ಪ್ರಗತಿವಾಹಿನಿ ಸುದ್ದಿ; ಹಾಸನ: ಕಾಡ್ಗಿಚ್ಚು ನಂದಿಸಲು ಹೋಗಿದ್ದ ಫಾರೆಸ್ಟ್ ಗಾರ್ಡ್ ಬೆಂಕಿಗಾಹುತಿಯಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಪಶ್ಚಿಮ ಘಟ್ಟದ ಕಾಡ್ಗಿಚ್ಚಿಗೆ ಸಿಲುಕಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ ಸುಂದರೇಶ್, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್ ಬಳಿ ಫೆ.16ರಂದು ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಬೆಂಕಿ ನಂದಿಸಲು ಡಿಆರ್ ಎಫ್ ಒ ಮಂಜುನಾಥ್ ನೇತೃತ್ವದಲ್ಲಿ 6 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಹೋಗಿದ್ದರು. ವೇಗವಾಗಿ ಹರಡುತ್ತಿದ್ದ ಕಾಡ್ಗಿಚ್ಚು ಸಿಬ್ಬಂದಿಗಳನ್ನೇ ಸುತ್ತಿವರೆದಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗಾಯಗೊಂಡಿದ್ದರು. ಡಿ ಆರ್ ಎಫ್ ಓ ಮಂಜುನಾಥ್ ಹಾಗೂ ಸುಂದರೇಶ್ ಬಹುತೇಕ ಬೆಂದು ಹೋಗಿದ್ದರು. ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನೂ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಫಾರೆಸ್ಟ್ ಗಾರ್ಡ್ ಸುಂದರೇಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಬೆಳಗಾವಿ ಪಿಎಸ್ಐ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ