Kannada NewsKarnataka News

ಅನುಭವ ಮಂಟಪ ವಿಶ್ವದ ಗಮನ ಸೆಳೆದ ಕನ್ನಡದ ಶಕ್ತಿ ಕೇಂದ್ರ : ಡಾ.ಗುರುಪಾದ ಮರಿಗುದ್ದಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಗಮನ ಸೆಳೆದ ಕನ್ನಡದ ಶಕ್ತಿ ಕೇಂದ್ರವಾಗಿತ್ತು. ಹೀಗಾಗಿ ಅಫ್ಘಾನಿಸ್ತಾನದಿಂದ ಮರುಳಶಂಕರ ದೇವರು, ಕಾಶ್ಮೀರದಿಂದ ಮೋಳಿಗೆಯ ಮಾರಯ್ಯ ಮೊದಲಾದವರು ಕನ್ನಡ ನಾಡಿನ ಕಲ್ಯಾಣ ನಗರಕ್ಕೆ ಬಂದರು. ಹೀಗೆ ಬಂದ ಮರುಳಶಂಕರ ದೇವರ ಕುರಿತು ಡಾ.ದಯಾನಂದ ನೂಲಿ ಅವರು ಬೃಹತ್ ಕಾದಂಬರಿ ಬರೆದಿರುವುದು ಗಮನಾರ್ಹ ಎಂದು ಡಾ. ಗುರುಪಾದ ಮರಿಗುದ್ದಿ  ಅಭಿಪ್ರಾಯ ಪಟ್ಟರು.
ಬೆಳಗಾವಿ ನಾಗನೂರು ಮಠದ ಎಸ್.ಜಿ.ಬಿ.ಐ.ಟಿ ಸಭಾಂಗಣದಲ್ಲಿ ದಿನಾಂಕ 4ರಂದು ಸಂಕೇಶ್ವರದ ಪ್ರಾ. ಬಿ.ಎಸ್. ಗವಿಮಠ ಸಾಹಿತ್ಯ ಪ್ರತಿಷ್ಠಾನ, ಬೆಳಗಾವಿ ಜಿಲ್ಲೆಯ ಲೇಖಕಿಯರ ಸಂಘ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ  ಸಹಯೋಗದಲ್ಲಿ ಜರುಗಿದ ಮರುಳಶಂಕರ ದೇವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಮಾಳಿ ಅವರು ಪುಸ್ತಕದ ವಸ್ತು ವಿವೇಚನೆ  ಕುರಿತು ಮಾತನಾಡಿದರು. ಲೇಖಕರಾದ ಡಾ.ದಯಾನಂದ ನೂಲಿ ಅವರು ವೈದ್ಯ ವೃತ್ತಿಯ ಜೊತೆಗೆ ಶರಣ ಸಾಹಿತ್ಯದ ನಿರಂತರ ಅಧ್ಯಯನ ಕಾರಣವಾಗಿ ಇಂತಹ ಬೃಹತ್ ಕಾದಂಬರಿ ರಚಿಸಿದೆ ಎಂದು ಹೇಳಿದರು.
ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಗ್ರಂಥ ಬಿಡುಗಡೆ ಮಾಡಿ, ಡಾ.ನೂಲಿ ಅವರ ಈ ಕೃತಿ ಕಾಳಿದಾಸನ ರಘುವಂಶ, ಮೇಘದೂತ ಮಹಾಕಾವ್ಯಗಳ ಮಾದರಿಯಲ್ಲಿ ರಚನೆ ಆಗಿದೆ. ಭಾರತದ ಭೂಗೋಳ ಮತ್ತು ಇತಿಹಾಸದ ಸಮಗ್ರ ಚಿತ್ರಣ ನೀಡುತ್ತದೆ ಎಂದು ಹೇಳಿದರು.
ನಿಡಸೋಸಿ ದುರದುಂಡೀಶ್ವರಮಠದ ಪೂಜ್ಯ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು, ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ.ಎಂ.ವಿ.ಜಾಲಿ ಅವರನ್ನು ಸನ್ಮಾನಿಸಲಾಯಿತು.
ಡಾ. ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎಚ್.ಬಿ.ರಾಜಶೇಖರ, ಡಾ. ಸರಜೂ ಕಾಟ್ಕರ್, ಡಾ. ಗುರುದೇವಿ ಹುಲೆಪ್ಪನವರಮಠ ಕೃತಿ ಕುರಿತು ಮಾತನಾಡಿದರು.
ಪ್ರಾ. ಬಿ.ಎಸ್. ಗವಿಮಠ ಸ್ವಾಗತ ಮಾಡಿದರು. ಡಾ. ಭಾರತಿ ಮಠದ ಮತ್ತು ಅಶೋಕ ಮಳಗಲಿ ಕಾರ್ಯಕ್ರಮ ನಿರೂಪಿಸಿದರು. ಎಲ್.ವಿ. ಪಾಟೀಲ ವಂದಿಸಿದರು. ನಯನಾ ಗಿರಿಗೌಡರ ವಚನ ಪ್ರಾರ್ಥನೆ ಸಲ್ಲಿಸಿದರು.
ಹಿರಿಯರಾದ ಎಲ್.ಎಸ್.ಶಾಸ್ತ್ರಿ, ಎಸ್.ವಾಯ್. ಹಂಜಿ, ಪಿ.ಜಿ.ಕೆಂಪಣ್ಣವರ, ಶಿರೀಷ ಜೋಷಿ, ಪ್ರಕಾಶ ಗಿರಿಮಲ್ಲನವರ, ಆಶಾ ಯಮಕನಮರಡಿ, ಬಸವರಾಜ ಗಾರ್ಗಿ ರಾಮಕೃಷ್ಣ ಮರಾಠೆ ಮೊದಲಾದವರು ಉಪಸ್ಥಿತರಿದ್ದರು.
https://pragati.taskdun.com/newly-married-coupledeathheart-attack/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button