Kannada NewsKarnataka News

301 ಅಭ್ಯರ್ಥಿಗಳು ಬೆಳಗಾವಿ ಕಣದಲ್ಲಿ! ರಾಷ್ಟ್ರದ ಗಮನ ಸೆಳೆದ ಚುನಾವಣೆ ತುಂಬ ಸ್ವಾರಸ್ಯವೋ ಸ್ವಾರಸ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆ ಪ್ರತಿ ಚುನಾವಣೆಯಲ್ಲಿ ಒಂದಿಲ್ಲೊಂದು ದಾಖಲೆಗಳನ್ನು ಬರೆಯುತ್ತಲೇ ಬಂದಿದೆ. 1985ರಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಿಂದ 301 ಅಭ್ಯರ್ಥಿಗಳು ಕಣಕ್ಕಿಳಿದು ದಾಖಲೆ ಸೃಷ್ಟಿ ಮಾಡಿದ್ದಾರೆ. ಇಡೀ ರಾಷ್ಟ್ರದ ಗಮನ ಸೆಳೆದ ಈ ಚುನಾವಣೆಯಲ್ಲಿ ಹಲವು ಸ್ವಾರಸ್ಯಕರ ಸಂಗತಿಗಳು ನಡೆದವು.

ಪ್ರತಿ ಬಾರಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದರು. ಆಯ್ಕೆಯಾದ ನಂತರ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದರು. ಸದಾ ಗಡಿ ಖ್ಯಾತೆ ತೆಗೆದು ಬೆಳಗಾವಿಯ ನೆಮ್ಮದಿ ಹಾಳು ಮಾಡುತ್ತಿದ್ದರು. ಇದರಿಂದ ಬೇಸತ್ತ ಕನ್ನಡಿಗರು ಹೇಗಾದರೂ ಮಾಡಿ 1985ರ ವಿಧಾನಸಭೆ ಚುನಾವಣೆ ನಿಲ್ಲಿಸಬೇಕೆಂದು ನಿರ್ಧರಿಸಿದರು.

ಕನ್ನಡಿಗರೆಲ್ಲ ಸೇರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಚಿಸಿದರು. ಇದರಿಂದಾಗಿ ಚುನಾವಣೆ ನಿಲ್ಲಬಹುದು ಎನ್ನುವುದು ಅವರ ಯೋಚನೆಯಾಗಿತ್ತು. ಹಾಗಾಗಿ ಒಟ್ಟೂ 301 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಆದರೆ, ಸಾವಿರ ಅಭ್ಯರ್ಥಿಗಳು ನಿಂತರೂ ಚುನಾವಣೆ ನಡೆಸುವುದಾಗಿ ಚುನಾವಣೆ ಆಯೋಗ ನಿರ್ಧರಿಸಿಬಿಟ್ಟಿತು.

ಅಭ್ಯರ್ಥಿಗಳಿಗೆ ಚಿಹ್ನೆ ನೀಡುವುದೇ ದೊಡ್ಡ ಸವಾಲಾಯಿತು. ಚಾಕು, ಚೂರಿ, ಪ್ರಾಣಿ, ಪಕ್ಷಿಗಳೆಲ್ಲ ಮುಗಿದು, ಸಿಕ್ಕ ಸಿಕ್ಕ ವಸ್ತುಗಳ ಚಿಹ್ನೆ ನೀಡಲಾಯಿತು. ಮಹಿಳೆಯೊಬ್ಬಳಿಗೆ ಪುರುಷನಿಗೆ ಶೇವಿಂಗ್ ಮಾಡುತ್ತಿರುವ ಸಲೂನ್ ಚಿಹ್ನೆ ಬಂದಿದ್ದರಿಂದ ಆಕೆ ಅಪಮಾನದಿಂದ ಚುನಾವಣೆಯಿಂದಲೇ ಹಿಂದೆ ಸರಿಯುವ ಯೋಚನೆ ಮಾಡಿದಳು. ಆದರೆ ಆಗಲೇ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದರಿಂದ ಏನೂ ಮಾಡಲಾಗಲಿಲ್ಲ.

ಆಗಿನ ಸಂದರ್ಭದಲ್ಲಿ, ಚುನಾವಣೆಗೆ ಸ್ಪರ್ಧಿಸಿರುವ ಯಾರೇ ಮೃತರಾದರೂ ಚುನಾವಣೆ ಮುಂದಕ್ಕೆ ಹಾಕುವ ಪದ್ಧತಿ ಇತ್ತು. 301ರಲ್ಲಿ ಓರ್ವ ವ್ಯಕ್ತಿ ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ. ವಯಸ್ಸೂ ಆಗಿತ್ತು. ಆತ ಸಾಯುತ್ತಾನೆ, ಚುನಾವಣೆ ಮುಂದಕ್ಕೆ ಹೋಗುತ್ತದೆ ಎಂದು ಬಹುಜನರು ನಿರೀಕ್ಷಿಸಿದ್ದರು.

ಆದರೆ ಮಹಾರಾಷ್ಟ್ರ ಏಕೀಕರಣ ಸಮಿತಿಯವರಿಗೆ ಚುನಾವಣೆ ರದ್ದಾಗುವುದು ಬೇಡವಾಗಿತ್ತು. ಹಾಗಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ದಿನವೂ ಆಸ್ಪತ್ರೆಗೆ ತೆರಳಿ ಆ ವ್ಯಕ್ತಿಗೆ ಹಾಲು, ಬ್ರೆಡ್ ಗಳನ್ನು ನೀಡಿ, ಆತನ ಆರೋಗ್ಯದ ಕುರಿತು ಕಾಳಜಿ ತೆಗೆದುಕೊಂಡು ಚುನಾವಣೆವರೆಗೂ ಸಾಯದಂತೆ ನೋಡಿಕೊಂಡರು. ಚುನಾವಣೆ ಸಾಂಗವಾಗಿ ನಡೆಯಿತು. ಚುನಾವಣೆ ಮುಗಿದ ನಂತರ ಎಂಇಎಸ್ ನವರು ಆಸ್ಪತ್ರೆಗೆ ತೆರಳಿ ಸಾವಿನ ಹಾಸಿಗೆಯ ಮೇಲೆಯೇ ಆತನಿಗೆ ಹಾರಗಳನ್ನು ಹಾಕಿ ಸನ್ಮಾನಿಸಿದರು. ಚುನಾವಣೆ ಮುಗಿದು ಮೂರನೇ ದಿನ ಆತ ಕೊನೆಯುಸಿರೆಳೆದ.

301 ಅಭ್ಯರ್ಥಿಗಳ ಹೆಸರು, ಚಿಹ್ನೆ ಒಳಗೊಂಡ ಬ್ಯಾಲೆಟ್ ಪೇಪರ್ ವೃತ್ತಪತ್ರಿಕೆಯ 4 ಪುಟಗಳಷ್ಟು ದೊಡ್ಡದಾಗಿತ್ತು. ಹೆಸರು ಹುಡುಕಿ ಮತ ಹಾಕುವುದೇ ಮತದಾರರಿಗೆ ದೊಡ್ಡ ಸವಾಲಾಯಿತು.

1985ರಲ್ಲಿ ಕ್ಷೇತ್ರದಲ್ಲಿ ಒಟ್ಟೂ 1,11,931 ಮತದಾರರಿದ್ದರು. ರಾಜಕೀಯ ಪಕ್ಷಳ ಅಭ್ಯರ್ಥಿಗಳು ಸೇರಿದಂತೆ ಒಟ್ಟೂ 301 ಜನರು ಕಣಕ್ಕಿಳಿಯುವ ಮೂಲಕ ಹೊಸ ದಾಖಲೆಯನ್ನೇ ಬರೆದರು. ಈ ವೇಳೆ ಪಕ್ಷೇತರ (ಮಹಾರಾಷ್ಟ್ರ ಏಕೀಕರಣ ಸಮಿತಿ) ಅಭ್ಯರ್ಥಿ ಆರ್.ಎಸ್.ಮಾನೆ 32,401 ಮತ ಪಡೆದು ಜಯಗಳಿಸಿದರು. ಕಾಂಗ್ರೆಸ್ ನಿಂದ ಎಸ್.ವೈ.ಕಾಕತಕರ್ ಸ್ಪರ್ಧಿಸಿ 21,477 ಮತ ಪಡೆದಿದ್ದರು. ಉಳಿದ ಎಲ್ಲ 299 ಅಭ್ಯರ್ಥಿಗಳೂ ಠೇವಣಿ ಕಳೆದುಕೊಂಡಿದ್ದರು.

ಈ ಚುನಾವಣೆ ರಾಷ್ಟ್ರದ ಗಮನ ಸೆಳೆದಿತ್ತು. ರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳು ಬೆಳಗಾವಿಗೆ ಆಗಮಿಸಿದ್ದರು. ದೊಡ್ಡ ಸುದ್ದಿಯಾಯಿತು. ಈ ಚುನಾವಣೆ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಬರೆಯಿತು.

ನಂತರ 1996ರಲ್ಲಿ ಆಂದ್ರಪ್ರದೇಶದ ನಲಗೊಂಡ ಲೋಕಸಭಾ ಕ್ಷೇತ್ರದಿಂದ 480 ಅಭ್ಯರ್ಥಿಗಳು ಸ್ಪರ್ಧಿಸಿ ಬೆಳಗಾವಿಯ ದಾಖಲೆಯನ್ನು ಮುರಿದರು.

https://pragati.taskdun.com/one-and-a-half-crore-rupees-was-seized-again-at-midnight-at-koganoli-check-post/
https://pragati.taskdun.com/if-the-maharashtra-government-continues-to-act-insurance-will-be-implemented-for-the-protection-of-kannadigas-in-maharashtra-cm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button