ಯುಗಾದಿ /ಉಗಾದಿ ಇದು ಹಿಂದೂ ಪಂಚಾಂಗದ ಪ್ರಕಾರ ವರ್ಷದ ಮೊದಲ ದಿನ. ಯುಗಾದಿ ಎಂದರೆ ಇದು ಸಂಸ್ಕೃತ ಭಾಷೆಯ ಪದವಾಗಿದೆ. ಈ ಪದದ ಉತ್ಪತ್ತಿಯು ಯುಗ+ ಆದಿ. ಯುಗ ಎಂದರೆ ವಯಸ್ಸು . ಆದಿ ಎಂದರೆ ಆರಂಭ. ಆದ್ದರಿಂದ ಯುಗಾದಿಯನ್ನು ಹೊಸ ವರ್ಷದ ಆರಂಭ ಎಂದು ಭಾರತದ ಹಲವು ಕಡೆ ಆಚರಿಸಲಾಗುತ್ತದೆ.
ಚೈತ್ರೇ ಮಾಸೀಜಗದ್ಬ್ರಹ್ಮಾಸಸರ್ಜಪ್ರಥಮೇಹನೀ।
ಶುಕ್ಲಪಕ್ಷೇ ಸಮಗ್ರಂತು, ತದಾ ಸೂರ್ಯೋದಯೇಸತಿ॥
ಚತುರ್ಮುಖ ಬ್ರಹ್ಮನು ಈ ಜಗತ್ತನ್ನು ಚೈತ್ರ ಶುದ್ಧ ಪ್ರತಿಪದೆಯಂದು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನು. ಅಂದೇ ಗ್ರಹ, ನಕ್ಷತ್ರ, ಮಾಸ, ವರ್ಷ ಋತು ಇವುಗಳನ್ನು ಸೃಷ್ಟಿಸಿ ಕಾಲಗಣನೆ ಆರಂಭಿಸಿದ ದಿನವಾಗಿದೆ. ರೊಮನ್ನರಿಗೆ ಜನವರಿಯು ಮೊದಲನೆ ದಿನವಾದಂತೆ ಹಿಂದೂಗಳಿಗೆ ಯುಗಾದಿ ಯುಗದ ಆದಿಯ ದಿನವಾಗಿದೆ. ಹಾಗೆಯೇ ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಭಗವಾನ್ ಬ್ರಹ್ಮ ಸೃಷ್ಟಿಕರ್ತ ಈ ಶುಭಕರ ದಿನದಂದು ಭೂಮಿಯನ್ನು ಸೃಷ್ಟಿಸಲು ಪ್ರಾರಂಭಿಸಿದನು. ಹಾಗೆಯೇ ಇದು ಸಂವತ್ಸರದ ಆದಿಯೂ ಆಗಿದೆ. ಆದ್ದರಿಂದ ಕಲಿಯುಗದ ಆರಂಭದ ದಿನವನ್ನು ಸೂಚಿಸುವ ದಿನವಾಗಿದೆ ಮತ್ತು ಪರಬ್ರಹ್ಮನನ್ನು ಪೂಜಿಸಲು ಇದು ಶುಭಕರ ದಿನವೆಂದು ಭಾವಿಸಿ ಯುಗಾದಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಸರ್ವಸ್ತಸ್ತು ದುರ್ಗಾಣಿ ಸರ್ವೋಭದ್ರಾಣಿ ಪಶ್ಯತು।
ಸರ್ವಃ ಕಾಮಾನವಾಪ್ನೋತು ಸರ್ವಃಸರ್ವತ್ರ ನಂದತು॥
ಈ ಯುಗಾಧಿಯುಎಲ್ಲಾಕಷ್ಟಗಳನ್ನುನಿವಾರಿಸಲಿ, ಎಲ್ಲರೂಸಮ್ರದ್ಧಸಂತೋಷವನ್ನುಕಾಣಲಿ, ಎಲ್ಲರಆಸೆಗಳುಈಡೇರಲಿ,ಪ್ರತಿಯೊಂದುಸಂದರ್ಭದಲ್ಲಿಯೂಎಲ್ಲರೂಸಂತೋಷವಾಗಿರಲಿ.
ಈ ಯುಗಾದಿಯ ಆಚರಣೆಯೂ ಕೂಡ ಅಷ್ಟೇ ವಿಶೇಷವಾಗಿದೆ.
ಮನೆಯ ಮುಂದೆ ರಂಗೋಲಿ ಹಾಕಿ ಮಾವಿನ ಎಲೆ ತೋರಣದಿಂದ ಬಾಗಿಲನ್ನುಅಲಂಕರಿಸಿ ಎಣ್ಣೆಯ ಸ್ನಾನ(ತೈಲಸ್ನಾನ)ವನ್ನು ಮುಗಿಸಿ ಶುದ್ಧ ಮನಸ್ಸಿನಿಂದ ತುಳಸಿ ಪೂಜೆ ಹಾಗೆಯೇ ಹಿಂದೂ ಪಂಚಾಂಗವನ್ನು ಪೂಜಿಸಿ ಪಂಚಾಂಗದಲ್ಲಿರುವ ವರ್ಷದ ಭವಿಷ್ಯವನ್ನು ಪುರೋಹಿತರ ಮೂಲಕವಾಗಿ ಪಂಚಾಂಗ ಶ್ರವಣವನ್ನುಮಾಡಿ ಹೊಸ ಉಡುಗೆಯನ್ನು ಧರಿಸಿ ಹಿರಿಯರು, ತಂದೆ-ತಾಯಿಯವರನ್ನು ನಮಸ್ಕರಿಸಿ ಬೇವು-ಬೆಲ್ಲವನ್ನು ಸ್ವೀಕರಿಸುವುದು
ಹಾಗೆಯೇ ಬೇವು-ಬೆಲ್ಲವನ್ನುಸ್ವೀಕರಿಸುವಾಗ ಒಂದು ಶ್ಲೋಕವನ್ನು ಪಠಿಸಲು ಸಂಸ್ಕೃತದಲ್ಲಿ ತಿಳಿಸಿದೆ.
ಶತಾಯುರ್ವಜ್ರದೇಹಾಯಸರ್ವಸಂಪತ್ಕರಾಯ ಚ |
ಸರ್ವಾರಿಷ್ಟವಿನಾಶಾಯನಿಂಬಕದಳಭ಼಼ಕ್ಷಣಮ್ ||
ಬೇವು-ಬೆಲ್ಲದಿಂದ ನಮ್ಮ ದೇಹವು ವಜ್ರದಂತೆ ಆರೋಗ್ಯಕರ ಮತ್ತು ಬಲವಾಗಿರುತ್ತದೆ. ಮತ್ತು ಅದು ಸರ್ವಾರಿಷ್ಟ ನಾಶಕವಾಗಿದೆ. ಇದು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗೆಯೇ ಬೇವು-ಬೆಲ್ಲದ ಇನ್ನೊಂದು ಪ್ರಾಮುಖ್ಯತೆಯೆಂದರೆ
ನಮ್ಮ ಜೀವನವು ದುಃಖ ಮತ್ತು ಸಂತೋಷದಿಂದ ಆವರಿಸಿದೆ. ಬೆಲ್ಲವು (ಸಿಹಿ) ಸಂತೋಷವನ್ನು ಬೇವು (ಕಹಿ) ದುಃಖವನ್ನು ಸಂಕೇತಿಸುತ್ತದೆ. ದುಃಖ ಮತ್ತು ಸಂತೋಷಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಆದ್ದರಿಂದ ಸಂತೋಷ ಮತ್ತು ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸುತ್ತದೆ.
ಸೂರ್ಯಸವೇದನಾಪುಷ್ಯೆದೀಪ್ತಿಕಾರುಣ್ಯಗಂಧನೆ|
ಲಬ್ಧ್ವಾಶುಭಂನವವರ್ಷೇಸ್ಮಿನ್ ಕುರ್ಯಾತ್ಸರ್ವಸ್ಯಮಂಗಲಮ್ ||
ಇಡೀ ಪ್ರಕೃತಿಯೇ ಸ್ವಾಗತಿಸುವ ಈ ಯುಗಾದಿಯು ನಮಗೆ ಹರ್ಷವನ್ನು ತರಲಿ ಎಂದು ಹೇಳುತ್ತಾ
ಸೂರ್ಯನು ಬೆಳಕನ್ನು ನೀಡುವಂತೆ, ಹೂವುಗಳಲ್ಲಿ ಯಾವಾಗಲೂ ಪರಿಮಳವು ಇರುವಂತೆ, ಈ ಹೊಸ ವರ್ಷವು ನಮಗೆಲ್ಲರಿಗೂ ಪ್ರತಿದಿನವೂ ,ಪ್ರತಿ ಕ್ಷಣವೂ ಶುಭವನ್ನುಉಂಟುಮಾಡಲಿ .
ಎಲ್ಲರಿಗೂ ಚಾಂದ್ರಮಾನ ಯುಗಾದಿಯ ಶುಭಾಶಯಗಳು.
-ರಾಕೇಶ ನಾರಾಯಣ ಹೆಗಡೆ
ಸಂಸ್ಕೃತ ಶಿಕ್ಷಕ , ಸತ್ಯಸಾಯಿ ನಿತ್ಯ ನಿಕೇತನಂ, ಬೆಳಗಾವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ