Kannada NewsKarnataka NewsLatest

*ಉಮೇಶ್ ಕತ್ತಿಯ ಗುಣಗಾನ ಮಾಡಿದ ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಉಮೇಶ್ ಕತ್ತಿ ನಮ್ಮ ಜೊತೆ ಇಲ್ಲ. ಅವರು ಸ್ವರ್ಗದಿಂದಲೇ ನಿಖಿಲ್ ಕತ್ತಿಗೆ, ರಮೇಶ್ ಕತ್ತಿಗೆ ಆಶೀರ್ವಾದ ಮಾಡುತ್ತಿದ್ದಾರೆ. ನೀವೂ ಇವರಿಗೆ ಆಶೀರ್ವಾದ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ಹುಕ್ಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ ಪರ ರೋಡ್ ಶೋ ನಡೆಸಿ ಮಾತನಾಡಿದರು.

ಉಮೇಶ್ ಕತ್ತಿ ಅವರು ಸೋಲಿಲ್ಲದ ಸರದಾರ ಆಗಿದ್ದರು. ವಿಶ್ವನಾಥ್ ಕತ್ತಿಯವರ ಆಕಸ್ಮಿಕ ಸಾವಿನಿಂದ ಉಮೇಶ್ ಕತ್ತಿ ಅವರಿಗೆ ವಿಧಾನ ಸಭೆಗೆ ಪ್ರವೇಶಿಸುವ ಅನಿವಾರ್ಯವಾಗಿ ಸಂದರ್ಭ ಇತ್ತು. ಒಂಬತ್ತು ಬಾರಿ ನಿರಂತರವಾಗಿ ಹುಕ್ಕೇರಿಯನ್ನು ಪ್ರತಿನಿಧಿಸಿ ವಿಧಾನಸಭೆಗೆ ಆಯ್ಕೆ ಆಗಿದ್ದರು. ನಿಮ್ಮೆಲ್ಲರ ಆಶೀರ್ವಾದದಿಂದ ಅವರು ಹಿಂತಿರುಗಿ ನೋಡಲಿಲ್ಲ. ಹುಕ್ಕೇರಿ ಅಭಿವೃದ್ಧಿಗೆ ಕಂಕಣ ಕಟ್ಟಿಕೊಂಡು ನಿರಂತವಾಗಿ ಶ್ರಮಿಸಿದರು. ಯಾವುದೇ ಖಾತೆ ಕೊಟ್ಟರೂ ಯಶಸ್ವಿಯಾಗಿ ನಿಭಾಯಿಸಿದವರು ಉಮೇಶ್ ಕತ್ತಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ರೈತರ ಬಗ್ಗೆ ದೂರದೃಷ್ಟಿ ಹೊಂದಿದ್ದರು
ಉಮೇಶ್ ಕತ್ತಿ ಅವರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇತ್ತು. ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಕಬ್ಬು ತಾಲ್ಲೂಕಿನಿಂದ ಹೊರ ಹೋಗಕೂಡದೆಂದು ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ಇಲ್ಲಿನ ಕಬ್ಬನ್ನು ಇಲ್ಲಿಯೇ ನುರಿಸಿದರು. ಅವರು ಆಹಾರ ಸಚಿವರಾಗಿ ಅಕ್ಕಿ ಜೊತೆ ಉತ್ತರ ಕರ್ನಾಟಕದ ಪಡಿತರಿಗೆ ಜೋಳ ಖರೀದಿ ಮಾಡಬೇಕು ದಕ್ಷಿಣ ಕರ್ನಾಟಕದ ಪಡಿತರಕ್ಕೆ ರಾಗಿ ಖರೀದಿ ಮಾಡಬೇಕು ಎಂದು ಹಠ ಮಾಡಿದರು. ಕರ್ನಾಟಕದ ರೈತರಿಗೆ ಅನುಕೂಲ ಮಾಡಿಕೊಡಲು ಪಡಿತರದಲ್ಲಿ ಜೋಳ, ರಾಗಿ ಖರೀದಿಗೆ ಯಡಿಯೂರಪ್ಪ ಅವರಿಂದ ಆದೇಶ ಮಾಡಿಸಿದರು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಏತ ನೀರಾವರಿ ಮಂಜೂರು ಮಾಡಿಸಿದ್ದರು
ನಾನು ನೀರಾವರಿ ಸಚಿವನಾಗಿದ್ದಾಗ ಸಂಗಮ್ ಡ್ಯಾಮ್ ಯೋಜನೆಗೆ ಅನುಮತಿ ನೀಡಲಾಗಿತ್ತು. ಘಟಪ್ರಭಾ ಕೆನಾಲ್ ನ 32 ಕಿಲೋ ಮೀಟರ್ ಸಂಪೂರ್ಣ ಆಧುನಿಕರಣ ಮಾಡಿದ್ದು ಉಮೇಶ್ ಕತ್ತಿ. ಅಡವಿ ಸಿದ್ದೇಶ್ವರ, ಶಂಕರ ಲಿಂಗ ಏತ ನೀರಾವರಿಗೂ ಉಮೇಶ್ ಕತ್ತಿ ಮಂಜೂರಾತಿ ಮಾಡಿಸಿದ್ದರು. ನಾನು ಮುಖ್ಯಮಂತ್ರಿ ಆಗಿ ಅಲ್ಲ ಒಬ್ಬ ಸಹೋದರನಾಗಿ ನಿನ್ನ ಕೆಲಸ ಮಾಡಿಕೊಡುವುದಾಗಿ ಉಮೇಶ್ ಕತ್ತಿಗೆ ಹೇಳಿದ್ದೆ. ನನಗೆ ಅವರಿಗೆ ಮೂರನೇ ತಲೆಮಾರಿನ ಸಂಬಂಧ ಇದೆ. ಈಗ ಅವರ ಕಾರ್ಯವನ್ನು ರಮೇಶ್ ಕತ್ತಿ ಹಾಗೂ ನಿಖಿಲ್ ಕತ್ತಿ ಮುಂದುವರೆಸಿಕೊಂಡು ಹೋಗುತ್ತಾರೆ. ಅವರಿಗೆ ನೀವು ಆಶೀರ್ವಾದ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಭಾಗದ ಅಭಿವೃದ್ಧಿಗೆ ಬಿಜೆಪಿಗೆ ಮತ ಹಾಕಿ
ಈ ಭಾಗದಲ್ಲಿ ಎರಡು ಸಕ್ಕರೆ ಕಾರ್ಖಾನೆಗಳಿವೆ. ಈ ಭಾಗದ ರೈತರ ಅಭಿವೃದ್ಧಿ ಆಗಬೇಕು. ಸ್ವತಂತ್ರ ಭಾರತದಲ್ಲಿ ಇಂದಿಗೂ ನಡೆಸಿಕೊಂಡು ಬರುತ್ತಿರುವ ಏಕೈಕ ಎಲೆಕ್ಟ್ರಿಕ್ ಸಹಕಾರ ಸೊಸೈಟಿ ಮುಂದುವರೆಸಿಕೊಂಡು ಹೋಗಲು ನಿಖಿಲ್ ಕತ್ತಿ ಅವರು ಗೆಲ್ಲಬೇಕು. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ, ಎಲ್ಲ ಜಮೀನು ನೀರಾವರಿ ಆಗಲು, ರೈತರು ಬೆಳೆದ ಕಬ್ಬಿಗೆ ಉತ್ತಮ ಬೆಲೆ ಸಿಕ್ಕಿ ಅವರ ಬದುಕು ಹಸನಾಗಲು ನೀವು ನಿಖಿಲ್ ಕತ್ತಿ ಮತ್ತು ರಮೇಶ್ ಕತ್ತಿ ಅವರಿಗೆ ಮತ ಹಾಕಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಡಬಲ್ ಎಂಜಿನ್ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ
ಕಾಂಗ್ರೆಸ್ ಅವರು ಇದುವರೆಗೂ ಏನೂ ಮಾಡಲು ಆಗಲಿಲ್ಲ. ಪಂಚಮಸಾಲಿ ಸಮಾಜದವರ ಹೋರಾಟಕ್ಕೆ ಸ್ಪಂದಿಸಿ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ. ಎಲ್ಲ ಸಮಾಜವನ್ನು ಸಮನಾಗಿ ನೋಡಿಕೊಂಡು ಹೋಗುವ ಕೆಲಸ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಡಬಲ್ ಎಂಜಿನ್ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಆತ್ಮ ನಿರ್ಭರ ಯೋಜನೆ, ಸ್ವಚ್ಛ ಭಾರತ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ರಾಜ್ಯ ಸರ್ಕಾರದಿಂದ ವಿದ್ಯಾನಿಧಿ ಮಾಡಿದ್ದೇವೆ, ಡಿಗ್ರಿವರೆಗೂ ಉಚಿತ ಶಿಕ್ಷಣ ಕೊಟ್ಟಿದ್ದೇವೆ, ಜೊತೆಗೆ ಯುವಕರಿಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಇದನ್ನೆಲ್ಲಾ ಮನೆಮನೆಗೆ ತಿಳಿಸಿ ನಿಖಿಲ್ ಕತ್ತಿ ಮತ್ತು ರಮೇಶ್ ಕತ್ತಿ ಅವರುಗಳನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಬೇಕು. ಮೇಲೆ ಕೂತಿರುವ ಉಮೇಶಣ್ಣ ಸಂತೋಷ ಪಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮತದಾರರಲ್ಲಿ ಮನವಿ ಮಾಡಿಕೊಂಡರು.

https://pragati.taskdun.com/variation-in-water-supply-in-belgaum-for-two-days/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button