ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಸಹಕಾರಿ ರಂಗದಲ್ಲಿ ಎಲ್ಲರೂ ಸಮಾನರು. ಜನರಿಗೆ ಸಹಕಾರಿ ಸಾಹುಕಾರರು ಬೇಡ , ಸಹಕಾರಿಗಳು ಮಾತ್ರ ಇರಬೇಕು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಡಾ. ಜೀರಗೆ ಸಭಾಂಗಣ, ಜೆಎನ್‍ಎಂಸಿ, ಮೆಡಿಕಲ್ ಕಾಲೇಜು ಅವರಣದಲ್ಲಿ ಶ್ರೀ ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ನೂತನ ಕಟ್ಟಡ ಮತ್ತು ಸಂಸ್ಥೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸರ್ಕಾರ ಮತ್ತು ಸಹಕಾರ ಎರಡು ಪ್ರಗತಿ ಚಕ್ರಗಳು :
ಸರ್ಕಾರ ಮತ್ತು ಸಹಕಾರ ಇವೆರೆಡು ಪ್ರಗತಿ ಚಕ್ರದಂತಿದ್ದರೆ ಮಾತ್ರ ರಾಜ್ಯವನ್ನು ಮುನ್ನಡೆಸಲು ಹಾಗೂ ರಾಜ್ಯದ ಜನತೆಗೆ ಒಳಿತು ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಸೌಹಾರ್ದ ಬ್ಯಾಂಕುಗಳು ಚಿಂತನೆ ಮಾಡಬೇಕು ಎಂದರು.
ಸಹಕಾರಿ ರಂಗಕ್ಕೆ ಸರ್ಕಾರದ ಬೆಂಬಲ :
ಎಸ್ ಸಿ ಎಸ್ ಟಿ, ಓಬಿಸಿ, ಹೆಣ್ಣುಮಕ್ಕಳಿಗೆ, ರೈತರಿಗೆ,ಸ್ವ ಸಹಾಯ ಸಂಘಗಳಿಗೆ ಅನೇಕ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಈ ಯೋಜನೆಗಳಲ್ಲಿ ಆರ್ಥಿಕ ಸಹಾಯವನ್ನು ಸರ್ಕಾರ ಮತ್ತು ಬ್ಯಾಂಕುಗಳು ನೀಡುತ್ತವೆ. ಇಂತಹ ಸರ್ಕಾರದ ಯೋಜನೆಗಳಲ್ಲಿ ಇಂತಹ ಸಹಕಾರಿ ಬ್ಯಾಂಕುಗಳು ಕೈಜೋಡಿಸಬೇಕು. ಸರ್ಕಾರ ಸಹಕಾರಿ ರಂಗಕ್ಕೆ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತಿದೆ. 31 ಲಕ್ಷ ರೈತರಿಗೆ ಶೂನ್ಯ ಬಡ್ಡಿ ಸಾಲವನ್ನು 3 ರಿಂದ 5 ಲಕ್ಷದವರೆಗೆ ಹೆಚ್ಚಿಸಿದೆ. 30 ಲಕ್ಷ ರೈತರು ನೋಂದಣಿ ಮಾಡಿರುವ ಯಶಸ್ವಿ ಯೋಜನೆ, ರೈತಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಈ ಎಲ್ಲ ಯೋಜನೆಗಳಲ್ಲಿ ಸಹಕಾರ ಬ್ಯಾಂಕುಗಳು ಸರ್ಕಾರದೊಂದಿಗೆ ಕೈಜೋಡಿಸಿದರೆ, 4 ರಿಂದ 5 ಕೋಟಿ ವರೆಗೆ ವಹಿವಾಟು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರವು ಸಹಕಾರ ಕ್ಷೇತ್ರದ ಡಿಜಟಲೀಕರಣವನ್ನು ಹಂತಹಂತವಾಗಿ ಮಾಡುತ್ತಿದೆ. ಎಲ್ಲ ರಂಗದಲ್ಲಿಯೂ ಸಹಕಾರ ರಂಗದಲ್ಲಿ ಕಾರ್ಯನಿರ್ವಹಿಸಬಹುದಾಗಿದೆ ಎಂದರು.
ಬೆಳಗಾವಿಗೆ ಸಹಕಾರ ರಂಗದ ಕೊಡುಗೆ:
ಬೆಳಗಾವಿ ಜಿಲ್ಲೆಯ ರೈತರು, ವರ್ತಕರು, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸಹಕಾರಿ ರಂಗಕ್ಕೆ ಗಣನೀಯ ಕೊಡುಗೆ ಕೊಟ್ಟಿರುವ ಜಿಲ್ಲೆ ಬೆಳಗಾವಿ. ಸಹಕಾರಿ ಸಂಸ್ಕೃತಿ ಬೆಳಗಾವಿಯಲ್ಲಿದೆ. ಬೆಳಗಾವಿಯ ಸಹಕಾರಿ ರಂಗದಲ್ಲಿ ಹೆಚ್ಚಿನ ಬಂಡವಾಳವಿದ್ದು, ಹೆಚ್ಚಿನ ಸಾಲಸೌಲಭ್ಯವನ್ನೂ ತನ್ನ ಗ್ರಾಹಕರಿಗೆ ನೀಡಲಾಗುತ್ತಿದೆ. ನೆರೆಯ ರಾಜ್ಯ ಮಹಾರಾಷ್ಟ್ರ ಹಾಗೂ ಗುಜರಾತ್ ಗಳಲ್ಲಿ ಸಹಕಾರ ಕ್ಷೇತ್ರ ಸರ್ಕಾರವನ್ನಾಳುತ್ತದೆ. ಸಹಕಾರಿ ರಂಗವನ್ನು ಕಾನೂನುಬದ್ಧವಾಗಿ , ನೈತಿಕವಾಗಿ ಬೆಳೆಸಿದರೆ ಅದು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತದೆ. ಬಂಡವಾಳಶಾಹಿಗಳು ಮತ್ತು ಕಮ್ಯುನಿಸಂಗೆ ಕೋಆಪರೇಟಿಸಂ ಪರ್ಯಾಯ ಶಕ್ತಿಯಾಗಬಲ್ಲದು. ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಿರುವ, ಒಬ್ಬ ವ್ಯಕ್ತಿಗೆ ಸೀಮಿತವಾಗದಿರುವ ಸಹಕಾರಿ ರಂಗ ಮತ್ತಷ್ಟು ಬೆಳೆಯಬೇಕು ಎಂದರು.
ಸಹಕಾರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ :
“ಪ್ರಧಾನಿ ಮೋದಿಯವರು ಸಹಕಾರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುತ್ತಿದ್ದಾರೆ. ಈ ರಂಗದಲ್ಲಿನ ಆರ್ಥಿಕತೆಯನ್ನು ವೃದ್ಧಿಸಿ, ವಿವಿಧ ಹಣಕಾಸಿನ ಸಂಸ್ಥೆಗಳನ್ನು ಈ ವ್ಯವಸ್ಥೆಯಲ್ಲಿ ಜೋಡಿಸಬೇಕು. ಕೃಷಿ ಪತ್ತಿನ ಸಹಕಾರ ರಂಗ ಸಂಪೂರ್ಣವಾಗಿ ಒಂದೇ ವ್ಯವಸ್ಥೆಯಡಿ ಬರಬೇಕೆನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಹಕಾರ ಇಲಾಖೆ ಸ್ಥಾಪಿಸಲಾಗಿದೆ” ಎಂದರು.
ಜನರ ವಿಶ್ವಾಸಾರ್ಹತೆ ಗಳಿಸಿದ ಸೌಹಾರ್ದ ಸಹಕಾರಿ ಬ್ಯಾಂಕ್ :
ಮಹಾಂತೇಶ ಕವಟಗಿಮಠ ಅವರೊಡನೆ 30 ವರ್ಷದ ಒಡನಾಟವಿದೆ. ಅವರ ತಂದೆಯವರು ಸಹಕಾರಿ ರಂಗದಲ್ಲಿ ಬಹಳಷ್ಟು ಸೇವೆಯನ್ನು ಸಲ್ಲಿಸಿದವರು. ಮಹಾಂತೇಶ ಕವಟಗಿಮಠ ಅವರು ಅತ್ಯಂತ ಕ್ರಿಯಾಶೀಲರಾಗಿದ್ದು, ಕೆಎಲ್ಇ ಸಂಸ್ಥೆ, ಡಿಸಿಸಿ ಬ್ಯಾಂಕ್ , ಸಕ್ಕರೆ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ, ತಮ್ಮದೇ ಆದ ಸೌಹಾರ್ದ ಸಹಕಾರ ಬ್ಯಾಂಕ್ ನ್ನು ತೆರೆದಿದ್ದಾರೆ.ಸಹಕಾರದ ಮೂಲಭೂತ ವಿಚಾರಗಳ ಆಧಾರವಾಗಿಸಿಕೊಂಡು ಸೇವೆ ಸಲ್ಲಿಸಬೇಕು. ಬೆಳಗಾವಿ ಜಿಲ್ಲೆಯಲ್ಲಿ ಜನರ ವಿಶ್ವಾಸಾರ್ಹತೆಯನ್ನು ಸೌಹಾರ್ದ ಬ್ಯಾಂಕುಗಳು ಗಳಿಸಿಕೊಂಡಿದ್ದು, ಅದನ್ನು ಉಳಿಸಿಕೊಂಡು ಹೋಗುವ ಮೂಲಕ ಸಮುದಾಯ, ಬಡವರಿಗೆ ಅನುಕೂಲವಾಗುತ್ತದೆ ಎಂದರು.
ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸರ್ಕಾರದ. ಮುಖ್ಯ ಸಚೇತಕರು ಮಹಾಂತೇಶ ಕವಟಗಿಮಠ ಕೆ.ಎಲ್.ಇ. ಸಂಸ್ಥೆಗಳ ಸಂಸ್ಥಾಪಕ ಪ್ರಭಾಕರ್ ಕೋರೆ, ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ