Uncategorized

*ವೈದ್ಯರಿಂದ ಸಂಗೀತ ಸಂಜೆ; ಹಾಡು ಹಾಡಿ ಹೆಜ್ಜೆ ಹಾಕಿ ರೋಗಿಗಳನ್ನು ರಂಜಿಸಿದ ಕೆಎಲ್ಇ ಆಸ್ಪತ್ರೆ ಡಾಕ್ಟರ್ಸ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವೈದ್ಯರು ಕೇವಲ ಗಡಿಬಿಡಿ, ರೋಗಿಗಳ ಆರೈಕೆ, ಚಿಕಿತ್ಸೆ ನೀಡುವದನ್ನಷ್ಟೇ ಮಾಡುವುದಿಲ್ಲ. ಹಾಡೂ ಕೂಡ ಹಾಡ್ತಾರೆ. ಅವರಲ್ಲಿಯೂ ಕಲೆಗಾರರಿದ್ದಾರೆ. ಸಂಗೀತ ಸಾಧನಗಳನ್ನು ನುಡಿಸುತ್ತಾರೆ… ಅದಕ್ಕೆ ತಕ್ಕಂತೆ ಕುಣಿಯುತ್ತಾರೆ… ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತ ರೋಗಿಗಳ ದುಃಖ, ಸಂಬಧಿಕರ ಗಡಿಬಿಡಿಗೆ ಧ್ವನಿಯಾಗುತ್ತಿದ್ದ ವೈದ್ಯರು ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿಂದು ಹಾಡು ಹಾಡಿ ರೋಗಿ ಹಾಗೂ ಅವರ ಸಂಬಂಧಿಗಳಿಗೆ ಮನರಂಜನೆ ನೀಡಿ, ತಾವೂ ಸಂಭ್ರಮಿಸಿದ ಸಂದರ್ಭವಿದು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶಧೋನಾ ಕೇಂದ್ರದ ರಿಕ್ರಿಯೇಶನ್ ಕೇಂದ್ರದ ವತಿಯಿಂದ ಏರ್ಪಡಿಸಲಾದ ಸಂಗೀತ ಸಂಜೆಯ ಹಾಡಿನಲ್ಲಿ ಜೋಗದ ಸಿರಿ ಬೆಳಕಿನಲ್ಲಿ, ಮಾಯದಂತ ಮಳೆ ಬಂತಣ್ಣ ಸೇರಿದಂತೆ ಹಲವು ಹಾಡುಗಳಿಗೆ ವೈದ್ಯರು ಧ್ವನಿಗೂಡಿಸಿದರು.

ಹರಿಯ ತಜ್ಞವೈದ್ಯರಾದ ಡಾ. ಎ ಎಸ್ ಗೋಧಿ ಅವರು ಕಿಸಿ ಕಿ ಮುಸ್ಕರಾಹತೋ ಪೆ, ಡಾ. ಎಂ ಬಿ ಬೆಲ್ಲದ ಅವರು ಪಲ್ ಪಲ್ ದಿಲ ಕೆ ಪಾಸ, ಡಾ. ರಾಜೇಶ ಪವಾರ ಅವರು ಮೈ ಜಿಂದಗಿ ಕಾ ಸಾಥ, ಥೇರಾ ಏರಿ ಅಂಬರದಾಗ ನೇಸರ ನಗುತಾನೆ, ಡಾ. ಬಸವರಾಜ ಬಿಜ್ಜರಗಿ ಅವರು ದೆಖಾ ನಾ ಹೈ ರೆ ಸೋಚಾನಾ, ಡಾ. ಜ್ಯೋತಿ ನಾಗಮೋತಿ ಡಾ. ಹೇಮಾ ಪಾಟೀಲ ಅವರು ವಚನ ಗಾಯನ, ಡಾ. ರೂಪಾ ಬೆಲ್ಲದ, ಡಾ. ಸರೋಜಾ , ಡಾ. ರೇಖಾ ಪಾಟೀಲ, ಡಾ. ಸದಾನಂದ ಪಾಟೀಲ ಅವರು, ಸಿಟ್ಟಾö್ಯಕ ನನ್ನಾಕಿ ನಾನೇನ ಮಾಡೇನ ಎಂಬ ಜಾನಪದ ಹಾಡಿ ರಂಜಿಸಿದರು. ಡಾ. ಶೀತಲ ಪಟ್ಟಣಶೆಟ್ಟಿ, ಡಾ. ಇಮ್ರಾನ ಜಗದಾಳ, ಡಾ. ಶೀಲಾ ಪೋತ್ದಾರ ಡಾ. ಅಚಿಜಲಿ ಜೋಶಿ ಅವರು ಹಾಡುಗಳನ್ನು ಹಾಡಿ ರಂಜಿಸಿದರೆ, ಡಾ. ರಾಜೇಂದ್ರ ಭಾಂಡನಕರ ಅವರು ಭೈರವಿ ಗಾನವನ್ನು ಪ್ರಸ್ತುತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್), ಎಂ ದಯಾನಂದ ಅವರು ಮಾತನಾಡಿ, ವೈದ್ಯರಲ್ಲಿಯೂ ಕೂಡ ಕಲೆಗಳಿವೆ. ಅವರೂ ಕೂಡ ಎಲ್ಲರಂತೆ ಮನರಂಜನೆ ನೀಡಬಲ್ಲರು. ಆದರೆ ಅವರಿಗೆ ಸಮಯದ ಅಭಾವ ಕಾಡುತ್ತದೆ. ಆದರೂ ಕೂಡ ಅವರು ಸಂತೋಷವಾಗಿರಲು ಮನರಂಜನೆ ಅವಶ್ಯ. ಕಚೇರಿಗಳಲ್ಲಿನ ಕೆಲಸದೊತ್ತಡ ನಿವಾರಣೆಗೆ ಸಹಕಾರಿಯಾಗಲಿದೆ. ಆದ್ದರಿಂದ ಎಲ್ಲ ಚಿಂತೆಗಳನ್ನು ದೂರ ಮಾಡುವ ಶಕ್ತಿ ಹೊಂದಿರುವ ಸಂಗೀತ ಹಾಗೂ ಮನರಂಜನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಗೀತ ಶಾಲೆಯ ಶ್ರೀಮತಿ ಸುನಿತಾ ಪಾಟೀಲ, ಶ್ರೀಮತಿ ದುರ್ಗಾ ಕಾಮತ ನಾಡಕರ್ಣಿ, ಅವರಿಗೆ ತಬಲಾ ಜೀತೆಂದ್ರ ಸಾಬನ್ನವರ, ಹರ‍್ಮೋನಿಯಂ ಯಾದವೇಂದ್ರ ಪೂಜಾರಿ ಅವರು ಸಾಥ ನೀಡಿದರು. ಈ ಸಂದರ್ಭದಲ್ಲಿ ಕೆಎಲ್‌ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿತಿನ ಗಗಾನೆ, ಡಾ. ವಿ ಡಿ ಪಾಟೀಲ, ಡಾ. ವಿ ಎ ಕೋಠಿವಾಲೆ, ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿ ಎಂ ಪಟ್ಟಣಶೆಟ್ಟಿ, ಅನಿಲ ಇಂಗಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವೈದ್ಯರ ದಿನಾಚರಣೆ ಅಂಗವಾಗಿ ಆಸ್ಪತ್ರೆಯ ವೈದ್ಯರಿಗೆ ಪುಷ್ಪಗುಚ್ಚ ನೀಡಿ ಸ್ವಾಗತಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button