ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರ :
ಸಮೀಪದ ದೇಮಟ್ಟಿ ಗ್ರಾಮದಿಂದ ಶಾಲಾ-ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಗುರುವಾರ ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಪ್ರತಿದಿನ ವಿದ್ಯಾರ್ಥಿಗಳು ಕಿತ್ತೂರು ಮತ್ತಿತರ ಕಡೆಗಳಿಗೆ ಶಾಲಾ, ಕಾಲೇಜಿಗೆ ಹೋಗಲು ತುಂಬ ದುಸ್ತರವಾಗಿದೆ. ಒಂದು ಬಸ್ಸು ಹುಲಿಕಟ್ಟಿ, ಕೊಟಬಾಗಿ ಕಡೆಯಿಂದ ದೇಮಟ್ಟಿ ಗ್ರಾಮಕ್ಕೆ ಬರುತ್ತದೆ. ಅದು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಬಂದರೂ ಅಲ್ಲಿಂದ ಜನರನ್ನು ತುಂಬಿಕೊಂಡು ಬರುತ್ತದೆ. ನಮಗೆ ಅದರಲ್ಲಿ ಸ್ಥಳವಿರುವುದಿಲ್ಲ. ನಮ್ಮ ಗ್ರಾಮದಲ್ಲಿಯೇ ನೂರಾರು ವಿದ್ಯಾರ್ಥಿಗಳು ಕಿತ್ತೂರಿನ ಶಾಲೆಗೆ ಹೋಗುವುದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಪಿಯು ವಿದ್ಯಾರ್ಥಿನಿ ಲಕ್ಷ್ಮೀ ಕೊಳ್ಳಿ ತಮ್ಮ ಅಳಲು ತೋಡಿಕೊಂಡರು.
ಈಗಾಗಲೇ ಮಂಜಾನೆ 7 ಘಂಟೆಗೆ ಕಿತ್ತೂರಿನಿಂದ ಒಂದು ಬಸ್ಸು ಬರುತ್ತದೆ. ಅದು ಬಂದು ಮರಳಿ ಕಿತ್ತೂರಿಗೆ ಹೊಗದೆ ಮಲ್ಲಾಪುರ ಗ್ರಾಮಕ್ಕೆ ನಿಲುಗಡೆ ಮಾಡಿ ಅದೇ ಮಾರ್ಗವಾಗಿ ಬೈಲಹೊಂಗಲಕ್ಕೆ ತೆರಳುತ್ತದೆ. ನಾವು ಮಲ್ಲಾಪುರದಿಂದ ಸುಮಾರು 2 ಕಿಮಿ. ಕಾಲ್ನಡಿಗೆಯಿಂದ ಕಿತ್ತೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ಆದಷ್ಟು ಬೇಗ ಜನಪ್ರತಿನಿಧಿಗಳು, ಹಾಗೂ ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಕಿತ್ತೂರಿನ ಕೆಎಸ್‍ಆರ್‍ಟಿಸಿ ಟ್ರಾಫಿಕ್ ಕಂಟ್ರೋಲರ್ ಆರ್ ಎ ನದಾಫ್, ಪೋಲಿಸ್ ಠಾಣೆಯ ಎಎಸ್‍ಆಯ್ ಕೆ ಎಫ್ ಸನದಿ ಆಗಮಿಸಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಕಳಿಸಿ ಸಮಸ್ಯೆಯನ್ನು ಪರಿಹರಿಸುತ್ತೇವೆಂದು ಹೇಳಿ ಬಸ್ ಸಂಚಾರಕ್ಕೆ ಅನುವು ಮಾಡಿಮಾಡಿಕೊಟ್ಟರು.
ಮಹೇಶ ಗದ್ದಿಕೇರಿ, ಜ್ಯೋತಿ ಕಂಬಾರ, ಲಕ್ಷ್ಮೀ ಹಾದಿಮನಿ, ಕಾವೇರಿ ದೊಡವಾಡ, ಸುಧಾ ಮೊಕಾಶಿ, ರಂಜೀತಾ ಕಿಲಾರಿ, ನಾಗಪ್ಪ ಅಪ್ಪೋಜಿ, ರವಿ ಕಂಬಾರ, ಮನೋಜ ಅಮ್ಮನಗಿ, ಮಣಿಕಂಠ ಅಂಬಡಗಟ್ಟಿ, ಮಾರುತಿ ಉಡಚಮ್ಮನವರ, ಈರಣ್ಣ ಕೊಳ್ಳಿ, ಸುನೀಲ ಹಾದಿಮನಿ, ಸಂಜನಾ ಹವಾಲ್ದಾರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಸ್ ಸೌಲಭ್ಯಕ್ಕಾಗಿ ಆರು ತಿಂಗಳ ಹಿಂದೆ ಶಾಸಕ ಮಹಾಂತೇಶ ದೊಡಗೌಡರ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ನಮ್ಮ ಮನವಿಗೆ ಯಾರೂ ಸ್ಪಂದಿಸಿಲ್ಲ.-ಶಿವಾನಂದ ಮಠಗುದ್ಲಿ ಬಿಕಾಂ ವಿದ್ಯಾರ್ಥಿಕಾಲೇಜು ವೇಳಾ ಪಟ್ಟಿ ಬದಲಾದ ಕಾರಣ ಬಸ್ಸಿನ ತೊಂದರೆಯಾಗಿದೆ. ಆದಷ್ಟು ಬೇಗ ಮೇಲಾಧಿಕಾರಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಪರಿಹರಿಸುತ್ತೇವೆ.– ಆರ್ ಎ ನದಾಫ್, ಟ್ರಾಫಿಕ್ ಕಂಟ್ರೋಲರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ