Kannada NewsKarnataka NewsLatest

ಸಾಹಿತಿಯಾದವರಿಗೆ ಸಾಮಾಜಿಕ ಹೊಣೆಗಾರಿಕೆಯಿರಲಿ: ಡಾ. ಯಲ್ಲಪ್ಪ ಹಿಮ್ಮಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಸಾಹಿತಿಯಾದವರಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು ಮತ್ತು ಬರಹ-ಬದುಕಿನ ನಡುವೆ ಭಿನ್ನತೆ ಇರಬಾರದು ಎಂಬುದನ್ನು ಗಟ್ಟಿಯಾಗಿ ಮೊದಲು ಬಾರಿಗೆ ಪ್ರತಿಪಾದಿಸಿದ್ದು ಬಂಡಾಯ ಸಾಹಿತ್ಯ ಚಳವಳಿ. ಅಂತಹ ಬಂಡಾಯ ಸಾಹಿತ್ಯ ಚಳವಳಿಗೆ ಈಗ 44ರ ಪ್ರಾಯ ತುಂಬಿದ್ದು ಅಭಿಮಾನದ ಸಂಗತಿಯಾಗಿದೆ” ಎಂದು ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.

ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ “ಬಂಡಾಯ – 44, ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿ” ಕಾರ್ಯಕ್ರಮದಲ್ಲಿ ಬಂಡಾಯ ಸಾಹಿತ್ಯ-ಚಾರಿತ್ರಿಕ ಹಿನ್ನೆಲೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, “ಬಂಡಾಯ ಸಾಹಿತಿಗಳಿಗೆ ಬದುಕು ಮತ್ತು ಬರಹ ಒಂದೇ ಆಗಿದ್ದರ ಫಲ ಹಾಗೂ ಬದುಕಿನ ಕಂಟಕಗಳ ವಿಮೋಚನೆಗಾಗಿ ಸಾಹಿತ್ಯ ಮತ್ತು ಕಲೆಗಳನ್ನು ಸಾಧನಗಳನ್ನಾಗಿ ಬಳಸಿಕೊಂಡಿದ್ದರ ಪರಿಣಾಮವಾಗಿ 44 ವರ್ಷಗಳ ನಂತರವೂ ಬಂಡಾಯ ಚಳುವಳಿ ಜನರ ನಡುವೆ ಇಂದೂ ಚಲನಶೀಲವಾಗಿದೆ. ಹೀಗಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವವರು ಸಾಮಾಜಿಕ ಸಂಕಟ ಮತ್ತು ರಾಜಕೀಯ ಬಿಕ್ಕಟ್ಟುಗಳನ್ನು ನಿವಾರಿಸಲು ಸಾಹಿತ್ಯ ರಚಿಸಬೇಕು. ಉತ್ತಮ ಸಾಹಿತಿಯಾಗಬೇಕೆಂದು ಬಯಸುವವರು ಮೊದಲು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಅಂದಾಗ ಮಾತ್ರ ಸಾಹಿತ್ಯಕ್ಕೂ ಮತ್ತು ಸಾಹಿತಿಗೂ ಸಾಮಾಜಿಕ ಮನ್ನಣೆ ದೊರೆಯುತ್ತದೆ” ಎಂದು ಯುವ ಬರಹಗಾರರಿಗೆ ಕಿವಿಮಾತು ಹೇಳಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಿ ಜಯಾನಂದ ಮಾದರ ಅವರು ಮಾತನಾಡಿ, ” ಇಲ್ಲಿ ವಾಚಿಸಿದ ಎಲ್ಲಾ ಕವಿತೆಗಳು ಪ್ರಬುದ್ಧತೆಯಿಂದ ಕೂಡಿದ್ದು ಸಮಕಾಲೀನ ಸವಾಲುಗಳಿಗೆ ತೀವ್ರತರ ಪ್ರತಿರೋಧ ಒಡ್ಡಿವೆ. ಯುವಕವಿಗಳು ನಮ್ಮ ಜಿಲ್ಲೆಗೆ ಇಂಥ ಬಹುದೊಡ್ಡ ಕೊಡುಗೆ ನೀಡುವ ಬರವಸೆ ಹೆಚ್ಚಿಸಿದ್ದಾರೆ. ಬಹುತೇಕ ಪ್ರಗತಿಪರ ಚಳವಳಿಗಳು ನೇಪಥ್ಯಕ್ಕೆ ಜಾರಿರುವ ಈ ಸಂದಿಗ್ದ ಸಂದರ್ಭದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಹೊಸಬರಿಗೆ ಬಹು ದೊಡ್ಡ ಆಸರೆ ಮತ್ತು ಆದರ್ಶವಾಗಿದೆ. ಬರಹಗಾರರು ಸಂಘಟನೆಯ ಜೊತೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಧ್ವನಿ ಇರದ ಸಮುದಾಯದ ಧ್ವನಿಯಾಗಿ ನಿಂತು ಅವರಿಗೆ ಸಂವಿಧಾನಾತ್ಮಕ ಹಕ್ಕುಗಳನ್ನು ತಲುಪಿಸಬೇಕು” ಎಂದು ಕರೆ ನೀಡಿದರು.
ಕವಿಗೋಷ್ಠಿಯಲ್ಲಿ ಅರ್ಜುನ ನಿಡಗುಂದೆ, ಮನೋಹರ ಕಾಂಬ್ಳೆ, ಸಿದ್ದರಾಮ ತಳವಾರ, ಪಲ್ಲವಿ ಕಾಂಬಳೆ, ರಾಜು ಸನದಿ, ತೇಜಸ್ವಿನಿ ಲೋಕುರೆ, ಮೆಹಬೂಬ ಸುಭಾನಿ ನತ್ತು ಪಸಾರಿ, ಉಮೇಶ ಮೇಲ್ಕೇರಿ, ಶಿವರಾಜ ಕಾಂಬಳೆ, ಹನುಮಂತ ಯರಗಟ್ಟಿ, ವಿನಾಯಕ ನಂದಿ ಮುಂತಾದವರು ಕವಿತೆ ವಾಚಿಸಿದರು.

ಕಾರ್ಯಕ್ರಮದಲ್ಲಿ ಸಂತೋಷ ಉಂಡಾಡಿ, ನೀಲಕಂಠ ಭೂಮನ್ನವರ, ಲಕ್ಷ್ಮಣ ಪಟಾಯಿತ, ಮಾರುತಿ ಅಕ್ಕೆನ್ನವರ, ಕವಿತಾ ಕಾಂಬಳೆ, ಸರಸ್ವತಿ ಆಲಖನೂರೆ, ಶಿಲ್ಪಾ ಘೇನಣ್ಣವರ, ಆಕಾಶ ಬೇವಿನಕಟ್ಟಿ, ಉದಯ ಗಾಣಿಗೇರ, ಶ್ರೀನಾಥ ಕಾಂಬಳೆ, ಪ್ರಕಾಶ ಬೊಮ್ಮಣ್ಣವರ, ತನ್ಮಯ ಬಾಗೇವಾಡಿ ಮುಂತಾದವರು ಉಪಸ್ಥಿತರಿದ್ದರು.

ವಿಶೇಷ ಉಪನ್ಯಾಸಕ್ಕೆ ಶಂಕರ ಬಾಗೇವಾಡಿ ಪ್ರಾಸ್ತಾವಿಕ ನುಡಿ ಮತ್ತು ಕವಿಗೋಷ್ಠಿಗೆ ಕವಿ ನದೀಮ್ ಸನದಿ ಆಶಯ ನುಡಿಗಳನ್ನಾಡಿದರು. ಪ್ರಮೋದ ತಳವಾರ ಹಾಗೂ ಸಂಗಡಿಗರು ಕ್ರಾಂತಿ ಗೀತೆ ಹಾಡಿದರು. ಬಂಡಾಯ ಸಂಘಟನೆಯ ಜಿಲ್ಲಾ ಸಂಚಾಲಕ ದೇಮಣ್ಣ ಸೊಗಲದ ಸ್ವಾಗತಿಸಿದರು.ವಿದ್ಯಾರ್ಥಿ ಘಟಕದ ಸಂಚಾಲಕರಾದ ಮಂಜುನಾಥ ಪಾಟೀಲ್ ನಿರೂಪಿಸಿದರು. ಬಾಲಕೃಷ್ಣ ನಾಯಕ ವಂದಿಸಿದರು.

https://pragati.taskdun.com/v-somannaemotionalpressmeet/
https://pragati.taskdun.com/cm-basavaraj-bommaiclarificationkoppala/
https://pragati.taskdun.com/urigowdananjegowdadwara-isuedgp-praveen-soodd-k-shivakumar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button