Latest

ಚುನಾವಣಾ ಆಯೋಗಕ್ಕೆ ಪೊರಕೆ ಪೇಚಾಟ; ಮತದಾನಕ್ಕೆ 48 ಗಂಟೆ ಮೊದಲು ಪೊರಕೆ ಬೂತ್ ನಿಂದ ಹೊರಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಮೇ 10ರಂದು ನಡೆಯಲಿರುವ ಚುನಾವಣೆಯ ಮತದಾನ ಪ್ರಕ್ರಿಯೆ ವೇಳೆ ಮತದಾರರ ಮೇಲೆ ಪ್ರಭಾವ ಬೀರುವ ಪಕ್ಷದ ಯಾವುದೇ ಚಟುವಟಿಕೆಗಳನ್ನು ನಡೆಸದಿರಲು ಚುನಾವಣಾ ಆಯೋಗ ಈಗಾಗಲೇ ಕಟ್ಟುನಿಟ್ಟಿನ ಆದೇಶ ನೀಡಿದೆ. ಆದರೆ ಇದೀಗ ಚುನಾವಣಾ ಆಯೋಗಕ್ಕೆ ಪೊರಕೆ ಪೇಚಾಟ ತಂದಿಟ್ಟಿದೆ.

ಎಲ್ಲೇ ಇರಲಿ, ಏನೇ ನಡೆಯಲಿ. ಅಲ್ಲಿನ ಪರಿಸರ ಅಚ್ಚುಕಟ್ಟಾಗಿಸಲು ಸದ್ದಿಲ್ಲದೆ ಬಳಕೆಯಾಗುವ ವಸ್ತು ಎಂದರೆ ಪೊರಕೆ. ಅಂತೆಯೇ ಮತದಾನದ ದಿನ ಮತಗಟ್ಟೆಗಳನ್ನೂ ಮತದಾರರು ಬರುವ ಮುಂಚೆ ಅಚ್ಚುಕಟ್ಟಾಗಿ ಇಡಲು ಪೊರಕೆಯಿಂದ ಕಸಗುಡಿಸಲೇಬೇಕು. ಹಾಗೆ ಕಸ ಗುಡಿಸಿದವರು ಪೊರಕೆಯನ್ನು ಒಂದು ಮೂಲೆಯಲ್ಲಿಟ್ಟು ಹೋಗುವುದು ಸಾಮಾನ್ಯ.

ಆದರೆ ಈ ಬಾರಿ ಪೊರಕೆಯ ಬಗ್ಗೆ ಅತ್ಯಂತ ಕಾಳಜಿಯಿಂದ ವ್ಯವಹರಿಸಬೇಕಿದೆ. ಮತಗಟ್ಟೆಯಲ್ಲಾಗಲಿ, ಅದರ ಸುತ್ತಲಿನ ಪರಿಸರದಲ್ಲಾಗಲಿ ಪೊರಕೆ ಯಾರಿಗೂ ಕಾಣುವಂತಿಲ್ಲ. ಕಾರಣವಿಷ್ಟೇ, ಆಮ್ ಆದ್ಮಿ ಪಕ್ಷದ ಚಿನ್ಹೆ ಪೊರಕೆಯಾಗಿದ್ದು ಅದು ಮತದಾನಕ್ಕೆ ಬಂದ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅದನ್ನು ಅಡಗಿಸುವ ಕೆಲಸಕ್ಕೆ ಮುಂದಾಗಬೇಕಾಗಿರುವುದು ಅನಿವಾರ್ಯ.

ಹೀಗಾಗಿ ಮತದಾನ ನಡೆಯುವ ಮತಗಟ್ಟೆಗಳಲ್ಲಿ ಎಲ್ಲೂ ಪೊರಕೆಗಳನ್ನು ಇಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮತದಾನಕ್ಕೆ 48 ಗಂಟೆ ಮೊದಲೇ ಎಲ್ಲ ಸ್ವಚ್ಛತೆ ಮಾಡಿ ಪೊರಕೆ ಯಾರಿಗೂ ಕಾಣದಂತೆ ಇಡಲು ಚುನಾವಣಾ ಆಯೋಗ ಸೂಚನೆ ನೀಡಿದೆ. ಅಷ್ಟೇ ಅಲ್ಲ, ಪೊರಕೆ ಚಿತ್ರ ಕೂಡ ಎಲ್ಲೂ ಇರದಂತೆ ನೋಡಿಕೊಳ್ಳಲು ಸೂಚಿಸಿದೆ.

ಅನೇಕ ಪ್ರಮುಖ ಕೆಲಸಗಳ ಒತ್ತಡಗಳ ಮಧ್ಯೆಯೇ ಪೊರಕೆ ಅಡಗಿಸುವ ಕೆಲಸಕ್ಕೂ ಮತಗಟ್ಟೆ ಅಧಿಕಾರಿಗಳು ತೀವ್ರ ಗಮನ ನೀಡುವ ಪರಿಸ್ಥಿತಿ ಎದುರಾಗಿದೆ. ಈ ನಿರ್ಧಾರದ ಬೆನ್ನಲ್ಲೇ ಕೆಲವರು ಕಾಂಗ್ರೆಸ್ ಚಿನ್ಹೆ ಎಂಬ ಕಾರಣಕ್ಕೆ ಕೈ ಕತ್ತರಿಸಲಾದೀತೇ? ಎಂದು ಲೇವಡಿಯನ್ನೂ ಮಾಡಿದ್ದಾರೆ. ಆದಾಗ್ಯೂ ಆಯೋಗ ಪೊರಕೆ ವಿಷಯದಲ್ಲಿ ಬಹು ಕಟ್ಟುನಿಟ್ಟಿನ ನಿರ್ಧಾರ ಪ್ರಕಟಿಸಿದೆ.

https://pragati.taskdun.com/modi-has-the-power-to-make-congress-party-non-existent-in-this-country-union-minister-athawale/
https://pragati.taskdun.com/shashikala-jollenippanicampaign/
https://pragati.taskdun.com/prithviraj-chavan-grand-road-show-for-lakshmi-hebbalkar-in-hindalaga-congress-show-of-strength/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button