*ಸದನದಲ್ಲೇ ಪೆನ್ ಡ್ರೈವ್ ಪ್ರದರ್ಶನಕ್ಕೆ ಸಿದ್ಧ ಎಂದ ಹೆಚ್.ಡಿ.ಕೆ; ವಿಪಕ್ಷ-ಆಡಳಿತ ಪಕ್ಷಗಳ ಸದಸ್ಯರ ನಡುವೆ ವಾಗ್ಯುದ್ಧ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಪೆನ್ ಡ್ರೈವ್ ಕದನ ಜೋರಾಗಿದ್ದು, ವರ್ಗಾವಣೆ ದಂಧೆ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ನಡುವೆ ವಾಗ್ವಾದವೇ ನಡೆಯಿತು.
ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಆತ್ಮಹತ್ಯೆ ಯತ್ನ ವಿಚಾರವನ್ನು ವಿಧಾನಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಸ್ತಾಪಿಸುತ್ತಾ, ವರ್ಗಾವಣೆಯೆ ಇದಕ್ಕೆ ಕಾರಣ. ಬಸ್ ಚಾಲಕ ಜಗದೀಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಿದರು. ಇದೇ ವೇಳೆ ಇಂಧನ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ವರ್ಗಾವಣೆ ದಂಧೆ ನಡೆದಿದೆ. ನನ್ನ ಬಳಿ ಪೆನ್ ಡ್ರೈವ್ ದಾಖಲೆಗಳಿವೆ ಎಂದು ಹೇಳಿದರು.
ಈ ವೇಳೆ ಎದ್ದುನಿಂತ ಇಂಧನ ಸಚಿವ ಕೆ.ಜೆ.ಜಾರ್ಜ್, ಪೆನ್ ಡ್ರೈವ್ ದಾಖಲೆಗಳಿವೆ ಎಂದು ಕುಮಾರಸ್ವಾಮಿ ಪೆನ್ ಡ್ರೈವ್ ತೋರಿಸಿ ಹೇಳಿಕೆ ಕೊಡುತ್ತಲೇ ಇದ್ದಾರೆ. ದಾಖಲೆಗಳಿದ್ದರೆ ಅದನ್ನು ಸ್ಪೀಕರ್ ಅವರಿಗೆ ಕೊಡಿ ಎಂದು ಹೇಳಿದರು. ಸರ್ಕಾರದಲ್ಲಿ ಯಾವ ಭ್ರಷ್ಟಾಚಾರವೂ ನಡೆಯುತ್ತಿಲ್ಲ. ಕುಮಾರಸ್ವಾಮಿಯವರು ಸುಮ್ಮನೇ ಆರೋಪಗಳನ್ನು ಮಾಡುತ್ತಾ ತೇಜೋವಧೆ ಮಾಡುತ್ತಿದ್ದಾರೆ. ಈ ರೀತಿ ತೇಜೋವಧೆ ನಮಗೂ ಮಾಡಲು ಬರುತ್ತದೆ ಎಂದು ಗುಡುಗಿದರು.
ಸಚಿವರ ಮಾತಿಕೆ ತಿರುಗೇಟು ನೀಡಿದ ಕುಮಾರಸ್ವಾಮಿ ಸದನದಲ್ಲಿ ಪೆನ್ ಡ್ರೈವ್ ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿ. ಸ್ಪೀಕರ್ ಒಪ್ಪಿಗೆ ಕೊಟ್ಟರೇ ಸದನದಲ್ಲೇ ಪೆನ್ ಡ್ರೈವ್ ಪ್ರದರ್ಶನ ಮಾಡುತ್ತೇನೆ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು. ಇದೇ ವೇಳೆ ಡಿವೈ ಎಸ್ ಪಿ ಗಣಪತಿ ಆತ್ಮಹತ್ಯೆ ವಿಚಾರವನ್ನು ಪ್ರಸ್ತಾಪಿಸಿ ಅವರೂ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಕುಮಾರಸ್ವಾಮಿ ಆರೋಪಿಸಿದರು.
ಕುಮಾರಸ್ವಾಮಿ ಹೇಳಿಕೆಗೆ ಸಚಿವ ಕೆ.ಜೆ.ಜಾರ್ಜ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕುಮಾರಸ್ವಾಮಿ ನಿಮ್ಮ ಹಣೆಬರಹ ಗೊತ್ತಿದೆ, ಕುಳಿತುಕೊಳ್ಳಿ, ಯಾವ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ? ಎಲ್ಲವೂ ಗೊತ್ತಿದೆ ಎಂದು ಹೇಳುತ್ತಿದ್ದಂತೆ ಕೆ.ಜೆ.ಜಾರ್ಜ್ ಬೆಂಬಲಕ್ಕೆ ಸಚಿವ ಎಂ.ಬಿ.ಪಾಟೀಲ್ ನಿಂತರು. ಅನಗತ್ಯ ಆರೋಪ ಮಾಡದೇ ಕುಮಾರಸ್ವಾಮಿ ದಾಖಲೆಗಳಿದ್ದರೆ, ಪೆನ್ ಡ್ರೈವ್ ಇದ್ದರೆ ಅದನ್ನು ಬಿಡುಗಡೆ ಮಾಡಲಿ. ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಎಲ್ಲವೂ ಗೊತ್ತಿದೆ ಎಂದು ಹೇಳಿದರು.
ಈ ವೇಳೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರ ನಡಿವೆ ಗದ್ದಲ-ಕೋಲಾಹಲವೇ ನಡೆಯಿತು. ಸದಸ್ಯರಿಗೆ ಕುಳಿತುಕೊಳ್ಳುವಂತೆ ಸ್ಪೀಕರ್ ಖಾದರ್ ಸೂಚಿಸಿದರೂ ಯಾರೂ ಕೇಳಿಸಿಕೊಳ್ಲದೇ ಗಲಾಟೆ ಮುಂದುವರೆಸಿದರು. ವಿಧಾನಸಭೆ ಕಲಾಪ ಕೆಲಕಾಲ ರಣರಂಗದಂತೆ ಮಾರ್ಪಟ್ಟಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ