ಪ್ರಗತಿವಾಹಿನಿ ಸುದ್ದಿ, ಶಿರಸಿ: ಐಟಿ, ಬಿಟಿ ಎಂದರೆ ಬೃಹತ್ ನಗರಗಳಿಗಷ್ಟೇ ಸೀಮಿತ. ಅದು ಆ ನಗರದ ಹಾಗೂ ಕಂಪನಿಯ ಪ್ರತಿಷ್ಠೆಯ ಪ್ರಶ್ನೆಯೂ ಹೌದು ಎಂಬ ಭಾವನೆ ದೂರಗೊಳಿಸುವ ವಿದ್ಯಮಾನಕ್ಕೆ ಐಟಿ ಕಂಪನಿಯೊಂದು ಶ್ರೀಗಣೇಶ ಹಾಡಿದೆ.
ದಟ್ಟಾರಣ್ಯಗಳ ತವರೆಂದೇ ಖ್ಯಾತವಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಒಡ್ಡಿನಕೊಪ್ಪದ ಹಸಿರ ಹೊದಿರಿನ ಮಧ್ಯೆ ಆಲ್ಟ್ ಡಿಜಿಟಲ್ ಟೆಕ್ನಾಲಜೀಸ್ ಎಂಬ ಕಂಪನಿ ಪಾದಾರ್ಪಣೆ ಮಾಡುವ ಮೂಲಕ ಹೊಸ ಬೆಳವಣಿಗೆಗೆ ನಾಂದಿ ಹಾಡಿದೆ.
ಐಟಿಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಈ ಕಂಪನಿಯ ಮುಖ್ಯ ಕಚೇರಿ ಇರುವುದು ನೊಯ್ಡಾದಲ್ಲಿ. ಕಂಪನಿ ಪ್ರಾರಂಭವಾಗಿದ್ದು 8 ವರ್ಷಗಳ ಹಿಂದೆ. ಎಲ್ಲ ಬಿಟ್ಟು ಒಡ್ಡಿನಕೊಪ್ಪ ಆಯ್ಕೆ ಮಾಡಿದ್ದೇಕೆ? ಎಂಬ ಪ್ರಶ್ನೆಗೂ ಉತ್ತರವಿದೆ. ಉತ್ತರ ಪ್ರದೇಶದ ವಿಕಾಸ ಗೋಯೆಲ್ ಈ ಕಂಪನಿಯ ಸಂಸ್ಥಾಪಕರು. ಇದರ ಸಹ ಸಂಸ್ಥಾಪಕ ಗೌತಮ್ ಬೆಂಗಳೆ ಅವರು ಬೆಂಗಳೆ ಗ್ರಾಮದವರೇ ಆಗಿರುವುದರಿಂದ ಇಲ್ಲಿ ಶಾಖೆ ತೆರೆಯಲಾಗಿದೆ.
ಐಟಿ ಕಂಪನಿಯ ಶಾಖೆ ಇರುವ ಜಾಗದಲ್ಲಿ ಈ ಮೊದಲು ರೆಸಾರ್ಟ್ ಒಂದು ನಡೆಯುತ್ತಿತ್ತು. ಅದೇ ರೆಸಾರ್ಟ್ ಕಟ್ಟಡವನ್ನು ಇದೀಗ ಐಟಿ ಕಚೇರಿಗೆ ಬದಲಾವಣೆಗೊಳಿಸಿಕೊಂಡಿದ್ದು 50 ಜನ ಕಾರ್ಯನಿರ್ವಹಿಸುವ ವ್ಯವಸ್ಥೆ, ಮೂಲಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು ಫೆ.11ರಂದು ಅಧಿಕೃತ ಆರಂಭಗೊಂಡಿದೆ.
ಕೋವಿಡ್ ಎರಡು ವರ್ಷಗಳ ಅವಧಿಯಲ್ಲಿ ಸೃಷ್ಟಿಸಿದ ಅವಾಂತರಗಳು ಅಷ್ಟಿಷ್ಟಲ್ಲ. ಆದರೆ ಅದೇ ಕೋವಿಡ್ ಅವಧಿಯ ಪ್ರತಿಕೂಲದ ಇದೊಂದು ಧನಾತ್ಮಕ ಬೆಳವಣಿಗೆ ಕಾರಣವಾಗಿದ್ದು ಸತ್ಯ.
ಕೋವಿಡ್ ಅವಧಿಯಲ್ಲಿ ವರ್ಕ್ ಫ್ರಂ ಹೋಂ ಜಾರಿಗೆ ಬಂತು. ಈ ವೇಳೆ ಕಂಪನಿ ಬಳಿ ಕೈತುಂಬ ಕೆಲಸಗಳಿದ್ದವು. ಇದಕ್ಕಾಗಿ ಸ್ಥಳೀಯವಾಗಿ ಎಂಜಿನಿಯರ್ ಗಳ ತಲಾಶೆ ನಡೆಸುವುದು ಅನಿವಾರ್ಯವಾಯಿತು. ಜಿಲ್ಲೆಯ ಅನೇಕ ಯುವ ಎಂಜಿನಿಯರ್ ಗಳು ಕೆಲಸ ಅರಸಿ ವಿವಿಧ ನಗರಗಳಿಗೆ ವಲಸೆ ಹೋಗಿದ್ದಾರೆ. ಕುಟುಂಬದಿಂದ ದೂರವಿದ್ದು ಬೇಸರಗೊಂಡಿರುವ ಅವರಿಗೂ ಪೂರಕವಾಗುವಂತೆ ಇಂಥವರನ್ನೆಲ್ಲ ಕಲೆ ಹಾಕಿ ಇಲ್ಲೇ ಕೆಲಸ ನೀಡುವ ಆಲೋಚನೆ ಮೊಳೆತು ಅದನ್ನು ಸಾಕಾರಗೊಳಿಸಲಾಗಿದೆ.
ಪ್ರಸ್ತುತ ಇಲ್ಲಿ ಉಡುಪಿ ಜಿಲ್ಲೆಯ ಒಬ್ಬರು ಬಿಟ್ಟರೆ ಉಳಿದೆಲ್ಲವರೂ ಬೆಂಗಳೆ ಸುತ್ತಮುತ್ತಲಿನ ಗ್ರಾಮದವರೆಂಬುದು ಗಮನಾರ್ಹ. ಇವರೆಲ್ಲ ಕಂಪನಿಯಿಂದ ತರಬೇತಿ ಪಡೆದು ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕ, ಮೆಕ್ಸಿಕೊ, ಆಸ್ಟ್ರೇಲಿಯಾ ಮೊದಲಾದ ದೇಶಗಳ ಪ್ರತಿಷ್ಠಿತ ಕಂಪನಿಗಳಿಗೆ ಇಲ್ಲಿಂದ ಸಾಫ್ಟ್ ವೇರ್ ಅಭಿವೃದ್ಧಿಗೊಳಿಸಿ ನೀಡುವುದಲ್ಲದೆ ಅದನ್ನು ನಿರ್ವಹಣೆ ಮಾಡಲಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಐಟಿ ಕಂಪನಿ ಸ್ಥಾಪನೆಯಾಗುವುದರಿಂದ ಯಾವ ಅಡಚಣೆಯೂ ಆಗದು ಎನ್ನುತ್ತಾರೆ ಆಲ್ಟ್ ಡಿಜಿಟಲ್ ಟೆಕ್ನಾಲಜೀಸ್ ಸಹಸಂಸ್ಥಾಪಕ ಗೌತಮ್ ಬೆಂಗಳೆ. ಒಂದು ಕಂಪನಿಯ ಈ ಯಶಸ್ಸು ಇನ್ನಷ್ಟು ಐಟಿ ಕಂಪನಿಗಳಿಗೆ ಪ್ರೇರಣೆಯಾಗಿ ಇನ್ನು ಮುಂದೆ ಐಟಿ ಕಂಪನಿಗಳು ಗ್ರಾಮೀಣದಲ್ಲೂ ದಾಂಗುಡಿ ಇಡತೊಡಗಿದರೆ ಅಂಥ ಪ್ರಯತ್ನದ ಮೊದಲ ಶ್ರೇಯಸ್ಸು ಸಲ್ಲುವುದು ಆಲ್ಟ್ ಡಿಜಿಟಲ್ ಟೆಕ್ನಾಲಜೀಸ್ ಕಂಪನಿಗೆ. ಜೊತೆಗೆ ಇಂಥದ್ದೊಂದು ಕ್ರಾಂತಿಕಾರಕ ಬೆಳವಣಿಗೆಯ ಶ್ರೇಯಸ್ಸು ಈ ಕಂಪನಿ ಪಾಲಿಗಿರಲಿದೆ.
*ಭಾರತ ಜಾಗತಿಕ ನಾಯಕನಾಗಲು ಕರ್ನಾಟಕ ಅತ್ಯಂತ ದೊಡ್ಡ ಕೊಡುಗೆ ನೀಡಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
https://pragati.taskdun.com/aero-india-show-2023cm-basavaraj-bommaipm-narendra-modiyalahankabangalore/
*ಟಿಕೆಟ್ ಗಾಗಿ ಪೈಪೋಟಿ; ಭಿನ್ನಮತ; ಕಾಂಗ್ರೆಸ್ ಒಳ ಜಗಳಕ್ಕೆ ಪ್ರಜಾಧ್ವನಿ ಸಮಾವೇಶವೇ ರದ್ದು*
https://pragati.taskdun.com/kundagolaprajadwani-samaveshcanncelcongress/
ಬರೀ ಒಂದು ಕ್ಯಾಚ್ ನಲ್ಲಿ ಖ್ಯಾತಿಯನ್ನೇ ಬಾಚಿದ ಬೆಳಗಾವಿ ಯುವಕ
https://pragati.taskdun.com/belgaum-youth-who-rose-to-fame-in-just-one-catch/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ