Kannada NewsLatest

*ಯಮಕನಮರಡಿಯಲ್ಲಿ ಕಾಂಗ್ರೆಸ್‌ ಬಾವುಟ ಹಾರುವುದು ಖಚಿತವೆಂದ ಸತೀಶ್‌ ಜಾರಕಿಹೊಳಿ*

ಉಳ್ಳಾಗಡ್ಡಿ ಖಾನಾಪುರ, ವಾಡಿ ಸಿದ್ಲ್ಯಾಳ, ದಡ್ಡಿ ಗ್ರಾಮಗಳಲ್ಲಿ ಮತಯಾಚಿಸಿದ ಶಾಸಕ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಯಮಕನಮರಡಿ: ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಬಿಜೆಪಿ, ಜೆಡಿಎಸ್ ನ ಅಪಾರ ಸಂಖ್ಯೆಯ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಎಲ್ಲಡೆ ಕಾಂಗ್ರೆಸ್‌ ಪಕ್ಷಕ್ಕೆ ಸಿಗುತ್ತಿರು ಜನ ಬೆಂಬಲ ನೋಡಿದರೆ ಯಮಕನಮರಡಿಯಲ್ಲಿ ಕಾಂಗ್ರೆಸ್‌ ಬಾವುಟ ಹಾರುವುದು ಖಚಿತವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಉಳ್ಳಾಗಡ್ಡಿ ಖಾನಾಪುರ, ವಾಡಿ ಸಿದ್ಲ್ಯಾಳ, ದಡ್ಡಿ ಗ್ರಾಮಗಳ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದ ಶಾಸಕ ಸತೀಶ್‌ ಜಾರಕಿಹೊಳಿಯವರು ಮತಯಾಚಿಸಿ, ಮಾತನಾಡಿದರು.

ಯಮಕನಮರಡಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳನ್ನು ಸುಧಾರಣೆ ಮಾಡಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ 2 ಕೋಟಿಯಿಂದ 5 ಕೋಟಿ ರೂ. ವರೆಗೆ ಅನುದಾನ ನೀಡಲಾಗಿದೆ. ಹಳ್ಳಿಗಳ ಗ್ರಾಮೋದ್ಧಾರಕ್ಕೆ ಶ್ರಮಿಸಿದ್ದೇನೆ ಎಂದು ತಿಳಿಸಿದರು.

ಕೋಮುವಾದಿ ಬಿಜೆಪಿಯನ್ನು ಬೇರು ಸಹಿತ ಕಿತ್ತೊಗೆದು ಸರ್ವ ಜನಾಂಗದ ಅಭಿವೃದ್ಧಿ ಕಲ್ಪನೆಯೊಂದಿಗೆ ಶ್ರಮಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು. ಕ್ಷೇತ್ರದ ಮತದಾರರು ಜಾತಿ, ಧರ್ಮ, ಪಕ್ಷ ಬೇಧಭಾವ ಮರೆತು ತಮ್ಮನ್ನು ಮತ್ತೊಮ್ಮೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಶೋಷಿತ, ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಡ ಜನರಿಗೆ ವಸತಿ ಯೋಜನೆಯಡಿ ದಾಖಲೆಯ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಹಿಂದಿನ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸಾಕಷ್ಟು ಅನುದಾನ ನೀಡಿ, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಆದರೆ, ಇಂದಿನ ಬಿಜೆಪಿ ಸರಕಾರ ಎಸ್ಸಿ-ಎಸ್ಟಿ ಪಂಗಡಕ್ಕೆ ಸಮರ್ಪಕ ಅನುದಾನ ನೀಡಿಲ್ಲ ಎಂದರು.

ಬಿಜೆಪಿ ಸರಕಾರ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೆ ಸಂಪೂರ್ಣ ದಿವಾಳಿ ಮಾಡಿದೆ. ಅಲ್ಲದೇ ಇವರು ಅಧಿಕಾರಕ್ಕೆ ಬಂದ ಮೇಲೆ ಹಿಂದಿನ ಕಾಂಗ್ರೆಸ್ ಸರಕಾರದ ಜನಪರ ಕಾರ್ಯಕ್ರಮಗಳನ್ನು ರದ್ದುಪಡಿಸಿ, ಬಡಜನರನ್ನು ಮತ್ತೆ ಬೀದಿಗೆ ತಳ್ಳಿದೆ. ಬಿಜೆಪಿ ನಾಯಕರಿಗೆ ಅಧಿಕಾರದ ಅಮಲಿನಿಂದ ಜಾತಿ-ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಈ ಬಾರಿ ತಕ್ಕಪಾಠ ಕಲಿಸಿ ಎಂದು ಕರೆ ನೀಡಿದರು.

ಇದೇ ವೇಳೆ ಬಿಜೆಪಿ, ಜೆಡಿಎಸ್‌ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಉಳ್ಳಾಗಡ್ಡಿ ಖಾನಾಪುರ, ವಾಡಿ ಸಿದ್ಲ್ಯಾಳ, ದಡ್ಡಿ ಗ್ರಾಮಗಳ ಕಾರ್ಯಕರ್ತರು ಇದ್ದರು.

https://pragati.taskdun.com/siddaramaiahquestionup-cm-yogi-adityanath/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button