ್ನು ಮಾರುವ ಹಂತಕ್ಕೆ ಒಯ್ದಿದ್ದಾರೆ. ಕಾಂಗ್ರೆಸ್ 70 ವರ್ಷಗಳಲ್ಲಿ ನಿರ್ಮಿಸಿದ ಅನೇಕ ಸಂಸ್ಥೆಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಬಿಜೆಪಿ ಸರಕಾರ ಒಂದೇ ಒಂದು ವಿಶ್ವವಿದ್ಯಾಲಯ, ಆಸ್ಪತ್ರೆ, ಹೊಸ ರೈಲು ಮಾರ್ಗ ಯಾವುದನ್ನೂ ಮಾಡಿಲ್ಲ. ಬುಲೆಟ್ ಟ್ರೇನ್ ಇನ್ನೂ ಗುಜರಾತ್ ನಿಲ್ದಾಣದಲ್ಲೇ ಇದೆ. ಅದಕ್ಕಿನ್ನೂ ಮೋದಿಯವರು ಹಸಿರು ನಿಶಾನೆ ತೋರಿಸಿಲ್ಲ ಎಂದು ಲೇವಡಿ ಮಾಡಿದರು.

ಹಿಂದುತ್ವ ಒಂದೇ ಬಿಜೆಪಿಯ ಅಜೆಂಡಾ ಆಗಿದೆ.  ಚುನಾವಣೆ ಬಂದಾಗ ಸರ್ಜಿಕಲ್ ಸ್ಟ್ರೈಕ್  ಎನ್ನುತ್ತಾರೆ. ಅದನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೃಢಪಡಿಸಲು ಆಗಿಲ್ಲ. ಕಾಂಗ್ರೆಸ್ ಜಾರಿಗೊಳಿಸಿದ್ದ ಅನೇಕ ಜನಪರ ಕಾರ್ಯಕ್ರಮಗಳನ್ನು ಬಿಜೆಪಿ ಸ್ಥಗಿತಗೊಳಿಸಿದೆ.

ಕ್ಷೇತ್ರದ ಜನತೆ ಮೊದಲ ಬಾರಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಯಾವುದೇ ಕೆಲಸ ನೋಡದೆ ಗೆಲ್ಲಿಸಿತ್ತು. ಈಗ ಕಣ್ಣೆದುರು ಸಾಕಷ್ಟು ಕೆಲಸಗಳು ಕಾಣಸಿಗುತ್ತವೆ. ಇನ್ನು ಮುಂದೆ ಆ ಕೆಲಸಗಳೇ ಅವರನ್ನು ಗೆಲ್ಲಿಸಲಿವೆ. ನಾನು ಕ್ಷೇತ್ರಕ್ಕೆ ಹೋಗದಿದ್ದರೂ ನನ್ನನ್ನೂ ನನ್ನ ಕೆಲಸಗಳು ಗೆಲ್ಲಿಸಿವೆ. ಈ ಬಾರಿ ರಾಜ್ಯದಲ್ಲೇ ದಾಖಲೆಯ ಅಂತರದಿಂದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಗೆಲ್ಲಿಸಲು ಪಣತೊಡಿ ಎಂದರು.

ಜಿಲ್ಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಕನಿಷ್ಠ 10ರಿಂದ 12 ಸೀಟುಗಳು, ರಾಜ್ಯದಲ್ಲಿ ಕನಿಷ್ಠ 120 ಸೀಟುಗಳನ್ನು ಗೆಲ್ಲಲೇಬೇಕಿದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

 ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, 70 ವರ್ಷಗಳ ಹಿಂದೆ ಇದ್ದ ಸಮಾಜ, ಸಮುದಾಯಗಳು, ಅವುಗಳ ಸ್ಥಿತಿಗತಿಗಳು ಇದೀಗ ಬದಲಾಗಿರುವ ರೀತಿ ಗಮನಿಸಿದಲ್ಲಿ ಹೆಮ್ಮೆ ಎನಿಸುತ್ತದೆ. ಇಂದು ಹಿಂದುಳಿದ ಮತ್ತು ಪರಿಶಿಷ್ಟ ಜಾತಿ, ಜನಾಂಗಗಳ ಅನೇಕ ಜನ ಹಿರಿಯ ಅಧಿಕಾರಿಗಳಾಗಿ, ಶಿಕ್ಷಕರಾಗಿ ಇರುವುದಕ್ಕೆ ಕಾರಣ ಕಾಂಗ್ರೆಸ್ಸೇ ಹೊರತು ಬಿಜೆಪಿಯಲ್ಲ. ಸ್ವಾತಂತ್ರ್ಯ ಸಿಕ್ಕಾಗ ದೇಶ ದೇಶವಾಗಿರದೆ 563 ತುಂಡುಗಳಾಗಿದ್ದವು.  ಗಾಂಧೀಜಿ, ಅಂಬೇಡ್ಕರರು, ಸುಭಾಷಚಂದ್ರ ಬೋಸ್ ರಂಥ ಮಹನೀಯರು ನಾನಾ ಭಾಷೆ, ನಾನಾ ಸಂಪ್ರದಾಯಗಳನ್ನು ಹೊಂದಿದ್ದ ಪ್ರಾಂತಗಳನ್ನು ಒಗ್ಗೂಡಿಸಿ ದೇಶವನ್ನು ಒಂದುಗೂಡಿಸಿದ್ದಾರೆ. ಊರ ಹೊರಗಿದ್ದ ಪರಿಶಿಷ್ಟರನ್ನು ಗ್ರಾಮದ ಪ್ರಥಮ ಪ್ರಜೆಯಾಗಿಸುವ ಕೆಲಸ ಮಾಡಿದ್ದರೆ ಅದು ಕಾಂಗ್ರೆಸ್ ನಿಂದ ಆಗಿದೆ ಎಂದರು.

ರೋಜಗಾರ್ ಯೋಜನೆಯಂಥ ಅನೇಕ ಮಹತ್ವಪೂರ್ಣ ಯೋಜನೆಗಳನ್ನು ತಂದಿದ್ದು ಕಾಂಗ್ರೆಸ್. ಒಂದು ವರ್ಷಕ್ಕೆ 2 ಕೋಟಿ ಉದ್ಯೋಗಾವಕಾಶ ನೀಡುವುದಾಗಿ ಹೇಳಿದ ಮೋದಿ ಸರಕಾರ ನೋಟು ಅಮಾನ್ಯೀಕರಣಗೊಳಿಸಿ ಜನರನ್ನು ಸಂಕಷ್ಟಕ್ಕೀಡುಮಾಡಿದೆ. ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿ ಆ ಮೇಲೆ ‘ಪಕೋಡ’ ಮಾರಲು ಸಲಹೆ ನೀಡಿದ್ದು ಮೋದಿ ಸರಕಾರ ಎಂದು ಜರಿದರು.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ. ಕಾಂಗ್ರೆಸ್ ಸರಕಾರ ಬಂದ ತಕ್ಷಣ ಪ್ರತಿ ತಿಂಗಳು ಕುಟುಂಬದ ಮುಖ್ಯಸ್ಥೆಗೆ 2 ಸಾವಿರ ರೂ. ನೀಡಲಾಗುವುದು. ರೈತರಿಗೆ ಮಹಿಳೆಯರಿಗೆ ಅನುಕೂಲವಾಗಲು ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ ನೀಡಲಾಗುತ್ತದೆ. ಸ್ತ್ರೀಶಕ್ತಿ ಸಂಘದ ಸಾಲಗಳನ್ನು ಮನ್ನಾ ಮಾಡಲಾಗುವುದು. ಪ್ರತಿ ವ್ಯಕ್ತಿಗೆ 10 ಕೇಜಿ ಅಕ್ಕಿ ನೀಡಲಾಗುವುದು ಎಂದರು.

ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿ, ದೇಶದುದ್ದಕ್ಕೂ ಬಿಜೆಪಿ ಸರ್ಕಾರ ದೌರ್ಜನ್ಯ ಮೇಲೆ ದೌರ್ಜನ್ಯ ಮಾಡುತ್ತಿದೆ. ಇದರಿಂದ ದಲಿತರು, ಹಿಂದುಳಿದ ವರ್ಗದವರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೇಶದಲ್ಲಿ ಎಸ್‌ಸಿ , ಎಸ್‌ಟಿ  ಜನರ ಮೇಲೆ ಶೇಕಡ 26ರಷ್ಟು ದೌರ್ಜನ್ಯ ಹೆಚ್ಚಾಗಿದೆ ಎಂದರು.
ನಾವೆಲ್ಲರೂ ಕೆಲಸ ಮಾಡುತ್ತಿರೋದು ಯಾರೋ ಒಬ್ಬರನ್ನ ಶಾಸಕರು ಮಾಡಲು ಮುಖ್ಯಮಂತ್ರಿ ಮಾಡಲು ಅಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಐದೂವರೆ ಸಾವಿರ ಸರ್ಕಾರಿ ಶಾಲೆ ಮುಚ್ಚಲು ಸರ್ಕಾರ ತಯಾರಿ ನಡೆಸಿದೆ. 75 ಸಾವಿರ ಸರ್ಕಾರಿ ಶಾಲೆಗಳು ಬಿದ್ದು ಹೋಗುವ ಸ್ಥಿತಿ ತಲುಪಿವೆ. ಖಾಸಗಿಯವರಿಗೆ ಸರ್ಕಾರಿ ಆಸ್ಪತ್ರೆ ನಡೆಸಲು ತಯಾರಿ ನಡೆಸಿದ್ದಾರೆ. ಇವತ್ತು ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆ ಖಾಲಿ ಇವೆ. ದಲಿತರು, ಹಿಂದುಳಿದ ವರ್ಗದವರಿಗೆ ಅಲ್ಲಿ ನೌಕರಿ ಸಿಗುತ್ತೆ, ಆದರೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

 

ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಪರಿಶಿಷ್ಟ ಜಾತಿ, ಪಂಗಡಗಳ ಘಟಕಾಧ್ಯಕ್ಷ ಅನಂತಕುಮಾರ ಬ್ಯಾಕೂಡ ಮೊದಲಾದವರು ಮಾತನಾಡಿದರು.

ಜಿಪಂ, ತಾಪಂ ಹಾಗೂ ಗ್ರಾಪಂ ಮಟ್ಟದ ಜನಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಎಲ್ಲ ಸ್ತರಗಳ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

*ಬ್ರಾಹ್ಮಣ ಸಮುದಾಯದ ಬಗ್ಗೆ ಹೇಳಿಕೆ ; ಗೋಕರ್ಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ತರಾಟೆ*

https://pragati.taskdun.com/h-d-kumaraswamybrahmana-samudayaclarification/

*ಬಿಜೆಪಿ ಚುನಾವಣಾ ಸಿದ್ಧತಾ ಕಾರ್ಯಕ್ರಮಗಳಿಗೆ ಜವಾಬ್ದಾರಿ ಹಂಚಿಕೆ; ಉಸ್ತುವಾರಿಗಳ ನೇಮಕ*

https://pragati.taskdun.com/vidhaanasabha-electionbjpprogrrammetweet/

*ರೆಪೊ ದರ ಹೆಚ್ಚಿಸಿದ RBI; ಮನೆ, ವಾಹನ ಸಾಲದ ಬಡ್ಡಿದರದಲ್ಲಿ ಏರಿಕೆ*

https://pragati.taskdun.com/rbirepo-rate-hikes-to-6-5shaktikanth-das/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button