Anvekar add 3.jpg
Gokak Jyotishi add
KLE 1099

ಶಿರೋಳದ ಶಾಸನಸ್ಥ ಉಬ್ಬುಶಿಲ್ಪದಲ್ಲಿ ಶಬರಯೋಧರು

ಉತ್ಖನನ ವೇಳೆ ಸಿಕ್ಕಿದ ಐತಿಹಾಸಿಕ ಕುರುಹುಗಳು

Beereshwara add 22

ಲೇಖನ: 
ಚಿದಂಬರ ಪಿ. ನಿಂಬರಗಿ
ಶಿರೋಳ-ತಾ. ನರಗುಂದ

ಗದಗ ಜಿಲ್ಲೆಯ ನರಗುಂದ ತಾಲೂಕು ಶಿರೋಳ ಗ್ರಾಮ ಮಲಪ್ರಭಾ ನದಿಯ ದಡದಲ್ಲಿದೆ. ಇಲ್ಲಿಯ ತೋಂಟದಾರ್ಯ ಶಾಖಾ ಮಠದ ಆವರಣದ ಉತ್ತರ ಅಂಚಿನಲ್ಲಿ ಒಂದು ಶಾಸನಸ್ಥ ಉಬ್ಬು ಶಿಲ್ಪದ ಶಿಲೆಯಿದೆ. ಹಿಂದೆ ಕಲ್ಲುಗಂಬ ನೆಟ್ಟು, ಅವುಗಳಿಗೆ ಇದನ್ನು ಅಡ್ಡಲಾಗಿ ಆನಿಸಲಾಗಿದೆ. ಮಠದ ಆವರಣದಲ್ಲಿಯ ಮಣ್ಣಿನ ಗುಡ್ಡೆ ಅಗೆಯುವಾಗ (ಕ್ರಿ.ಶ.1986) ಇದು ಹೊರಬಿತ್ತು. ಆಗ ಇದರ ಮೇಲಿನ ಮತ್ತು ಕೆಳಗಿನ 6 ಅಂಗುಲ ಅಗಲದ ಅಂಚಿ ನಲ್ಲಿರುವ ಶಾಸನದ ಅಕ್ಷರಗಳೆಲ್ಲ ಸ್ಪಷ್ಟವಾಗಿದ್ದವು ಎಂದು ಸ್ಥಳೀಯ ಫೋಟೋ ಗ್ರಾಫರ್ ರುದ್ರಯ್ಯ ಹಿರೇಮಠ ಹೇಳುತ್ತಾರೆ. ಈಗ ಬಹುಪಾಲು ಅಕ್ಷರಗಳು ಸವೆದು ಹೋಗಿದೆ. ಅಲ್ಲಲ್ಲಿ ‘ಹ’, ‘ಅ’ ಇತ್ಯಾದಿ ಅಕ್ಷರಗಳು ಕಾಣುತ್ತಿವೆ.

ಇದು ಹಸಿರು ಮಿಶ್ರಿತ ಕರಿ ಕಲ್ಲು, ಉದ್ದ 92”, ಎತ್ತರ 30” ಈ ಕಲ್ಲಿನಲ್ಲಿ ಅಡ್ಡಲಾಗಿ ಮೂರು ಭಾಗ ಮಾಡಿ ಮೂರು ಬೇಟೆಗಾರರ ಸುಂದರ ಶಿಲ್ಪ ಕೆತ್ತಲಾಗಿದೆ. ಈ ವ್ಯಕ್ತಿ ಶಿಲ್ಪದ ಎತ್ತರ 19” ಈ ಮೂರು ಪುರುಷ, ಮೂವರು ಬೇಟೆಗಾರರ ಕೊರಳಲ್ಲಿ, ಮಣಿಸರ, ತಲೆಕಟ್ಟು, ಕೈಕಡಗ, ಕಾಲುಕಡಗ ಒಂದು ಕೈಯಲ್ಲಿ ಕಿರುಗತ್ತಿ, ಕರ್ಣಾಭರಣ ಇವೆ. ಕಿವಿಗಳು ದೊಡ್ಡದಾಗಿವೆ, ಬರಿ ಪಾದಗಳು, ಒಂದನೆಯ ಎರಡನೆಯ ವ್ಯಕ್ತಿಗಳ ತಲೆಯಲ್ಲಿ ಮೂರು ಗರಿಗಳು ಎದ್ದು ನಿಂತಿವೆ. ಮೂರು ವ್ಯಕ್ತಿಗಳ ನಡುವಿನಿಂದ ಇಳಿಬಿದ್ದು ಕೆಳಗೆ ಅಗಲವಾಗುತ್ತ ಹೋದ ಶೆಲ್ಲೆಯಂಥ ವಸ್ತ್ರ (ಎರಡು ಕಾಲುಗಳ ಮಧ್ಯ).
ಮೊದಲಿನ ಹಾಗೂ ಮೂರನೆಯ ವ್ಯಕ್ತಿಗಳ ಭಂಗಿ, ವೇಷಭೂಷಣ ಒಂದೇ ತೆರನಾಗಿದೆ. ಇವರಿಬ್ಬರ ಬಲಗೈಯಲ್ಲಿ ಕಿರುಗುತ್ತಿ ಎಡಗೈಯಲ್ಲಿ ಬಿಲ್ಲು, ಬಲ ಭುಜದ ಹಿಂದೆ ಬಾಣ ತುಂಬಿದ ಬತ್ತಳಿಕೆ, ಸೊಂಟ ಪಟ್ಟಿಗೆ ಇಳಿಬಿದ್ದ ಹಿಡಿಕೆಯುಳ್ಳ ಸ್ವಲ್ಪ ಬಾಗಿದ ಜಂಬೆಯಂತಹ ಚಿಕ್ಕ ಆಯುಧಗಳಿವೆ.

ಆಚೆ ಈಚೆ ಕೈಗಳು ಬಾಚಿಕೊಂಡಿವೆ. ನಡುಕಟ್ಟು ನಡುವಿನಿಂದ ಆಚೆ ಇಚೆ ಇಳಿಬಿದ್ದ ವಸ್ತ್ರ ತೊಡೆಗಳ ಮೇಲೆ ಎರಡು ಮೂರು ಪದರಿನ ಗಗ್ಗರಿಯಂತಹ ಚಣ್ಣದ ಉಡುಪು, ಮಾರುತಿಯ ಠೀವಿಯಲ್ಲಿ ಎರಡು ಕಾಳುಗಳನ್ನು ಅಗಲವಾಗಿಟ್ಟು ಒಂದನ್ನು ತುಸು ಬಗ್ಗಿಸಲಾಗಿದೆ. ಮೂರನೆಯ ಶಬರನ ತಲೆಯಲ್ಲಿ ಗರಿಗಳಿಲ್ಲ. ಬಲಗಡೆ ತುರುಬು ಕಟ್ಟಲಾಗಿದೆ. ಆದರೆ ಸ್ತ್ರೀ ವಿಗ್ರಹವಲ್ಲ. ಮೂರನೆಯ ಯೋಧನ ಪಕ್ಕ ಅವನಿಗಿಂತ ಸ್ವಲ್ಪ ಎತ್ತರವಾದ ಛತ್ರಿಯನ್ನು ಒಬ್ಬ ಸೇವಕ (ಚಿಕ್ಕ ಆಕೃತಿ) ಅದರ ಬುಡದಲ್ಲಿ ಹಿಡಿದಿದ್ದಾನೆ. ಅವನ ಪಕ್ಕ ಇನ್ನೊಬ್ಬ ತಡಿ ಹಾಕಿದ ಕುದುರೆಯ ಲಗಾಮು ಹಿಡಿದಿದ್ದಾನೆ. ಕುದುರೆ ಸ್ವಲ್ಪ ತಲೆ ತಗ್ಗಿಸಿದೆ.

ಮಧ್ಯದ ವ್ಯಕ್ತಿ ನೀಟಾಗಿ ನಿಂತ ಭಂಗಿಯಲ್ಲಿದೆ. ಎರಡೂ ತೊಡೆಗಳ ಮೇಲೆ ಇಳುಕಲಾಗಿ ವ್ಯಾಪಿಸಿದ ಪದರು ಪದರಾದ ಉಡುಪು, ಸೊಂಟದ ಮೇಲೆ ಇಟ್ಟ ಎಡಗೈಯಲ್ಲಿ ಕಿರುಗತ್ತಿ ಇದೆ. ಸೊಂಟದಿಂದ ಎಡಕ್ಕೆ ಇಳಿಬಿದ್ದ ವಸ್ತç, ಎಡ ರಟ್ಟೆಯ ಮೇಲೆ ಹಿಂದೆ ಸ್ವಲ್ಪ ಚಾಚಿದ ದುಂಡಾದ ಬಟ್ಟೆ ಗಂಟಿನಂತಹ ವಸ್ತುವಿದ್ದು ಇದರಿಂದ ಹೊರಟ ಎರಡು ಬಟ್ಟೆ ಲಡ್ಡುಗಳು ರಟ್ಟೆಯಿಂದ ಕೆಳಗೆ ಬಂದು ಬಗಲಲ್ಲಿ ಸೇರಿಕೊಂಡಿವೆ. ಇದು ಏನೆಂಬುದು ಅರ್ಥವಾಗುವುದಿಲ್ಲ. ಬೇಟೆ ಪ್ರಾಣಿ ಇರಲಿಕ್ಕಿಲ್ಲ. ಬಲೆಯ ಗಂಟಿರ ಬಹುದೆ? ಈ ವ್ಯಕ್ತಿಯಲ್ಲಿ ಬಿಲ್ಲು, ಬಾಣ, ಬತ್ತಳಿಕೆ, ಸೊಂಟದಲ್ಲಿ ಜಂಬೆ ಇಲ್ಲ. ಈ ವ್ಯಕ್ತಿಯ ಬಲ ಪಕ್ಕದಲ್ಲಿ ಚಿಕ್ಕ ಮಾನವ ಆಕೃತಿ ಇದೆ. ಇವ ಸೇವಕ ಎಂದು ಅನಿಸುವುದಿಲ್ಲ. ಮಗುವಿನ ಹಾಗೆ ಕಾಣುತ್ತದೆ! ಎರಡನೆಯ ಬೇಟೆಗಾರ ತನ್ನ ಬಲಗೈಯನ್ನು ಇಳಿಬಿಟ್ಟು ಈ ಆಕೃತಿಯ ತಲೆಗೆ ಸ್ಪರ್ಶಿಸುತ್ತಿರುವಂತೆ ಕಾಣುತ್ತದೆ.

ಮೊದಲಿನ ಇಬ್ಬರಲ್ಲಿ ಬೇಟೆಗೆ (ಸಮರಕ್ಕೆ) ಹೊರಡುವ ಸಿದ್ದತೆ ಕಂಡುಬರುತ್ತದೆ. ಕೊನೆಯ ಶಿಲ್ಪದಲ್ಲಿ ಮಹಾ ಬೇಟೆಯಾಡಿ ಬಂದವನನ್ನು ಅಥವಾ ವೈರಿ ಪಡೆ ನಾಶಮಾಡಿ ಬಂದ ನಾಯಕನನ್ನು ಛತ್ರಿಚಾಮರಗಳಿಂದ ಸ್ವಾಗತಿಸಿ ಕುದುರೆ ಹತ್ತಿಸಿ ಮೆರವಣಿಗೆ ಹೊರಡಿಸುವ ಸನ್ನಾಹ ಕಂಡುಬರುತ್ತದೆ. ಇದು ವೀರಗಲ್ಲು (ವಿಜಯಗಲ್ಲು) ಇರಬಹುದೆ?
ಈ ಮೂರೂ ವ್ಯಕ್ತಿ ಶಿಲ್ಪಗಳ ಮೂಗು ಕಣ್ಣು ಬಾಯಿಗಳನ್ನು ಕೆಡಸಿದ್ದರಿಂದ ಮುಖಲಕ್ಷಣಗಳು ಗೊತ್ತಾಗುವುದಿಲ್ಲ. ಉಳಿದ ಎಲ್ಲ ಅವಯವಗಳು ಪ್ರಮಾಣಬದ್ಧವಾಗಿವೆ. ಒಟ್ಟಿನಲ್ಲಿ ಈ ಮೂರು ಸುಂದರ ಶಿಲ್ಪಗಳಾಗಿವೆ.

ಲಕ್ನೋ ಆಗಲಿದೆಯಾ ‘ಲಕ್ಷ್ಮಣಪುರ’?

ಲಕ್ನೋ ಆಗಲಿದೆಯಾ ‘ಲಕ್ಷ್ಮಣಪುರ’?

*ನವವಿವಾಹಿತೆ ಅನುಮಾನಾಸ್ಪದವಾಗಿ ಸಾವು*

*ನವವಿವಾಹಿತೆ ಅನುಮಾನಾಸ್ಪದವಾಗಿ ಸಾವು*

Flipkart ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್

Flipkart ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್

ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ ವಾಟ್ಸಪ್ ಗ್ರುಪ್ ಸೇರಲು 8197712235 ನಂಬರ್ ಗೆ ನ್ಯೂಸ್ ಎಂದು ಮೆಸೇಜ್ ಮಾಡಿ

ಪ್ರಗತಿವಾಹಿನಿ YouTube subscribe ಮಾಡಲು ಇಲ್ಲಿ ಕ್ಲಿಕ್ ಮಾಡಿ