ಪ್ರಗತಿವಾಹಿನಿ ಸುದ್ದಿ, ನಾಗಪುರ: ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕುಳಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆಯೊಡ್ಡಿದ್ದ ಆರೋಪಿ ಜಯೇಶ ಪೂಜಾರಿ @ ಕಾಂತಾಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಲಷ್ಕರ್- ಎ- ತೊಯ್ಬಾ ಹಾಗೂ ನಿಷೇಧಿತ ಪಿಎಫ್ಐ ಸಂಘಟನೆ ಜೊತೆ ಸಂಪರ್ಕವಿರುವುದು ಬಹಿರಂಗಗೊಂಡಿದೆ.
ನಾಗಪುರ ಪೊಲೀಸ್ ಆಯುಕ್ತ ಅಮಿತೇಶಕುಮಾರ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಉಗ್ರ ಸಂಘಟನೆಗಳ ಸಂಪರ್ಕದಿಂದ ಸಂಪೂರ್ಣ ಬ್ರೇನ್ ವಾಷ್ ಆಗಿರುವ ಜಯೇಶ ಜೈಲಿನಲ್ಲಿದ್ದ ದಾವೂದ್ ಗ್ಯಾಂಗ್ ಇತರ ಸದಸ್ಯರ ಜೊತೆ ಸೇರಿ ಸಂಚು ರೂಪಿಸಿದ್ದಾಗಿ ಅವರು ತಿಳಿಸಿದ್ದಾರೆ.
ಹಿಂಡಲಗಾ ಜೈಲಿನಿಂದ ಎರಡು ಬಾರಿ ನಿತಿನ್ ಗಡ್ಕರಿ ಅವರಿಗೆ ಬೆದರಿಕೆಯೊಡ್ಡಿದ್ದ ಈತನನ್ನು ಯುಎಪಿಎ ಕಾಯಿದೆಯಡಿ ಬಂಧಿಸಿ ತನಿಖೆ ಕೈಗೊಳ್ಳಲಾಗುತ್ತಿದೆ. ಮೊದಲೊಮ್ಮೆ 100 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದ ಆರೋಪಿ ಹಣ ನೀಡಲು ಯುವತಿಯೊಬ್ಬಳ ಸಂಖ್ಯೆ ನೀಡಿದ್ದ. ಎರಡು ಬಾರಿ ಈತನ ಕೃತ್ಯಗಳು ನಡೆದಾಗ ನಾಗಪುರ ಪೊಲೀಸರು ಸದ್ದಿಲ್ಲದಂತೆ ಬೆಳಗಾವಿಗೆ ಬಂದು ಈತನನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದೀಗ ವಿಚಾರಣೆಯಿಂದ ಈತ ಒಬ್ಬ ನಟೋರಿಯಸ್ ಕ್ರಿಮಿನಲ್ ಎಂಬುದು ತಿಳಿದುಬಂದಿದ್ದು ನಾಗಪುರ ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ