Kannada NewsKarnataka NewsLatest

ಟೋಲ್ ಪ್ಲಾಜಾದವರ ‘ಅನುಚಿತ’ ವರ್ತನೆ ತಡೆಯಲು ‘ಉಚಿತ’ದ ಮದ್ದು; ಹಾಲಿಗಳಿಗೆ ಫ್ರೀ.., ಮಾಜಿಗಳಿಗೂ ಫ್ರೀ..!

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೈವೇಗಳಲ್ಲಿ ಟೋಲ್ ಪ್ಲಾಜಾದವರು ಶಾಸಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರಂತೆ. ರಾಜ್ಯ ವಿಧಾನಸಭೆ ಕಲಾಪದಲ್ಲಿ ಈ ಬಗ್ಗೆ ಕೇಳಿ ಬಂದ ಆಕ್ಷೇಪಕ್ಕೆ ಸ್ಪೀಕರ್ ಯು.ಟಿ. ಖಾದರ್ ಅವರು ಹೊಸ ಮದ್ದು ಶಿಫಾರಸು ಮಾಡಿದ್ದಾರೆ. ಅದೇನೆಂದರೆ ಹಾಲಿ ಶಾಸಕರಿಗಂತೂ ಸದ್ಯ ಫ್ರೀ ಇದೆ. ಇದರೊಂದಿಗೆ ಮಾಜಿ ಶಾಸಕರಿಗೂ ಫ್ರೀ..!

ಟೋಲ್ ಪ್ಲಾಜಾಗಳಲ್ಲಿ ಶಾಸಕರ ಮೇಲೆ ಗೂಂಡಾ ವರ್ತನೆ ತೋರಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಸದನದ ಗಮನಕ್ಕೆ ಸೆಳೆದರು. “ಶಾಸಕರಿಗೆ ಉಚಿತವಾಗಿ ಪ್ರಯಾಣಿಸಲು ಪಾಸ್ ಗಳನ್ನು ನೀಡಲಾಗಿದೆ. ಆದರೆ ಟೋಲ್ ಪ್ಲಾಜಾ ಸಿಬ್ಬಂದಿ ಅದನ್ನು ಪೊಲೀಸರಂತೆ ತಪಾಸಣೆ ಮಾಡುತ್ತಾರೆ. ಜತೆಗೆ ಗೂಂಡಾ ವರ್ತನೆ ತೋರುತ್ತಾರೆ” ಎಂದು ಅವರು ದೂರಿದರು.

“ಕೆಲ ದಿನಗಳ ಹಿಂದೆ ಬೆಂಗಳೂರು- ಮೈಸೂರು ಹೆದ್ದಾರಿಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದ ಸಿಬ್ಬಂದಿ ನನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ಶಾಸಕರ ಪಾಸ್ ತೋರಿಸಿದರೂ ಅನುಚಿತವಾಗಿ ನಡೆದುಕೊಂಡರು. ಈ ವಿಷಯಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ನಿರ್ಧರಿಸಿದ್ದೇನೆ” ಎಂದು ನರೇಂದ್ರಸ್ವಾಮಿ ಹೇಳಿದರು.

ಟೋಲ್ ಪ್ಲಾಜಾದಲ್ಲಿ ಶಾಸಕರಿಗೆ ಆಗುತ್ತಿರುವ ಅವಮಾನ ತಡೆಯಬೇಕು ಎಂಬ ಅವರ ಮೊರೆಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, “ಟೋಲ್ ಪ್ಲಾಜಾಗಳಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಲಿ ಶಾಸಕರ ಜತೆ ಮಾಜಿ ಶಾಸಕರಿಗೂ ಫ್ರೀ ಆಗಿ ಬಿಡುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ರಾಜ್ಯ ಸರಕಾರ ನಿರ್ದೇಶಿಸಬೇಕು” ಎಂದು ಹೆಚ್ಚುವರಿ ಸೌಲಭ್ಯವನ್ನೇ ಶಿಫಾರಸು ಮಾಡಿದರು.

ಟೋಲ್ ವಿಷಯಕ್ಕೆ ಭಾರೀ ಟ್ರೋಲ್:

ಟೋಲ್ ವಿಷಯವೀಗ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಟ್ರೋಲ್ ಆಗುತ್ತಿದೆ. “ಬಡವರಿಗಾಗಿ ‘ಉಚಿತ’ ನೀಡುವುದರಲ್ಲಿ ತರ್ಕಬದ್ಧತೆ ಇದೆ. ಆದರೆ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವ ಶಾಸಕರು ಟೋಲ್ ನೀಡಲೂ ಆಗದಷ್ಟು ಬಡವರಾ? ಆಯ್ತು.. ಮಾಜಿ ಶಾಸಕರಿಗೇಕೆ ಫ್ರೀ..? ಮಾಜಿಯಾದ ನಂತರ ಅವರು ಬಡವರಾಗ್ತಾರಾ” ಎಂದು ಕೆಲವರು ಕಿಚಾಯಿಸಿದ್ದಾರೆ.

“ಶಾಸಕರೊಂದಿಗೇ ಇಷ್ಟು ಅನುಚಿತವಾಗಿ ವರ್ತಿಸಲಾಗುತ್ತಿದೆ ಎಂದರೆ ಜನಸಾಮಾನ್ಯರ ಜತೆ ಅವರ ವರ್ತನೆಗಳು ಹೇಗಿರಬಹುದು ಎಂಬುದನ್ನು ಜನಪ್ರತಿನಿಧಿಗಳು ಅರಿಯಬೇಕು. ಹಾಲಿ, ಮಾಜಿ ಶಾಸಕರಿಗೆಲ್ಲ ದಬ್ಬಾಳಿಕೆಯಿಂದ ಮುಕ್ತಿ ಕೊಡಲು ‘ಉಚಿತ ಭಾಗ್ಯ’ ನೀಡುವುದಾದರೆ ಎಲ್ಲರಿಗೂ ಈ ಭಾಗ್ಯ ದಯಪಾಲಿಸಲು ರಾಜ್ಯ ಸರಕಾರ ಮುಂದಾಗಲಿ” ಎಂದು ಸಹ ಕೆಲವರು ‘ಉಚಿತ’ ಸಲಹೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button