ದೆಹಲಿ ಕರ್ನಾಟಕ ಸಂಘದಿಂದ ಡಾ.ಪ್ರಭಾಕರ ಕೋರೆಯವರಿಗೆ ಸನ್ಮಾನ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಕನ್ನಡ ಭಾಷೆಯು ಇಂದು ಜಾಗತಿಕ ಮಟ್ಟದಲ್ಲಿ ವಿಸ್ತರಿಸುತ್ತಿದೆ. ಕನ್ನಡ ಭಾಷೆಯನ್ನು ಗೌರವಿಸುವುದು ಹಾಗೂ ಪೋಷಿಸಿ ಬೆಳೆಸುವುದು ಕನ್ನಡಿಗರೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆಯವರು ನುಡಿದರು. ಅವರು ದೆಹಲಿ ಕರ್ನಾಟಕ ಸಂಘವು 18 ಜುಲೈ, 2019 ರಂದು ಕರ್ನಾಟಕದ ಕೇಂದ್ರ ಸಚಿವರು, ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷಾಭಿಮಾನ ಮಾತ್ರ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುತ್ತದೆ. ಇಂದಿನ ಜಾಗತಿಕರಣ ಸಂದರ್ಭದಲ್ಲಿ ಪ್ರತಿಯೊಂದು ಭಾಷೆಯು ತನ್ನ ಉಳಿವಿಗಾಗಿ ಹೋರಾಡುತ್ತಿದೆ. ಈ ಸಂದರ್ಭದಲ್ಲಿ ಕನ್ನಡವೂ ಕೂಡ ತಾಂತ್ರಿಕ ಭಾಷಾ ಸ್ಥಾನಮಾನವನ್ನು ಪಡೆದಿರುವುದು ಹೆಮ್ಮೆಯ ಸಂಗತಿ. ದೆಹಲಿಯ ಕರ್ನಾಟಕ ಸಂಘವು ಈ ಭಾಗದಲ್ಲಿ ಕನ್ನಡವನ್ನು ಕಟ್ಟುವ, ಬೆಳೆಸುವ ಮಹತ್ತರ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ.
ಅಂತೆಯೇ ಕರ್ನಾಟಕದಿಂದ ಆಯ್ಕೆಯಾದ ಸಂಸದರನ್ನು ಸತ್ಕರಿಸಿದ್ದು ಹೆಮ್ಮೆಯನ್ನುಂಟು ಮಾಡಿದೆ. ಕರ್ನಾಟಕ ಸಂಘ ವಿಸ್ತಾರೋನ್ನತವಾಗಿ ಬೆಳೆಯುವುದರ ಮೂಲಕ ಕನ್ನಡ ಭಾಷೆ, ಸಾಹಿತ್ಯವನ್ನು ಪೋಷಿಸಲೆಂದು ಡಾ.ಕೋರೆಯವರು ಆಶಿಸಿದರು.
ಇದೇ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ಪದಾಧಿಕಾರಿಗಳು ಡಾ.ಪ್ರಭಾಕರ ಕೋರೆಯವರನ್ನು ಸನ್ಮಾನಿಸಿದರು. ವೇದಿಕೆಯ ಮೇಲೆ ಸಂಸದರಾದ ಉಮೇಶ ಜಾಧವ, ಅಣ್ಣಾಸಾಹೇಬ ಜೊಲ್ಲೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ