ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ನೂತನವಾಗಿ ನಿರ್ಮಿಸಲಾದ ಸಂಸತ್ ಭವನ ಮೇ 28ರಂದು ಲೋಕಾರ್ಪಣೆಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನ ಲೋಕಾರ್ಪಣೆಗೊಳಿಸಲಿದ್ದಾರೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸಂಸತ್ ಭವನ ಉದ್ಘಾಟಿಸಲು ಕೋರಿ ಆಹ್ವಾನ ನೀಡಿದರು.
64,500 ಚದರ್ ಅಡಿ ವಿಸ್ತೀರ್ಣದಲ್ಲಿ ತ್ರಿಕೋನಾಕಾರವಾಗಿ ನಿರ್ಮಿಸಲಾದ ಸಂಸತ್ ಭವನ ನಾಲ್ಕು ಅಂತಸ್ತುಗಳನ್ನು ಹೊಂದಿದೆ. 888 ಸಂಸದರು ಹಾಗೂ ರಾಜ್ಯಸಭೆಯಲ್ಲಿ 300 ಸದಸ್ಯರು ಕುಳಿತು ಕಲಾಪ ನಡೆಸಬಹುದಾಗಿದ್ದು ಜಂಟಿ ಅಧಿವೇಶನದ ವೇಳೆ 1280 ಸದಸ್ಯರು ಕುಳಿತು ಕಲಾಪದಲ್ಲಿ ಭಾಗವಹಿಸಬಹುದಾಗಿದೆ.
ಸಂಸದರ ವಿಶ್ರಾಂತಿ ಕೊಠಡಿ, ವಾಚನಾಲಯ, ಬಹುಸಮಿತಿಗಳ ಕೊಠಡಿಗಳು, ಊಟದ ಹಾಲ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಒಳಗೊಂಡಿರುವ ಸುಸಜ್ಜಿತ ಹಾಗೂ ಆಕರ್ಷಕ ಸಂಸತ್ ಭವನವನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನಿರ್ಮಾಣ ಮಾಡಿದೆ. ಕಟ್ಟಡ ಜ್ಞಾನದ್ವಾರ, ಶಕ್ತಿ ದ್ವಾರ ಮತ್ತು ಕರ್ಮದ್ವಾರವೆಂಬ ಮೂರು ಮುಖ್ಯ ದ್ವಾರಗಳನ್ನು ಹೊಂದಿದ್ದು ವಿಐಪಿಗಳು, ಸಂದರ್ಶಕರು ಹಾಗೂ ಸಂಸದರಿಗೆ ಪ್ರತ್ಯೇಕ ದ್ವಾರಗಳನ್ನು ನಿರ್ಮಿಸಲಾಗಿದೆ.
ಭಾರತೀಯ ಸಂಸ್ಕೃತಿ ಬಿಂಬಿಸುವ ಪ್ರಾದೇಶಿಕ ಕಲೆಗಳು, ದೇಶೀ ಕರಕುಶಲ ವಸ್ತುಗಳು, ಜವಳಿ ಹಾಗೂ ವಾಸ್ತುಶಿಲ್ಪ ವೈವಿಧ್ಯಗಳನ್ನು ಬಿಂಬಿಸುವ ಪ್ರಾಂಗಣ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. ಜತೆಗೆ ಹಸಿರು ತಂತ್ರಜ್ಞಾನವನ್ನು ಸಹ ಿದು ಒಳಗೊಂಡಿದೆ.
ನೂತನ ಸಂಸತ್ ಭವನ ನಿರ್ಮಾಣಕ್ಕೆ 2020ರ ಡಿಸೆಂಬರ್ 10ರಂದು ಈ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಶಂಕುಸ್ಥಾಪನೆ ನೆರವೇರಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ