ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಸಚಿವ ಡಿ.ಬಿ.ಇನಾಮದಾರ ಕುಟುಂಬಕ್ಕೆ ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಪ್ಪಿದ್ದರಿಂದ ಇನಾಮದಾರ ಅವರ ಸೊಸೆ ಲಕ್ಷ್ಮೀ ಬಂಡಾಯದ ಭಾವುಟ ಹಾರಿಸಿದ್ದಾರೆ.
ಇಲ್ಲಿಂದ ಮುಂದೆ ಕಾಂಗ್ರೆಸ್ ಜೊತೆ ನಮ್ಮ ಸಂಬಂಧ ಕಡಿತವಾಗಿದೆ ಎಂದು ಸಾರಿದ್ದಾರೆ.
ಅಭಿಮಾನಿಗಳ ಜೊತೆ ಮಾತನಾಡಿದ ಅವರು, ಇನ್ನು 2 ದಿನದಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇನಾಮದಾರ ಅವರಿಗೆ ಆರೋಗ್ಯ ಸರಿ ಇಲ್ಲ, ಆಸ್ಪತ್ರೆಯಲ್ಲಿದ್ದಾರೆ. ಎಚ್1 ಎನ್ 1 ಎಚ್ 3 ಎನ್ 2 ದಿಂದ ಬಳಲುತ್ತಿದ್ದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ನನಗೆ ಟಿಕೆಟ್ ನೀಡಬೇಕೆಂದು ಕೇಳಲಾಗಿತ್ತು. ಆದರೆ ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಜೊತೆಗೆ ನಮ್ಮ ಸಂಬಂಧವಿರುವುದಿಲ್ಲ ಎಂದು ಅವರು ತಿಳಿಸಿದರು.
ಇನಾಮದಾರ ಅವರ ದೂರದ ಸಂಬಂಧಿ ಬಾಬಾಸಾಹೇಬ ಪಾಟೀಲ ಅವರಿಗೆ ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಮಾವ- ಅಳಿಯ ಮಧ್ಯೆ ಕಳೆದ ಅನೇಕ ವರ್ಷಗಳಿಂದ ರಾಜಕೀಯ ಜಿದ್ದಾ ಜಿದ್ದು ನಡೆಯುತ್ತಿದೆ. ಹಾಗಾಗಿ ಇನಾಮದಾರ ಅವರ ಸೊಸೆ ಲಕ್ಷ್ಮೀ ಅವರಿಗೆ ಟಿಕೆಟ್ ಕೇಳಲಾಗಿತ್ತು. ಈಗ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇನ್ನು 2 ದಿನದಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಲಕ್ಷ್ಮೀ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ