ಸಿಎಂ ಕೈಯಲ್ಲಿ ಅಪೂರ್ಣ ಮೂರ್ತಿ ಉದ್ಘಾಟನೆ ಮಾಡಿಸಿ ಶಿವಾಜಿ ಮಹಾರಾಜರಿಗೆ, ಶಿವಾಜಿ ಭಕ್ತರಿಗೆ ಅವಮಾನ ಮಾಡಿದ್ದಾರೆ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇನ್ನೂ ಪೇಂಟಿಂಗ್ ಕೂಡ ಆಗದ ಮೂರ್ತಿಯನ್ನು, ಬಣ್ಣದ ಡಬ್ಬಿ, ಕಸಬರಿಗೆಗಳನ್ನೂ ಸ್ಥಳದಿಂದ ತೆಗೆಸದೆ, ರಾಜಕೀಯ ಕಾರಣಕ್ಕಾಗಿ ಮುಖ್ಯಮಂತ್ರಿಗಳನ್ನು ಕರೆಸಿ ಉದ್ಘಾಟಿಸುವ ಮೂಲಕ ಶಿವಾಜಿ ಮಹಾರಾಜರಿಗೆ, ಲಕ್ಷಾಂತರ ಶಿವಭಕ್ತರಿಗೆ ಅವಮಾನ ಮಾಡಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ರಮೇಶ ಜಾರಕಿಹೊಳಿ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯವಾದ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ಅತ್ಯಂತ ಭಾವಕರಾದ ಲಕ್ಷ್ಮೀ ಹೆಬ್ಬಾಳಕರ್, ಶಿವಾಜಿ ಮಹಾರಾಜರ ಪುತ್ಥಳಿ ಸ್ಥಾಪನೆಗೆ ಕೈ ಹಾಕಿದ ತಮಗೆ ವಿರೋಧಿಗಳು ಕೊಟ್ಟ ಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಪುತ್ಥಳಿ ಸ್ಥಾಪನೆಯ ಹಿನ್ನೆಲೆಯಲ್ಲಿ ತಮ್ಮ ಮೇಲೆ 2 ಪ್ರಕರಣ ದಾಖಲಿಸಲಾಗಿದೆ ಎಂದೂ ನೊಂದು ನುಡಿದರು.
ರಾಜಕಾರಣದ ಏಳು ಬೀಳುಗಳ ಮಧ್ಯೆ ನಾನು ಮನೆಯಲ್ಲಿ ಕೂಡ್ರದೆ ಜನರ ಸೇವೆಯಲ್ಲಿ ತೊಡಗಿಕೊಂಡೆ. 2 ಚುನಾವಣೆಯಲ್ಲಿ ಸೋತರೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಕ್ಷೇತ್ರದ ಜನರ ಸೇವೆ ಮಾಡುತ್ತೇನೆಂದು ಶಪಥ ಮಾಡಿದ್ದೆ. ಆದರೆ ಗೋಕಾಕ ಶಾಸಕ ಮತ್ತು ಮಾಜಿ ಶಾಸಕ ಸಂಜಯ ಪಾಟೀಲ ಕೊಡಬಾರದ ಕಷ್ಟ ಕೊಡುತ್ತಿದ್ದಾರೆ. ಅದರ ಮಧ್ಯೆಯೂ ಮಹಾರಾಜರ ಮೂರ್ತಿ ಲೋಕಾರ್ಪಣೆಯಾಗಿದ್ದರಿಂದ ನಾನು ಭಾವುಕಳಾಗಿದ್ದೇನೆ ಎಂದು ವಿವರಿಸಿದರು.
ನನಗೆ ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ ಅವರ ಬಗ್ಗೆ ಸಾಕಷ್ಟು ಗೌರವ ಇದೆ. ಆದರೆ ಅವರ ಮೇಲೆ ರಾಜಕೀಯ ಒತ್ತಡ ಹಾಕಿ, ದಿಕ್ಕು ತಪ್ಪಿಸಿ, ಇನ್ನೂ ಕೇವಲ ಪ್ರೈಮರ್ ಹೊಡೆಯಲಾಗಿದ್ದ ಅಪೂರ್ಣ ಮೂರ್ತಿಯನ್ನು ಉದ್ಘಾಟನೆ ಮಾಡಿಸಿದರು. ಈ ಇಬ್ಬರೂ ಇಲ್ಲಿಗೆ ಬಂದು ಎಷ್ಟು ಕೆಲಸ ಆಗಿದೆ, ಏನೇನು ಬಾಕಿ ಇದೆ ನೋಡಲಿಲ್ಲ. ಕಸಬರಿಗೆ, ಬಣ್ಣದ ಬಕೆಟ್ ಇನ್ನು ಶಿವಾಜಿ ಪುತ್ಥಳಿಯ ಪಕ್ಕದಲ್ಲಿ ಹಾಗೆಯೇ ಇತ್ತು. ಹಾಗೆಯೇ ಉದ್ಘಾಟನೆ ಮಾಡಿಸುವ ಮೂಲಕ ಶಿವಾಜಿ ಮಹಾರಾಜರಿಗೆ, ಲಕ್ಷಾಂತರ ಶಿವಭಕ್ತರಿಗೆ ಘೋರ ಅವಮಾನ, ಅಪರಾಧ ಮಾಡಿದರು ಎಂದು ಹೆಬ್ಬಾಳಕರ್ ಹೇಳಿದರು.
ಶಿವಾಜಿ ಮಹಾರಾಜರು ಮಹಿಳೆಯರಿಗೆ ಅತ್ಯಂತ ಗೌರವ ಕೊಡುತ್ತಿದ್ದರು. ಅವರ ಸಂದೇಶ, ಮಹಿಳೆಯರ ಬಗೆಗಿನ ನೀತಿ ಎಲ್ಲರಿಗೂ ಆದರ್ಶವಾಗಿತ್ತು. ಆದರೆ ಈಗ ಮಹಿಳೆಗೆ ಏನೇನು ಮಾಡುತ್ತಿದ್ದಾರೆ ನೋಡಿ. ಇವರೂ ಶಿವಭಕ್ತರಂತೆ. ಶಿವಾಜಿ ಮಹಾರಾಜರ ಮಾರ್ಗದಲ್ಲಿ ಹೋಗದಿದ್ದ ಇವರೆಲ್ಲ ಡೊಂಗಿ ಶಿವಭಕ್ತರು ಎಂದು ಕಿಚಾಯಿಸಿದರು.
ನಾನು ಇಲ್ಲಿಯ ಕುಲದೇವರು ಸಿದ್ದೇಶ್ವರರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಂತಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಮಾಡಿ ಅನುದಾನ ಬಿಡುಗಡೆ ಆದೇಶ ಹೊರಡಿಸಿದೆ. ನಂತರ ಬಿಜೆಪಿ ಸರಕಾರ ಬಂದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿ ಹಣ ಬಿಡುಗಡೆ ಮಾಡಿಸಿದೆ. ಆದರೆ ನಂತರ ಪ್ರವಾಹ, ಕೊರೋನಾ ಕಾರಣದಿಂದಾಗಿ ಕೆಲಸ ವಿಳಂಬವಾಯಿತು ಇಲ್ಲವಾದಲ್ಲಿ ಈಗ 2 ವರ್ಷದ ಹಿಂದೆಯೇ ಈ ಪುತ್ಥಳಿ ಉದ್ಘಾಟನೆ ನಡೆಯುತ್ತಿತ್ತು. ನಾನು ದೇವರ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ಜನರೇ ನನ್ನ ಪಾಲಿನ ದೇವರು. ನಿಮ್ಮೆಲ್ಲರ ಸಹಕಾರದಿಂದಾಗಿ ಈ ಮೂರ್ತಿ ಉದ್ಘಾಟನೆ ನನ್ನ ಭಾಗ್ಯ ಎಂದು ಹೇಳಿದರು.
ಮುಂದೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ನಂಬರ್ 1 ಮಾಡುವುದೇ ನನ್ನ ಗುರಿ. ಇಲ್ಲಿ ಬಿಸಿಲಿನಲ್ಲಿ ಜನರು ನಿಂತಿದ್ದನ್ನು ನೋಡಿ ನನಗೆ ಹೊಟ್ಟೆ ಉರಿಯುತ್ತದೆ. ನಿಮ್ಮ ತ್ಯಾಗವನ್ನು ಎಂದಿಗೂ ಮರೆಯುವುದಿಲ್ಲ ಎಂದು ಭರವಸೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ