Uncategorized

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ  ಬಂದಂತೆ – ಡಿ.ಕೆ.ಶಿವಕುಮಾರ; ಜನತಾದಳ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ

*ಯಾದಗಿರಿ ಜಿಲ್ಲೆ ಬ್ಲಾಕ್ ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರ ಮಾತುಗಳು*

ಪ್ರಗತಿವಾಹಿನಿ ಸುದ್ದಿ, ಯಾದಗಿರಿ: ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರು 371ಜೆ ಮೂಲಕ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದ್ದಾರೆ. ಅವರು ಇದನ್ನು ಅವರ ಕುಟುಂಬದವರ ಹಿತಕ್ಕಾಗಿ ಜಾರಿಗೆ ತಂದಿಲ್ಲ. ನೀವು ಅವರನ್ನು ಇಷ್ಟು ದೊಡ್ಡ ಮಟ್ಟದ ನಾಯಕರಾಗಿ ಬೆಳೆಸಿದ್ದಕ್ಕೆ ಪ್ರತಿಯಾಗಿ ಆಡ್ವಾಣಿ ಹಾಗೂ ವಾಜಪೇಯಿ ಅವರು ಮಾಡಲು ಸಾಧ್ಯವಿಲ್ಲ ಎಂದ ಕೆಲಸವನ್ನು ನಿಮಗಾಗಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ. 

ಯಾದಗಿರಿ ಜಿಲ್ಲೆ ಬ್ಲಾಕ್ ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದರು.

ಮಲ್ಲಿಕಾರ್ಜುನ ಖರ್ಗೆ ಅವರು ನಿಮ್ಮ ನಾಲ್ಕು ತಲೆಮಾರಿಗೆ ಅನುಕೂಲವಾಗುವಂತೆ ಶಕ್ತಿ ತುಂಬಿದ್ದಾರೆ. ಇದನ್ನು ನೀವು ಮರೆಯಬಾರದು. ನೀವೆಲ್ಲರೂ ಬೆಂಗಳೂರಿಗೆ ಬಂದು ಕೆಲಸ ಮಾಡುವ ಅವಕಾಶವಿದೆ. ವಿದ್ಯಾಭ್ಯಾಸ, ಉದ್ಯೋಗದಲ್ಲಿ ನಿಮಗೆ ಪ್ರತ್ಯೇಕ ಮೀಸಲಾತಿ ಇದೆ. ಕಳೆದ ಬಾರಿ ನಾವು ಇಲ್ಲಿಗೆ ಬಂದಿದ್ದಾಗ ಈ ಭಾಗದ ಅಭಿವೃದ್ಧಿಗೆ 5 ಸಾವಿರ ಕೋಟಿ ನೀಡುವುದಾಗಿ ವಚನ ನೀಡಿದ್ದೇವೆ. 

ನೀವೆಲ್ಲರೂ ಇಂದು ಕಾಂಗ್ರೆಸ್ ದೇವಾಲಯದ ಕಟ್ಟಡದ ಶಂಕುಸ್ಥಾಪನೆಗೆ ಬಂದಿದ್ದೀರಿ. ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ  ಬಂದಂತೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡುವಾಗ ಹಿರಿಯ ಮಹಿಳೆ ಬಂದು ಅವರಿಗೆ ಸೌತೇಕಾಯಿ ತಂದುಕೊಟ್ಟು, ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದೇನೆ. ತಗೊಳ್ಳಿ ಎಂದು ಕೊಟ್ಟರು. ಇದು ಕಾಂಗ್ರೆಸ್, ಕಾಂಗ್ರೆಸ್ ಪಕ್ಷದ ಇತಿಹಾಸ. ಬಡವರಿಗೆ ಜಮೀನು, ನಿವೇಷನ, ಪಿಂಚಣಿ, ಮಕ್ಕಳಿಗೆ ಬಿಸಿಯೂಟ, ಅನಭಾಗ್ಯ, ಉದ್ಯೋಗ ಭಾಗ್ಯ, ಶಿಕ್ಷಣ ನೀಡಿದ್ದು ಕಾಂಗ್ರೆಸ್ ಪಕ್ಷ.

ನಾನು ಬಿಜೆಪಿ ಹಾಗೂ ದಳದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಕಲಬುರ್ಗಿಯಲ್ಲಿರುವ ಮೆಡಿಕಲ್ ಕಾಲೇಜು, ಕಟ್ಟಡಗಳನ್ನು ದಳದವರು, ಬಿಜೆಪಿಯವರು ನಿರ್ಮಾಣ ಮಾಡಿದ್ದಾರಾ? ಕಾರ್ಮಿಕರ ಮಕ್ಕಳಿಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ. 

ಅಂಬೇಡ್ಕರ್ ಅವರ ಸಂವಿಧಾನದ ಮೂಲಕ ಎಲ್ಲ ಶೋಷಿತರಿಗೆ ಮೀಸಲಾತಿ ನೀಡಿ, ಎಲ್ಲ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಕಾನೂನು ತಂದಿದ್ದು ಕಾಂಗ್ರೆಸ್ ಪಕ್ಷ. ಮಲ್ಲಿಕಾರ್ಜುನ ಖರ್ಗೆ ಅವರು ಎಷ್ಟೇ ದೊಡ್ಡ ನಾಯಕನಾಗಿದ್ದರೂ ಅವರು ನಿಮ್ಮ ಮನೆ ಮಗ. ನೀವು ಅವರನ್ನು ಸಾಕಿ ಬೆಳೆಸಿದ್ದೀರಿ. ನಾಯಕನನ್ನಾಗಿ ಮಾಡಿದ್ದೀರಿ. ನಮ್ಮಂತಹ ನೂರಾರು ನಾಯಕರನ್ನು ತಯಾರು ಮಾಡುವ ಶಕ್ತಿಯನ್ನು ಅವರಿಗೆ ನೀಡಿದ್ದೀರಿ. ಖರ್ಗೆ ಅವರು ಈ ದೇಶಕ್ಕೆ ದೊಡ್ಡ ಆಸ್ತಿ. ಅವರು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಸೃಷ್ಟಿಸಿರುವ ದೊಡ್ಡ ಸಮಸ್ಯೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.

ಬಿಜೆಪಿಯವರು ರಾಹುಲ್ ಗಾಂಧಿ ಅವರ ಧ್ವನಿ ಹತ್ತಿಕ್ಕಲು ಅವರ ಸಂಸತ್ ಸದಸ್ಯತ್ವ ಅನರ್ಹಗೊಳಿಸಿದ್ದಾರೆ. ಆದರೂ ಅವರು, ನಾನು ನನ್ನ ಜನರಿಗೆ ಮಾತು ಕೊಟ್ಟಿದ್ದು, ಇಲ್ಲಿನ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಇಲ್ಲಿಗೆ ಬಂದು ಈ ದೇವಾಲಯದ ಶಂಕುಸ್ಥಾಪನೆ ಮಾಡುತ್ತಿದ್ದಾರೆ ಎಂದರು. 

ಇಲ್ಲಿ 10 ಸಾವಿರ ಅಡಿ ಜಾಗದಲ್ಲಿ ಕಚೇರಿ ನಿರ್ಮಾಣ ಮಾಡಬೇಕಿದೆ. ಎಐಸಿಸಿ ವತಿಯಿಂದ ಕಚೇರಿ ನಿರ್ಮಾಣಕ್ಕೆ ನೆರವು ನೀಡಲಾಗುವುದು. ಕೆಪಿಸಿಸಿ ವತಿಯಿಂದ ಈ ಕಚೇರಿ ನಿರ್ಮಾಣಕ್ಕೆ 25 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ನಾನು, ಖರ್ಗೆ ಅವರು, ಬಾಬುರಾವ್ ಚಿಂಚನಸೂರು ಅವರು ಕೊಡುವುದು ಮುಖ್ಯವಲ್ಲ. ಪ್ರತಿಯೊಬ್ಬರೂ ಕೂಡ  ನೀವು ಕನಿಷ್ಠ 10, 100, 1000 ಆಗಲಿ ನಿಮ್ಮ ಕೈಲಾದಷ್ಟು ದಾನ ಮಾಡಬೇಕು. ಈ ಕಟ್ಟಡದ ಒಂದೊಂದು ಇಟ್ಟಿಗೆಯಲ್ಲಿ ನಿಮ್ಮ ಪಾತ್ರ ಇರಬೇಕು.

ರಾಜ್ಯದಲ್ಲಿ ಚುನಾವಣೆ ಬರುತ್ತಿದೆ. ಇಲ್ಲಿ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಿದ್ದೀರಿ. ನಾವು ಬಿಜೆಪಿಯವರನ್ನು ಅಧಿಕಾರದಿಂದ ದೂರವಿಡಲು ಕುಮಾರಸ್ವಾಮಿ ಅವರ ಸರ್ಕಾರಕ್ಕೆ ಬೆಂಬಲ ನೀಡಿದೆವು. ನಾವು ಅಧಿಕಾರ ಹಂಚಿಕೆ ಮಾಡಿಕೊಳ್ಳದೇ, ಐದು ವರ್ಷಗಳ ಕಾಲ ಸಂಪೂರ್ಣ ಆಡಳಿತ ಮಾಡುವಂತೆ ಬೆಂಬಲ ನೀಡಿದೆವು. ಆದರೆ ಅವರಿಗೆ ಸಿಕ್ಕ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಈ ಜನತಾದಳ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಆಗಿನ ಕಾಲದಲ್ಲಿ ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿದ್ದು ಕಾಂಗ್ರೆಸ್, ಕುಮಾರಸ್ವಾಮಿಯವರನ್ನು ಕಾಂಗ್ರೆಸ್ ಒಂದು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಮುಂದೆ ದಳ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ದಳದ ಕಾರ್ಯಕರ್ತರು, ಮತದಾರರಿಗೆ ನಾನು ಮನವಿ ಮಾಡಿಕೊಲ್ಳುತ್ತೇನೆ. ಖರ್ಗೆ ಅವರು ಈ ಕ್ಷೇತ್ರದ ಋಣವನ್ನು ತೀರಿಸಿದ್ದಾರೆ. ರಾಜ್ಯದ ಜನರಿಗೆ ಶಕ್ತಿ ನೀಡಿ ದೇಶಕ್ಕೆ ದೊಡ್ಡ ನಾಯಕರಾಗಿದ್ದಾರೆ. ಅವರಿಗೆ ಶಕ್ತಿ ನೀಡಲು ಗುರುಮಿಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಮತ್ತೆ ರಾರಾಜಿಸಬೇಕು. 

ಬೆಲೆ ಏರಿಕೆ ಗಗನಕ್ಕೇರಿದ್ದು, ಆದಾಯ ಪಾತಾಳಕ್ಕೆ ಸೇರಿದೆ. ಬಿಜೆಪಿ ಸರ್ಕಾರ ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿತ್ತು. ಆದರೆ ರಸಗೊಬ್ಬರ, ಅಡುಗೆ ಅನಿಲ ಬೆಲೆಗಳು ದುಪ್ಪಟ್ಟಾಗಿವೆ. ಎಲ್ಲ ಅಘತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಪರಿಸ್ಥಿತಿಯಲ್ಲಿ ರಾಜ್ಯದ ಜನರಿಗೆ ನೆರವಾಗಬೇಕು ಎಂದು ಖರ್ಗೆ ಅವರು ನಮಗೆ ಸೂಚನೆ ನೀಡಿದರು. ಅದರಂತೆ ನಾವು ಜನರಿಗೆ ಸಹಾಯ ಮಾಡಲು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಈ ಕ್ಷೇತ್ರದಲ್ಲಿ ಕೆಲವು ಮನೆಗಳು ಹೊರತಾಗಿ ಉಳಿದ ಯಾವುದೇ ಮನೆಗಳು ಕರೆಂಟ್ ಬಿಲ್ ಕಟ್ಟುವ ಅಗತ್ಯವಿಲ್ಲ. ಇನ್ನು ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಸಂಸಾರ ನಡೆಸಲು ನೆರವಾಗಲು ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಈ ಎರಡು ಯೋಜನೆ ಮೂಲಕ ಪ್ರತಿ ತಿಂಗಳು 3500ರಂತೆ ಪ್ರತಿ ವರ್ಷಕ್ಕೆ 42 ಸಾವಿರ ಹಣ ಉಳಿತಾಯ ಮಾಡಬಹುದಾಗಿದೆ. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗ ಯುವಕರಿಗೆ ಯುವನಿಧಿ ಯೋಜನೆ ಮೂಲಕ ಪದವೀಧರ ಯುವಕರಿಗೆ ಪ್ರತಿ ತಿಂಗಳು 3 ಸಾವಿರ ಡಿಪ್ಲೋಮಾ ಮಾಡಿರುವವರಿಗೆ 1500 ನಿರುದ್ಯೋಗ ಭತ್ಯೆ ನೀಡಲು ತೀರ್ಮಾನಿಸಿದ್ದೇವೆ. ರಾಜ್ಯದಲ್ಲಿ 10 ಲಕ್ಷ ನಿರುದ್ಯೋಗಿ ಯುವಕರಿದ್ದು ಅವರಿಗೆ ನೆರವಾಗುವ ಗುರಿ ಇದೆ.

ಇಂತಹ ಯಾವುದಾದರೂ ಒಂದು ಯೋಜನೆಗಳನ್ನು ಬಿಜೆಪಿ ಹಾಗೂ ದಳದವರು ನೀಡಿದ್ದಾರಾ? ಅವರು ಈ ಯೋಜನೆಗಳ ಜಾರಿ ಅಸಾಧ್ಯ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ 140 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ನಮಗೆ ಅಧಿಕಾರ ಬರಲಿ, ಜೂನ್ ತಿಂಗಳಿಂದಲೇ ಈ ಯೋಜನೆಗಳು ನಿಮಗೆ ತಲುಪುವಂತೆ ಮಾಡಲಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎಂದು ಎಲ್ಲ ನಾಯಕರು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಪಕ್ಷ ಯಾರಿಗೇ ಟಿಕೆಟ ನೀಡಿದರೂ ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಗೆಲ್ಲಿಸಬೇಕು. ಆಮೂಲಕ ನಮಗೆ ಶಕ್ತಿ ನೀಡಬೇಕು.

ನನ್ನನ್ನು ನಾಯಕನನ್ನಾಗಿ ಬೆಳೆಸಿ ಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ನನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಕಾಂಗ್ರೆಸ್ ಪಕ್ಷದಲ್ಲೇ ಸಾಯುತ್ತೇನೆ ಎಂದು ಚಿಂಚನಸೂರು ಅವರು ಮಾತು ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರ ಹೇಳಿದರು.

https://pragati.taskdun.com/d-k-shivakumarapartment-meetingcongress/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button