Kannada NewsKarnataka NewsLatest

ಇದು ಪವರ್ ಆಫ್ ಬೆಳಗಾವಿ ಪಾಲಿಟಿಕ್ಸ್!

ಇದು ಪವರ್ ಆಫ್ ಬೆಳಗಾವಿ ಪಾಲಿಟಿಕ್ಸ್!

ಎಂ.ಕೆ.ಹೆಗಡೆ, ಬೆಳಗಾವಿ –

“ಬೆಳಗಾವಿಗೆ ಸರಕಾರವನ್ನು ಅಧಿಕಾರಕ್ಕೆ ತರುವ ತಾಖತ್ತೂ ಇದೆ, ಸರಕಾರವನ್ನು ಕೆಡಗುವ ತಾಖತ್ತೂ ಇದೆ. ಇದು ಹಲವಾರು ಬಾರಿ ಸಾಭೀತಾಗಿದೆ”

ಈ ಮಾತನ್ನು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಆಗಾಗ ಹೇಳುತ್ತಿರುತ್ತಾರೆ. ಹಿಂದಿನ ಅನೇಕ ಉದಾಹರಣೆಗಳನ್ನು ನೋಡಿದಾಗ ಇದು ನಿಜವೆನಿಸಿದೆ. ವಿಶ್ವಾಸವಿಟ್ಟರೆ ಬೆಳಗಾವಿ ರಾಜಕಾರಣಿಗಳಿಗೆ ಸರಕಾರ ಉಳಿಸಲೂ ಗೊತ್ತು, ವಿಶ್ವಾಸ ಕೆಟ್ಟರೆ ಉರುಳಿಸಲೂ ಗೊತ್ತು.

ಪ್ರಸ್ತುತ ಮೈತ್ರಿ ಸರಕಾರ ಉರುಳಿಸಲೂ, ಬಿಜೆಪಿ ಸರಕಾರ ಸ್ಥಾಪಿಸಲೂ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವವರು ಬೆಳಗಾವಿ ರಾಜಕಾರಣಿಗಳೇ.

ಈಗ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಪ್ರತಿ ಹೆಜ್ಜೆ ಹೆಜ್ಜಿಗೂ ಬೆಳಗಾವಿಯ ಕರಿ ನೆರಳು ಕಾಣಿಸುತ್ತದೆ. ರಾಜಕೀಯ ಕರಾಳತೆ ಆರಂಭವಾಗಿದ್ದೂ ಬೆಳಗಾವಿಯಿಂದಲೇ… ಬೆಳೆಯುತ್ತಿರುವುದೂ ಬೆಳಗಾವಿಯಿಂದಲೇ… ಮುಕ್ತಾಯವಾಗುವುದೂ ಬೆಳಗಾವಿಯಿಂದಲೇ… ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಹಾಗೆ ನೋಡಿದರೆ ಸಧ್ಯದ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖವಾಗಿ ಮೂವರ ಪಾತ್ರ ಕಾಣುತ್ತದೆ. ಜೊತೆಗೆ ಇನ್ನೂ ಮೂವರ ನೆರಳು ಹರಿದಾಡಿದೆ.

ಪಿಎಲ್ಡಿ ಬ್ಯಾಂಕ್ ಅಲ್ಲ!

ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಈಗಿನ ರಾಜ್ಯ ರಾಜಕೀಯ ಸ್ಥಿತಿಗೆ ಪ್ರಮುಖ ಕಾರಣ ಎನ್ನುವುದು ಸಾಮಾನ್ಯ ಅಭಿಪ್ರಾಯ. ಆದರೆ ಮೇಲ್ನೋಟಕ್ಕೆ ಹಾಗೆ ಕಂಡರೂ ನಿಜ ಅದಲ್ಲ. ಅದಕ್ಕೂ ಮೊದಲೇ ಆರಂಭವಾಗಿತ್ತು.

ಲಕ್ಷ್ಮಿ ಹೆಬ್ಬಾಳಕರ್ ಗ್ರಾಮೀಣ ಕ್ಷೇತ್ರದ ಚುನಾವಣೆಗೆ ಎರಡನೇ ಬಾರಿಗೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲೇ ಈಗಿನ ದ್ವೇಷ ರಾಜಕಾರಣದ ಬೇರು ಕಾಣಿಸುತ್ತದೆ. ಆಗ ಅವರು ಗೆಲ್ಲಬಾರದೆಂದು ಕಾಂಗ್ರೆಸ್ ಪ್ರಭಾವಿ ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವುದು ಅವರಿಗೆ ಮನದಟ್ಟಾಗಿತ್ತು.

ಲಕ್ಷ್ಮಿ ಹೆಬ್ಬಾಳಕರ್ ಪರವಾಗಿದ್ದ ನಾಲ್ವರು ಜಿಲ್ಲಾ ಪಂಚಾಯಿತಿ ಸದಸ್ಯರು ಅವರ ವಿರುದ್ಧವಾಗುವ ಸ್ಥಿತಿಗೆ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕಣಕ್ಕಿಳಿಯುವುದಕ್ಕೆ ಪಕ್ಷದ ಮುಖಂಡರೇ ಕಾರಣ ಎನ್ನುವುದು ಅವರಿಗೆ ಖಚಿತವಾಗಿತ್ತು. ಹಾಗಾಗಿಯೇ ಏಕಾಂಗಿಯಾಗಿ ಹೋರಾಟ ಆರಂಭಿಸಿದರು. ಭಾರೀ ಅಂತರದಿಂದ ಗೆದ್ದು ತಾಖತ್ತು ತೋರಿಸಿದರು.

ಶಾಸಕರಾಗಿ ಕಳೆದ 14 ತಿಂಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಅಭಿವೃದ್ಧಿ ಅನುದಾನ ತಂದು ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವತ್ತ ಹೆಜ್ಜೆ ಇಡುವ ಮೂಲಕವೂ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ರಮೇಶ ಬೆಂಬಲಿಸಿದ್ದ ಡಿಕೆಶಿ

ನಂತರದಲ್ಲಿ ಪಿಎಲ್ ಡಿ ಬ್ಯಾಂಕ್ ರಾಜಕೀಯ, ಎಸ್ ಟಿಪಿ ಪ್ಲ್ಯಾಂಟ್ ರಾಜಕೀಯ ಇವೆಲ್ಲ ಮುಂದಿನ ಪೂರಕ ಬೆಳವಣಿಗೆಗಳಷ್ಟೆ. ಆ ವೇಳೆ ಡಿ.ಕೆ.ಶಿವಕುಮಾರ ಎಂಟ್ರಿ ಮಾಡಿದ್ದು ರಮೇಶ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಆಕ್ರೋಶಕ್ಕೆ ಕಾರಣ ಎನ್ನುವುದು ಈಗ ಬಿಂಬಿತವಾಗುತ್ತಿರುವ ಸಂಗತಿ.

ಆದರೆ ಅದಕ್ಕೂ ಮೊದಲು ಸಿದ್ದರಾಮಯ್ಯ ಅವಧಿಯಲ್ಲಿ ರಮೇಶ ಜಾರಕಿಹೊಳಿ ಅವರನ್ನು ಮಂತ್ರಿ ಪದವಿವರೆಗೂ ತಂದು ನಿಲ್ಲಿಸಿದವರೂ ಡಿ.ಕೆ.ಶಿವಕುಮಾರ ಅವರೇ ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ.

ಸತೀಶ್ ಜಾರಕಿಹೊಳಿ ಅವರ ವಿರೋಧ ಕಟ್ಟಿಕೊಂಡು ಡಿ.ಕೆ.ಶಿವಕುಮಾರ, ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿದರು. ಇದಕ್ಕೆ ಲಕ್ಷ್ಮಿ ಹೆಬ್ಬಾಳಕರ್ ಸಹಾಯ ಕೂಡ ಇತ್ತು. ಆದರೆ ಬದಲಾದ ರಾಜಕೀಯದಲ್ಲಿ ಅವರೆಲ್ಲರ ವಿರೋಧ ಕಟ್ಟಿಕೊಂಡರು ರಮೇಶ್.

3-4 ಬಾರಿ ವಿಫಲ

ಇವೆಲ್ಲ ಹಳೆಯ ಕಥೆಗಳು. ಆದರೆ ಸಧ್ಯದ ರಾಜ್ಯ ರಾಜಕೀಯದ ಬಂಡಾಯ ಶುರುವಾಗಲು ರಮೇಶ ಜಾರಕಿಹೊಳಿ ಪಾತ್ರ ಬಹುದೊಡ್ಡದಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. 3-4 ಬಾರಿ ಅವರು ಹತ್ತಾರು ಶಾಸಕರನ್ನು ಕಟ್ಟಿಕೊಂಡು ಕಾಂಗ್ರೆಸ್ ನಿಂದ ಹೊರಗೆ ಬರಲು ಪ್ರಯತ್ನಿಸಿದ್ದರು,  ಯಶಸ್ವಿಯಾಗಿರಲಿಲ್ಲ.

ಆದರೆ ಈ ಬಾರಿ ಇನ್ನೂ ಕೆಲವರು ಅತೃಪ್ತರು ಸೇರಿಕೊಂಡಿದ್ದರಿಂದ ಅದು ಯಶಸ್ಸಿನ ಹಂತಕ್ಕೆ ಬಂದು ನಿಂತಿದೆ. ಹಾಗಾಗಿ ಪ್ರಸ್ತುತ ಸಮ್ಮಿಶ್ರ ಸರಕಾರ ಅಧಿಕಾರ ಕಳೆದುಕೊಂಡರೆ ಅದರ ಮೂಲ ಬೇರು ಬೆಳಗಾವಿ ಎನ್ನುವುದು ಸ್ಪಷ್ಟ.

ಚಾಣಾಕ್ಷ ರಾಜಕಾರಣಿ ಬಾಲಚಂದ್ರ ಎಂಟ್ರಿ

ರಮೇಶ ಜಾರಕಿಹೊಳಿ ರಾಜಕೀಯವಾಗಿ ಚಾಣಾಕ್ಷರಲ್ಲ. ಅವರಿಗೆ ಕಾಂಗ್ರೆಸ್ ಮೇಲೆ ಸಿಟ್ಟಿತ್ತು. ಅಲ್ಲಿಂದ ಹೊರಗೆ ಬರಬೇಕಿತ್ತು. ಆದರೆ ಹೇಗೆ ಎನ್ನುವ ತಂತ್ರ ಗೊತ್ತಿರಲಿಲ್ಲ. ಇದಕ್ಕಾಗಿ ಸತೀಶ್ ಜಾರಕಿಹೊಳಿ ಸಹಾಯ ಪಡೆಯಲು ಪ್ರಯತ್ನಿಸಿದರಾದರೂ ಅವರು ಕೈಜೋಡಿಸಲಿಲ್ಲ. ರಮೇಶ್ ಪದಚ್ಯುತಿಯಾದ ಜಾಗದಲ್ಲಿ ಸತೀಶ್ ಸಚಿವರಾದರು.

ಈ ಹಂತದಲ್ಲಿ ಎಲ್ಲ ತಂತ್ರ ಹೆಣೆದವರು ಅವರ ಇನ್ನೊಬ್ಬ ಸಹೋದರ ಬಾಲಚಂದ್ರ ಜಾರಕಿಹೊಳಿ. ಬಾಲಚಂದ್ರ ನಿಜವಾಗಿ ಚಾಣಾಕ್ಷ ರಾಜಕಾರಣಿ. ಬೆಳಗಾವಿ ಜಿಲ್ಲೆಯಲ್ಲಿ ಹಾಲು ಒಕ್ಕೂಟ, ಸಹಕಾರ ಒಕ್ಕೂಟ ಸೇರಿದಂತೆ ಹಲವಾರು ಸಂಸ್ಥೆಗಳನ್ನು ಸದ್ದಿಲ್ಲದೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತ ಬರುತ್ತಿದ್ದಾರೆ.

ಅವರು 10 ವರ್ಷದ ಹಿಂದೆ ಆಪರೇಶನ್ ಕಮಲಕ್ಕೆ ಬಲಿಯಾಗಿ ಅಧಿಕಾರವನ್ನೂ ಅನುಭವಿಸಿದ್ದರು, ಒಂದಿಷ್ಟು ನೋವನ್ನೂ ಉಂಡಿದ್ದರು, ರಾಜಕೀಯದ ಪಾಠಗಳನ್ನೂ ಕಲಿತಿದ್ದರು.

ತೆರೆಮರೆಯಲ್ಲಿ ಕೆಲಸ

ಬಾಲಚಂದ್ರ ಜಾರಕಿಹೊಳಿ ಕಲಿತ ಆಗಿನ ಪಾಠ ಈಗ ಉಪಯೋಗವಾಯಿತು. ರಮೇಶ್ ಮತ್ತವರ ಗ್ಯಾಂಗ್ ಹಿಂದೆ ಬಾಲಚಂದ್ರ ಅತ್ಯಂತ ನಾಜೂಕಾಗಿ ತಂತ್ರ ಹೆಣೆದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೆಲವರು ಮಾಡಿದ ತಪ್ಪಿನಿಂದ 2-3 ಬಾರಿ ತಂತ್ರ ವಿಫಲವಾಗಿತ್ತು.

ಆದರೂ ಎಲ್ಲೂ ದುಡುಕದೆ, ಯಾವುದರಲ್ಲೂ ಕಣಿಸಿಕೊಳ್ಳದೆ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ತೆರೆಮರೆಯಲ್ಲೇ ಜಾಲ ಹೆಣೆಯುತ್ತ ಬಂದಿದ್ದರು ಬಾಲಚಂದ್ರ. ಅದು ಈಗ ಕೊನೆಯ ಹಂತಕ್ಕೆ ಬಂದು ನಿಂತಿದೆ.

ಈ ಬೆಳವಣಿಗೆಯಲ್ಲಿ ಸತೀಶ್ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ ಇವರೆಲ್ಲ ಪರವೋ… ವಿರೋಧವೋ… ಅಳಿಲು ಸೇವೆ ಸಲ್ಲಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಶ್ರೀಮಂತ ಪಾಟೀಲ ಕೂಡ ಮುಂಬೈ ಸೇರಿಕೊಡು ದೊಡ್ಡಮಟ್ಟದಲ್ಲೇ ಸುದ್ದಿಮಾಡಿದರು.

ಒಟ್ಟಾರೆ, ಇಂದಿನ ಈ ರಾಜಕೀಯ ಬೆಳವಣಿಗೆಯುದ್ದಕ್ಕೂ ಬೆಳಗಾವಿಯ ನೆರಳು ಕಾಣಿಸುತ್ತಲೇ ಬಂದಿದೆ. ಬೆಳಗಾವಿಯ ರಾಜಕಾರಣಿಗಳು ಒಬ್ಬರಿಗಿಂತ ಮತ್ತೊಬ್ಬರು ಗಟ್ಟಿಗರು ಎನ್ನುವುದು ಸಭೀತಾಗಿದೆ.

ಮುಂದೆ ಯಾವ ಸರಕಾರ ಬಂದರೂ… ಯಾರನ್ನು ಕಡೆಗಣಿಸಿದರೂ ಬೆಳಗಾವಿಯವರನ್ನು ಕಡೆಗಣಿಸುವಂತಿಲ್ಲ ಎಂಬ ಎಚ್ಚರಿಕೆಯ ಸಂದೇಶ ಕೊಟ್ಟಂತಾಗಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ. ಹೆಚ್ಚಿನ ಸುದ್ದಿಗಳಿಗಾಗಿ https://pragati.taskdun.com ನೋಡಿ)

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button