Latest

*ಕರ್ನಾಟಕ ಬಿಜೆಪಿ ಸರ್ಕಾರದಿಂದ ಐತಿಹಾಸಿಕ ದ್ವೇಷ ರಾಜಕಾರಣ – ರಾಯಪುರದ ಎಐಸಿಸಿ ಅಧಿವೇಶನದಲ್ಲಿ ಡಿ.ಕೆ.ಶಿವಕುಮಾರ್*

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ದೇಶಕ್ಕೆ ಸಂದೇಶ ರವಾನೆ ಮಾಡುತ್ತೇವೆ

ಪ್ರಗತಿವಾಹಿನಿ ಸುದ್ದಿ; ರಾಯ್ಪುರ: ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಒಂದು ಕಾಲದಲ್ಲಿ ಗುಲ್ವರ್ಗದ ಬ್ಲಾಕ್ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸ. ಅವರ ಸುದೀರ್ಘ 50 ವರ್ಷಗಳ ಪಯಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶ್ರಮಿಸುತ್ತಾ ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಛತ್ತೀಸಗಢ ರಾಯಪುರದ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷ ಬೇರೆ ಪಕ್ಷಗಳಿಗಿಂತ ಪ್ರಜಾಪ್ರಭುತ್ವ ಮಾದರಿಯಲ್ಲಿ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ತಾಲೂಕು ಯೂತ್ ಕಾಂಗ್ರೆಸ್ ಸದಸ್ಯನಾಗಿದ್ದ ನನಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಸೋನಿಯಾ ಗಾಂಧಿ ಅವರಿಗೆ ಧನ್ಯವಾದಗಳು.

ಭಾರತದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳದ ರೀತಿಯಲ್ಲಿ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದ್ದು, ವಿರೋಧ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು, ಚಿದಂಬರಂ ಅವರನ್ನು ಬಿಜೆಪಿಯವರು ತಿಹಾರ್ ಜೈಲಿಗೆ ಹಾಕಿದ್ದರು. ತಾಯಿ ಸೋನಿಯಾ ಗಾಂಧಿ ಅವರು ಅಲ್ಲಿಗೆ ಬಂದು ನಮ್ಮನ್ನು ಭೇಟಿ ಮಾಡಿ ನಮಗೆ ಶಕ್ತಿ ತುಂಬಿದರು. ಇದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವು ಸದಾ ಗಾಂಧಿ ಕುಟುಂಬಕ್ಕೆ ಚಿರಋಣಿಯಾಗಿರುತ್ತೇವೆ ಎಂದರು.

ರಾಹುಲ್ ಗಾಂಧಿ ಅವರು ದೇಶದುದ್ದಕ್ಕು ಪಾದಯಾತ್ರೆ ಮಾಡಿದ್ದಾರೆ. ಪಕ್ಷ ಸಂಕಷ್ಟದಲ್ಲಿ ಇರುವ ಸಮಯದಲ್ಲಿ ಅವರು ಭಾರತ ಜೋಡೋ ಯಾತ್ರೆ ಮಾಡಿದರು. ಏಕಕಾಲಕ್ಕೆ 3500 ಕಿ.ಮೀ ಪಾದಯಾತ್ರೆ ದೇಶದ ಇತಿಹಾಸದಲ್ಲೇ ಮೊದಲು. ಯಾವುದೇ ಪಕ್ಷ ಅಥವಾ ನಾಯಕರು ಇಂತಹ ಸಾಹಸ ಮಾಡಿಲ್ಲ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಈ ಪಾದಯಾತ್ರೆ ಮೂಲಕ ದೇಶದ ಜ್ವಲಂತ ಸಮಸ್ಯೆಗಳಾದ ಕೋಮು ಸಂಘರ್ಷ, ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಧ್ವನಿ ಎತ್ತಿ ದೇಶದ ಜನ ಕಾಂಗ್ರೆಸ್ ಮೇಲೆ ನಂಬಿಕೆ ಇಡುವಂತೆ ಮಾಡಿದ್ದಾರೆ. ದೇಶದ ಎಲ್ಲ ಕಾಂಗ್ರೆಸಿಗರ ಪರವಾಗಿ ನಮಗೆ ಶಕ್ತಿ ತುಂಬಿದ್ದಕ್ಕಾಗಿ, ಕಾರ್ಯಕರ್ತನಂತೆ ಶ್ರಮಿಸುತ್ತಿರುವುದಕ್ಕೆ ಧನ್ಯವಾದಗಳು. ಅವರು ಪ್ರಧಾನ ಮಂತ್ರಿ ಹುದ್ದೆ ತ್ಯಾಗಮಾಡಿದ್ದಾರೆ.

ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಪ್ರಧಾನಮಂತ್ರಿಯಾಗಿ ಸರ್ಕಾರ ರಚನೆಗೆ ಆಹ್ವಾನ ನೀಡಿದಾಗ ಅವರು ದೇಶದ ಹಿತಕ್ಕಾಗಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಹುದ್ದೆ ನೀಡಿದರು. ಇದು ಕಾಂಗ್ರೆಸ್ ಪಕ್ಷದ ಇತಿಹಾಸ. ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರದಲ್ಲಿ ನರೇಗಾ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕಿನಂತಹ ಕ್ರಾಂತಿಕಾರಿ ಯೋಜನೆ ನೀಡಲಾಯಿತು.

ಕಾಂಗ್ರೆಸ್ ಪಕ್ಷ ಏನು ಮಾಡಿಲ್ಲ ಎಂದು ಕೆಲವರು ಹೇಳುತ್ತಾರೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸಂವಿಧಾನ, ಜನಪರ ತಿದ್ದುಪಡಿ ಮಾಡಿ ದೇಶವನ್ನು ಜಾಗತಿಕ ಮಟ್ಟದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಿದೆ. ಇಂದು ಕರ್ನಾಟಕ ರಾಜ್ಯ ಚುನಾವಣೆ ಎದುರಿಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ದೇಶಕ್ಕೆ ಸಂದೇಶ ರವಾನೆ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಸೋನಿಯಾ ಗಾಂಧಿ ಅವರಿಗೆ ಭರವಸೆ ನೀಡುತ್ತೇನೆ.

ಕರ್ನಾಟಕದಲ್ಲಿ ನಾವು 3 ಪ್ರಮುಖ ಯೋಜನೆ ಘೋಷಣೆ ಮಾಡಿದ್ದು, ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ, ಪ್ರತಿ ಮನೆಯೊಡತಿಗೆ ತಿಂಗಳಿಗೆ 2000 ಆರ್ಥಿಕ ನೆರವು, ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ 10 ಕೆ.ಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಘೋಷಿಸಿದ್ದೇವೆ.

ಬಿಜೆಪಿ ಸರ್ಕಾರ ತಾನು ಕೊಟ್ಟ ಮಾತು ಉಳಿಸಿಕೊಳ್ಳಲು ವಿಫಲವಾಗಿದ್ದು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯಲಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದ ಮೂಲಕ ಅಧಿಕಾರಕ್ಕೆ ಬರಲಿದೆ.

ನಿಸರ್ಗದೊಂದಿಗೆ ಚಲ್ಲಾಟ ಬೇಡ – ದತ್ತಾತ್ರಯ ಹೊಸಬಾಳೆ

https://pragati.taskdun.com/dont-mess-with-nature-dattatreya-hosabale/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button