Kannada NewsKarnataka NewsLatest

ಬೆಳಗಾವಿಯಲ್ಲಿ ಡ್ರಗ್ಸ್ ಮಾರಾಟ ಜಾಲ ಪೊಲೀಸ್ ಬಲೆಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 

ಬೆಳಗಾವಿಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ನಡೆಯುತ್ತಿದ್ದ ಮಾದಕದ್ರವ್ಯ ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದು, 8 ಜನರನ್ನು ಬಂಧಿಸಿದ್ದಾರೆ.

ಪೊಲೀಸ್ ಆಯುಕ್ತ ಲೋಕೇಶ್ ಕುಮಾರ, ಡಿಸಿಪಿ ಗಳಾದ ಸೀಮಾ ಲಾಟ್ಕರ್ ಮತ್ತು ಯಶೋಧಾ ವಂಟಗೋಡಿ ಮಾರ್ಗದರ್ಶನದಲ್ಲಿ, ಎಸಿಪಿ ಎನ್.ವಿ.ಬರಮನಿ ನೇತೃತ್ವದಲ್ಲಿ ಮಾಳಮಾರುತಿ ಇನಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಆಝಾದ್ ನಗರ ಮತ್ತು ನೈಭವ ನಗರ ಪ್ರದೇಶದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಟ್ರಕ್ ಚಾಲಕ ಅಖಿಲಅಹ್ಮದ್ ಕುತಬುದ್ದೀನ್ ಮುನವಳ್ಳಿ ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳಿಂದ ಮಾದಕ ದ್ರವ್ಯ ತರುತ್ತಿದ್ದ. ಆತೀಪ್ ನಜೀರ್ ಅಹಮ್ಮದ್ ಚಚಡಿ ಹಾಗೂ ಸಲ್ಮಾನ್ ಪತ್ತೆ ಖಾನ್ ಮಾರಾಟ ಮಾಡುತ್ತಿದ್ದರು.

ಸೂರಜ್ ಕಲ್ಲಪ್ಪ ಅಗಸರ್ ಹಾಗೂ ಅಮೀರ್ ಅಬ್ದುಲ್ ಲತೀಫ್ ಬೇಗ್ ಇವರು ಸಣ್ಣ ಸಣ್ಣ ಪ್ಯಾಕೆಟ್ ತಯಾರಿಸಿ ಬೆಳಗಾವಿಯ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜು ಬಳಿ ವಿತರಣೆ ಮಾಡುತ್ತಿದ್ದರು.

ಇವರೆಲ್ಲರನ್ನೂ ಬಂಧಿಸಿ, ಅವರಿಂದ ಒಂದೂವರೆ ಕೆಜಿ ಗಾಂಜಾ, 4 ಮೊಬೈಲ್, 2 ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.

ಮಾಳಮಾರು ತಿ ಪಿಎಸ್ಐ ಆರ್.ಜಿ.ಸೌದಾಗರ್, ಪ್ರೊಬೆಷನರಿ ಪಿಎಸ್ಐ ಅವಿನಾಶ ಯರಗೊಪ್ಪ ಮತ್ತು ಸಿಬ್ಬಂದಿ ದಾಳಿ ನಡೆಸಿದರು. ಲಕ್ಕರ್ , ಮುಜಾವರ್, ಕುರೇರ, ಗುಡದಯ್ಯಗೋಳ, ದೊಡಮನಿ, ಚಿಗರಿ, ಮಹಾಮನಿ, ಶಂಕರ್ ಪಾಟೀಲ, ನವೀನ್ ಕುಮಾರ, ನಂಜಣ್ಣವರ್ ಮೊದಲಾದವರು ಪಾಲ್ಗೊಂಡಿದ್ದರು.

ಇನ್ನೊಂದು ಪ್ರಕರಣ

ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಭರತೇಶ ಕಾಲೇಜು ಬಳಿ ಕ್ಯಾಂಟೋನ್ಮೆಂಟ್ ಲಾರಿ ಪಾರ್ಕಿಂಗ್ ಬಳಿ ಗಾಂಜಾ ಹಾಗೂ ಪನ್ನಿ ಮಾರಾಟ ಮಾಡುತ್ತಿದ್ದವರ ಮೇಲೆ ಎಸಿಪಿ ನಾರಾಯಣ ಬರಮನಿ ಮತ್ತು ಮಾರ್ಕೆಟ್ ಠಾಣೆಯ ಇನಸ್ಪೆಕ್ಟರ್ ವಿಜಯ ಮುರಗುಂಡಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಚವಾಟ ಗಲ್ಲಿಯ ಅನಿಕೇಶ ಅನಿಲ ಮಧುಮತ್ತ (21) ಈಗ ಬೈಲಹೊಂಗಲ ತಾಲೂಕು ಹಣ್ಣಿಕೇರಿಯಿಂದ ಗಾಂಜಾ ತಂದು ವೀರಭದ್ರ ನಗರದ ಸಮೀರ್ ಸಾಧಿಕ್ ದೇಸಾಯಿ (22), ಮಾರುತಿ ನಗರದ ರಾಮಚಂದ್ರ ಮಾರುತಿ ಪವಾರ್ (30) ಇವರ ಮೂಲಕ ಮಾರಾಟ ಮಾಡುತ್ತಿದ್ದ.

ಇವರನ್ನು ಬಂಧಿಸಿ 650 ಗ್ರಾಮ್ ಗಾಂಜಾ, 126 ಚೀಟಿ ಪನ್ನಿ, ಒಂದು ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.

ಪಿಎಸ್ಐ ವಿಠ್ಠಲ ಹಾವನ್ನವರ್ ಹಾಗೂ ಸಿಬ್ಬಂದಿಯಾದ ಮಾಳಗಿ, ಖಾನಾಪುರ, ಮೈಲಾಕಿ, ಅಶೀರ್ ಜಮಾದಾರ ಮೊದಲಾದವರು ಕಾರ್ಯಾಚರಣೆಯಲ್ಲಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button