*ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಮುಖ ಪಾತ್ರವಹಿಸಿದ್ದ ಜೈನಮುನಿ ಹತ್ಯೆ ಖಂಡನೀಯ; ನಿಡಸೋಸಿ ಜಗದ್ಗುರು*

ಪ್ರಗತಿವಾಹಿನಿ ಸುದ್ದಿ; ಸಂಕೇಶ್ವರ: ಸಮಾಜದಲ್ಲಿ ಶಾಂತಿ ನೆಲೆಸುವಲ್ಲಿ ಮಠಾಧೀಶರು ಹಾಗೂ ಮುನಿಗಳ ಪಾತ್ರ ಮಹತ್ವದ್ದಾಗಿದ್ದು, ಹಿರೆಕೂಡಿ ಜೈನ ಮುನಿಗಳ ಹತ್ಯೆ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿದೆ ಎಂದು ನಿಡಸೋಸಿ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು,ಹಿರೆಕೂಡಿ ಗ್ರಾಮದ ನಂದಿ ಪರ್ವತ ಆಶ್ರಮದ ೧೦೮ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಿರುವುದು ನೋವು ತಂದಿದೆ. ಜೈನ ಸಮುದಾಯ ಈ ಮಹಾರಾಜರು ಭಕ್ತ ಸಮುದಾಯಕ್ಕೆ ಉತ್ತಮ ಮಾರ್ಗ ತೋರಿದ್ದರು. ಇಂತಹ ಮುನಿ ಮಹಾರಾಜರ ಜೊತೆ ಯಾವುದೇ ವ್ಯವಹಾರಗಳಿದ್ದರೂ ಸಮಾಜದ ಹಿರಿಯರ ಜೊತೆಗೆ ಚರ್ಚಿಸಿ ಬಗೆಹರಿಸಬಹುದಿತ್ತು. ಈ ವ್ಯವಹಾರ ಹತ್ಯೆಯ ರೂಪ ಪಡೆದಿರುವುದು ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದರು.
ಇಂತಹ ಘಟನೆಗಳು ಸಮಾಜದ ದಾರಿತಪ್ಪಿಸುವ ಸಂದೇಶಗಳಿಗೆ ಕಾರಣವಾಗುತ್ತವೆ. ಯಾವುದೇ ಸಮಸ್ಯೆಗಳಿದ್ದರೂ ಪರಸ್ಪರ ಬಗೆಹರಿಸಿಕೊಳ್ಳುವಂತಹ ಸನ್ನಿವೇಶಗಳು ಭವಿಷ್ಯದ ಬದುಕಲ್ಲಿ ಬದಲಾವಣೆ ತರುತ್ತವೆ. ಅಲ್ಲದೇ ಇಂತಹ ಕೃತ್ಯಗಳನ್ನು ಎಲ್ಲ ಧರ್ಮಿಯರು ಖಂಡಿಸುತ್ತೇವೆ ಎಂದರು.