Kannada NewsKarnataka NewsUncategorized

ಟಿಕೆಟ್ ಕೈ ತಪ್ಪಿದ್ರೂ ಪಕ್ಷಾಂತರ ಮಾಡಲಿಲ್ಲ, ಕೈ ಕಟ್ಟಿ ಕೂಡ್ರಲಿಲ್ಲ: BJP ಪರ ನಿರಂತರ ಪ್ರಚಾರ ನಡೆಸಿದ ಡಾ.ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಕ್ಷದಲ್ಲಿ ಟಿಕೆಟ್ ಸಿಗಲಿಲ್ಲ ಎಂದ ತಕ್ಷಣ ಪಕ್ಷಾಂತರ ಮಾಡುವ ಇಲ್ಲವೇ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಬಹಳಷ್ಟು ಜನರನ್ನು ನಾವು ನೋಡಿದ್ದೇವೆ. ಕೊನೆಗೆ ತಟಸ್ಥರಾಗಿಯಾದರೂ ಕುಳಿತುಕೊಂಡು ಬಿಡುತ್ತಾರೆ.

ಆದರೆ ಬೆಳಗಾವಿಯ ನಿಯತಿ ಫೌಂಡೇಶನ್ ಚೇರಮನ್, ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಇದಕ್ಕೆ ಅಪವಾದ. ಅವರು ಖಾನಾಪುರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ ಸುಮಾರು ಒಂದು ವರ್ಷದಿಂದ ಚುನಾವಣೆ ಸಿದ್ಧತೆ ಮಾಡಿಕೊಂಡಿದ್ದರು. ಕ್ಷೇತ್ರವನ್ನೆಲ್ಲ ಸುತ್ತಿ ಜನಪರ ಕೆಲಸ ಮಾಡಿದ್ದರು. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಸಾವಿರಾರು ಕಾರ್ಯಕರ್ತರು ಇವರ ಪರವಾಗಿ ಕ್ಷೇತ್ರದಲ್ಲಿ ಓಡಾಡಿದ್ದರು. ಲಕ್ಷಾಂತರ ರೂ. ಖರ್ಚು ಮಾಡಿದ್ದರು. ಹಲವು ಬಾರಿ ದೆಹಲಿ ನಾಯಕರನ್ನೂ ಭೇಟಿಯಾಗಿ ಬಂದಿದ್ದರು.

ಆದರೆ ಕೊನೆಯ ಕ್ಷಣದಲ್ಲಿ ಡಾ.ಸೋನಾಲಿ ಸರ್ನೋಬತ್ ಅವರಿಗೆ ಟಿಕೆಟ್ ಕೈ ತಪ್ಪಿತು. ವಿಠ್ಠಲ ಹಲಗೇಕರ್ ಅವರಿಗೆ ಟಿಕೆಟ್ ನೀಡಲಾಯಿತು. ಇದರಿಂದ ಸೋನಾಲಿ ಸರ್ನೋಬತ್ ಹಾಗೂ ಅವರ ಬೆಂಬಲಿಗರು ತೀವ್ರ ನಿರಾಶರಾದರು. ಕಾರ್ಯಕರ್ತರ ಸಭ ನಡೆಸಿದರು. ಅವರ ಅಭಿಪ್ರಾಯ ಆಲಿಸಿದರು. ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಕಾರ್ಯಕರ್ತರು ತೀವ್ರ ಒತ್ತಡ ಹೇರಿದರು. ಅವರಿಗೆ ಏನು ಮಾಡಬೇಕೆಂದು ತಿಳಿಯದಾಯಿತು. ಒಂದೆಡೆ ಪಕ್ಷ ನಿಷ್ಠೆ, ಇನ್ನೊಂದೆಡೆ ಬೆಂಬಲಿಗರ ಒತ್ತಡ. ಒಮ್ಮೆಲೆ ಕಾರ್ಯಕರ್ತರ ಮಾತನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರೊಂದಿಗೆ ಸಮಾಲೋಚನೆ ನಡೆಸಿದರು. ಅನೇಕ ಹಿತೈಷಿಗಳ ಜೊತೆ ಚರ್ಚಿಸಿದರು.

ಅಂತಿಮವಾಗಿ ಪಕ್ಷ ನಿಷ್ಠೆ ಗೆದ್ದಿತು. ಪಕ್ಷಕ್ಕಾಗಿ ಕೆಲಸ ಮಾಡಬೇಕು. ತಾಳ್ಮೆಯಿಂದ ಕಾಯಬೇಕು ಎಂದು ನಿರ್ಧರಿಸಿದರು. ಈ ಚುನಾವಣೆಯಲ್ಲಿ ಪಕ್ಷ ವಹಿಸುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಘೋಷಿಸಿದರು. ಖಾನಾಪುರ, ಬೆಳಗಾವಿ ಗ್ರಾಮೀಣ ಸೇರಿದಂತೆ ವಿವಿಧೆಡೆ ಪ್ರಚಾರಕ್ಕೆ ಧುಮುಕಿದರು. ತಮ್ಮ ವೈದ್ಯಕೀಯ ವೃತ್ತಿಯ ಒತ್ತಡದ ಮಧ್ಯೆಯೂ ಪಕ್ಷಕ್ಕಾಗಿ, ಪಕ್ಷದ ಅಭ್ಯರ್ಥಿಗಳಿಗಾಗಿಕೆಲಸ ಮಾಡಿದರು. ಬಹಿರಂಗ ಪ್ರಚಾರ, ಮನೆ ಮನೆ ಪ್ರಚಾರ ಎಲ್ಲವನ್ನೂ ಮಾಡಿದರು. ಕಾರ್ಯಕರ್ತರೊಂದಿಗೆ ಬಿಸಿಲಲ್ಲೂ ಅಡ್ಡಾಡಿ ಮತ ಯಾಚಿಸಿದರು. ಪಕ್ಷ ನಿಷ್ಠೆ ಮೆರೆದರು.

https://pragati.taskdun.com/i-will-faithfully-do-any-work-that-party-instruct-dr-sonali-sarnobat/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button