ಪ್ರಗತಿವಾಹಿನಿ ಸುದ್ದಿ, ಗೋಕಾಕ: ಗೋಕಾಕ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಅಶೋಕ ಪೂಜಾರಿ ಟಿಕೆಟ್ ಕೈ ತಪ್ಪಿದ್ದರಿಂದ ತೀವ್ರ ಗೊಂದಲಕ್ಕೊಳಗಾಗಿದ್ದಾರೆ. ಹಾಗಾಗಿ ಸೋಮವಾರ ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
5 ಬಾರಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿ ಪರಾಭಗೊಂಡಿದ್ದ ಅಶೋಕ ಪೂಜಾರಿ ಈ ಬಾರಿ ಕಾಂಗ್ರೆಸ್ ನಿಂದ ಅದೃಷ್ಟ ಪರೀಕ್ಷೆ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ 2 ವರ್ಷದ ಹಿಂದಯೇ ಕಾಂಗ್ರೆಸ್ ಸೇರಿ ತಯಾರಿಯನ್ನೂ ನಡೆಸಿದ್ದರು. ಆದರೆ ಈಗ ಮಹಾಂತೇಶ ಕಡಾಡಿಗೆ ಗೋಕಾಕ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇದರಿಂದಾಗಿ ಅಶೋಕ ಪೂಜಾರಿ ಶಾಕ್ ಗೆ ಒಳಗಾಗಿದ್ದಾರೆ.
ಗೋಕಾಕ ಕ್ಷೇತ್ರದ ರಾಜಕೀಯ ವ್ಯವಸ್ಥೆ ಬದಲಾಯಿಸಬೇಕೆನ್ನುವ ಏಕೈಕ ಉದ್ದೇಶದಿಂದ ನಾನು ರಾಜಕೀಯ ಮಾಡುತ್ತ ಬಂದವನು. ಬೇರೆ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾದವನಲ್ಲ. ಈ ಬಾರಿ ಟಿಕೆಟ್ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ನನ್ನ ಬೆಂಬಲಿಗರು ಕೆಲಸ ಮಾಡುತ್ತ ಬಂದಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ. ಜೊತೆಗೇ ಬೆಂಬಲಿಗರ ಭಾವನೆಗಳನ್ನೂ ಗೌರವಿಸಬೇಕಾಗುತ್ತದೆ. ಹಾಗಾಗಿ ಸೋಮವಾರ ಜ್ಞಾನ ಮಂದಿರ ಆದ್ಯಾತ್ಮ ಕೇಂದ್ರದಲ್ಲಿ ಬೆಂಬಲಿಗರೊಂದಿಗೆ ಚರ್ಚಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಕೊನೆಗಳಿಗೆಯಲ್ಲಿ ನಾನು ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎಂದು ಕೆಲವರು ಆರೋಪ ಮಾಡುತ್ತಾರೆ. ಆದರೆ ಅದೆಲ್ಲ ಸುಳ್ಳು ಎಂದೂ ಅವರು ಹೇಳಿದರು.
ತಟಸ್ಥರಾಗಿ ಉಳಿಯುತ್ತಾರಾ ಅಥವಾ ಜೆಡಿಎಸ್ ಗೆ ವಾಪಸ್ ಹೋಗುತ್ತಾರಾ ಕಾದು ನೋಡಬೇಕಿದೆ. ಒಂದೊಮ್ಮೆ ಅಶೋಕ ಪೂಜಾರಿ ಅನ್ಯ ಪಕ್ಷಗಳಿಂದ ಅಥವಾ ಸ್ವತಂತ್ರವಾಗಿ ಕಣಕ್ಕಿಳಿದರೆ ಮತ ವಿಭಜನೆಯಾಗಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿಗೆ ಅನುಕೂಲವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ