ಗ್ರಾಮೀಣದಲ್ಲಿ ನಗರದ ಸೌಲಭ್ಯ ಕಲ್ಪಿಸಿದ ಜೊಲ್ಲೆ ದಂಪತಿ ಕಾರ್ಯ ಶ್ಲಾಘನೀಯ: ನಿಡಸೋಸಿ ಶ್ರೀ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: “ನಗರ ಪ್ರದೇಶದಲ್ಲಿ ಲಭ್ಯ ಸೌಲಭ್ಯಗಳನ್ನು ಗ್ರಾಮೀಣ ಜನರಿಗೆ ತಲುಪಿಸುವ ಕೆಲಸವನ್ನು ಜೊಲ್ಲೆ ದಂಪತಿಗಳು ಮಾಡುತ್ತಿರುವುದು ಶ್ಲಾಘನೀಯ” ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಸೋಮವಾರ ಸಂಜೆ ಯಕ್ಸಂಬಾ ಪಟ್ಟಣದ ಹೊರವಲಯದಲ್ಲಿ ಹೈಟೆಕ್ ಬೀರೇಶ್ವರ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
“ಕಳೆದ 30 ವರ್ಷಗಳ ಹಿಂದೆ ಜೊಲ್ಲೆಯವರು ರೈತರ ಶ್ರೇಯೋಭಿವೃದ್ಧಿಯ ಕನಸನ್ನು ನನಸು ಮಾಡುವ ಒಂದು ನಿರ್ದಿಷ್ಠ ಗುರಿಯನ್ನಿಟ್ಟುಕೊಂಡು ಬೀರೇಶ್ವರ ಸಹಕಾರಿ ಸಂಸ್ಥೆಯನ್ನು ಪ್ರಾರಂಭಿಸಿ ತನ್ಮೂಲಕ ಇಂದು ಶಿಕ್ಷಣ, ಉದ್ದಿಮೆ, ಧಾರ್ಮಿಕ, ಕ್ರೀಡಾಕ್ಷೇತ್ರದಲ್ಲಿ ಜನರಿಗೆ ತನ್ನದೇ ಆದ ಸೇವೆ ನೀಡುತ್ತಿದ್ದಾರೆ. ಲೋಕಾರ್ಪಣೆಗೊಂಡಿರುವ ಬೀರೇಶ್ವರ ಸಭಾಭವನ ಸಂಪೂರ್ಣ ಹವಾನಿಯಂತ್ರಿತವಿದ್ದು ಈ ಭಾಗದ ಜನ ಅದನ್ನು ಚೆನ್ನಾಗಿ ಬೆಳೆಸಿಕೊಳ್ಳಬೇಕು,” ಎಂದರು.
ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಅಣ್ಣಾಸಾಹೇಬ ಜೊಲ್ಲೆ ಅವರು ಕಳೆದ 32 ವರ್ಷಗಳ ಹಿಂದೆ ಬೀರೇಶ್ವರ ಸಹಕಾರಿ ಸಂಸ್ಥೆ ಎಂಬ ಒಂದು ಸಣ್ಣ ಸಸಿ ನೆಟ್ಟಿದ್ದರು. ಅದು ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದು ಬೀರೇಶ್ವರ ಭವನ ಲೋಕಾರ್ಪಣೆಗೊಳ್ಳುತ್ತಿರುವುದು ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದೆ ಎಂದರು.
ಬೀರೇಶ್ವರ ಸಂಸ್ಥೆ ಇಂದು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 154 ಶಾಖೆಗಳನ್ನು ಹೊಂದಿದ್ದು ಬರುವ ದಿನಗಳಲ್ಲಿ ಗೋವಾ ರಾಜ್ಯಕ್ಕೆ ಕಾಲಿಡಲಿದೆ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, “ಬೀರೇಶ್ವರ ಭವನ ಎರಡು ಅಂತಸ್ಥಿನ ಸಭಾಭವನವಿದ್ದು ಡೈನಿಂಗ್ ಹಾಲ್, ಸ್ಟೇಜ್‌ಗೆ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಜೊತೆಗೆ ಮದುವೆ ಆಗಮಿಸುವ ವಧು,ವರ ಜನರಿಗೆ 12 ಹವಾನಿಯಂತ್ರಿತ(ಎಸಿ) ರೂಂಗಳಿವೆ.
‘ಜನರಿಂದ, ಜನರಿಗಾಗಿ, ಜನರಿಗೋಸ್ಕರ’ ಎಂಬ ತತ್ವದಡಿ ಸಂಸ್ಥೆ ಮುನ್ನಡೆದಿದ್ದು ನಮ್ಮ ಮೇಲೆ ಜನ ವಿಶ್ವಾಸವಿಟ್ಟು 33 ಕೋಟಿ ರೂಗಳ ಠೇವು ಇಟ್ಟಿದ್ದಾರೆ” ಎಂದರು.
ಶರಣಶ್ರೀ ಐ.ಆರ್.ಮಠಪತಿ, ಚಿಂಚಣಿ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು, ಚಿಕ್ಕೋಡಿ ಸಂಪಾದನಾ ಮಹಾಸ್ವಾಮಿಗಳು, ಕೂಡಲಸಂಗಮದ ಶ್ರೀ ಬಸವಪ್ರಕಾಶ ಸ್ವಾಮಿಗಳು ಮಾತನಾಡಿದರು.
ನಿಪ್ಪಾಣಿ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಎಂ.ಪಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ, ನಿಪ್ಪಾಣಿ ನಗರಾಧ್ಯಕ್ಷ ಜಯವಂತ ಭಾಟಲೆ, ಲಕ್ಷ್ಮಣ ಕಬಾಡೆ, ಚಿಕ್ಕೋಡಿ ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ಅಪ್ಪಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಅಭಿಜಿತ್ ಪಾಟೀಲ, ಲಕ್ಷ್ಮಣ ಕಬಾಡೆ, ಕಲ್ಲಪ್ಪಾ ಜಾಧವ, ಮಂಗಳಾ ಜೊಲ್ಲೆ, ಬಿ.ಎನ್.ಮಾಳಿ, ಸಿದ್ರಾಮ ಗಡದೆ, ಸೇರಿದಂತೆ ಜೊಲ್ಲೆ ಗ್ರುಪ್ ಎಲ್ಲ ಅಂಗ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಪಾಟೀಲ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ