ವಿವಿಧ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಗೋಕಾಕ ನಗರ ಹಾಗೂ ಲೋಳಸೂರ ಗ್ರಾಮವನ್ನು ಪ್ರವಾಹದಿಂದ ತಡೆಗಟ್ಟುವ ಸಲುವಾಗಿ ಘಟಪ್ರಭ ನದಿಗೆ ತಡೆಗೋಡೆ ನಿರ್ಮಿಸುವ ಯೋಜನೆ ಹಾಗೂ ಘಟ್ಟಿ ಬಸವಣ್ಣ ಡ್ಯಾಂ ನಿರ್ಮಿಸುವುದು, ಕುಡಿಯುವ ನೀರು ಸರಬರಾಜು ಯೋಜನೆ ಸೇರಿದಂತೆ ಗೋಕಾಕ, ಅಥಣಿ, ಅರಭಾವಿ ಕ್ಷೇತ್ರದ ವಿವಿಧ ಕಾಮಗಾರಿಗಳ ಶಿಲಾನ್ಯಾಸಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನಾವರಣಗೊಳಿಸಿದರು.
ಗೋಕಾಕ ನಗರದ ಚಿಕ್ಕೊಳ್ಳಿ ಸೇತುವೆ ಬಳಿ ಮಂಗಳವಾರ (ಮಾ.28) ವಿವಿಧ ಕಾಮಗಾರಿಗಳ ಪೂಮಿ ಪೂಜೆ ಹಾಗೂ ಶಿಲಾನ್ಯಾಸಗಳನ್ನು ಅವರು ಅನಾವರಣಗೊಳಿಸಿದರು.
ಅಂದಾಜು 32 ಕೋಟಿ ವೆಚ್ಚದಲ್ಲಿ ಗೋಕಾಕ ತಾಲೂಕಿನ ಕೌಜಲಗಿ, ಗೋಸಬಾಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಸಂಬಂಧಿಸಿದ ಸುಮಾರ 2190 ಹೆಕ್ಟೇರ್ ಜಮೀನುಗಳಿಗೆ ಹೊಲಗಾಲುವೆ ನಿರ್ಮಿಸಲು ಹಾಗೂ ಸುಮಾರು 110 ಹೆಕ್ಟೇರ್ ಜಮೀನುಗಳಿಗೆ ಹನಿ ನೀರಾವರಿ ಮೂಲಕ ನೀರು ಒದಗಿಸುವ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಯಿತು.
ಅದೇ ರೀತಿಯಲ್ಲಿ 160.20 ಕೋಟಿ ವೆಚ್ಚದಲ್ಲಿ ಗೋಕಾಕ ತಾಲೂಕಿನ ಕೌಜಲಗಿ, ಗೋಸಬಾಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳ 2300 ಹೆಕ್ಟೇರ್ ಜಮೀನುಗಳಿಗೆ ಕಲ್ಮಡಿ ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಕಾಮಗಾರಿಗಳಿಗೆ ಲೋಕಾರ್ಪಣೆಗೊಳಿಸಲಾಯಿತು.
685 ಕೋಟಿ ವೆಚ್ಚದಲ್ಲಿ ಗೋಕಾಕ ನಗರ ಹಾಗೂ ಲೋಳಸೂರು ಗ್ರಾಮವನ್ನು ಪ್ರವಾಹದಿಂದ ತಡೆಗಟ್ಟುವ ಸಲುವಾಗಿ ಘಟಪ್ರಭಾ ನದಿಗೆ ತಡೆಗೋಡೆ ನಿರ್ಮಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಅಥಣಿ ತಾಲೂಕಿನ 13 ಕೆರೆಗಳನ್ನು ತುಂಬಿಸುವ, 9950 ಹೆಕ್ಟೇರ್ ಪ್ರದೇಶಕ್ಕೆ ಸಮುದಾಯ ನೀರಾವರಿ ಸೌಲಭ್ಯ ಕಲ್ಪಿಸಲು ಹಾಗೂ ಸ್ಥಳೀಯ ಹಳ್ಳಿಗಳಿಗೆ ಸರಣಿ ಚೆಕ್ ಡ್ಯಾಂ ನಿರ್ಮಾಣ ಮಾಡಲು 1486.81 ಕೋಟಿ ವೆಚ್ಚದಲ್ಲಿ ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದರು.
ಈ ಸಂದರ್ಭದಲ್ಲಿ ಗೋಕಾಕ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ರಮೇಶ ಜಾರಕಿಹೊಳಿ, ಅಥಣಿ ಶಾಸಕ ಮಹೇಶ ಕುಮಠಳ್ಳಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ