*ಸದನದಲ್ಲಿ ಪ್ರತಿಧ್ವನಿಸಿದ ಜೈನಮುನಿ ಹತ್ಯೆ ಪ್ರಕರಣ; ಯಾರ ಪ್ರಭಾವಕ್ಕೂ ಮಣಿಯಲ್ಲ ಎಂದ ಸಿಎಂ ಸಿದ್ದರಾಮಯ್ಯ*
ಸಾಮಾನ್ಯ ಪ್ರಕರಣದಂತೆ ಸ್ಥಳೀಯ ಪೊಲೀಸರು ತನಿಖೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಅಧಿವೇಶನದಲ್ಲಿ ಪ್ರತಿಧ್ವನಿಸಿದ್ದು, ಬಿಜೆಪಿ ಸದಸ್ಯರು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಜೈನಮುನಿ ಹತ್ಯೆ ಪ್ರಕರಣ ವಿಷಯ ಪ್ರಸ್ತಾಪಿಸಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಜೈನಮುನಿ ಹತ್ಯೆ ಪ್ರಕರಣವನ್ನು ಸಾಮಾನ್ಯ ಕೊಲೆ ಪ್ರಕರಣದಂತೆ ಭಾವಿಸಿದ್ದೀರಾ. ಸ್ಥಳೀಯ ಪೊಲಿಸರು ಇದೊಂದು ಸಾಮಾನ್ಯ ಪ್ರಕರಣ ಎಂಬಂತೆ ತನಿಖೆ ನಡೆಸಿದ್ದಾರೆ. ಹಾಗಾಗಿ ತನಿಖೆಯನ್ನು ಸಿಬಿಐಗೆ ವಹಿಸಬೇಕು ಸತ್ಯಾಸತ್ಯತೆ ಹೊರಬರಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಇತರ ಬಿಜೆಪಿ ಸದಸ್ಯರೂ ಧ್ವನಿಗೂಡಿಸಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜೈನಮುನಿ ಹತ್ಯೆ ಪ್ರಕರಣ ಸಂಬಂಧ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ಯಾವ ಷಡ್ಯಂತ್ರಕ್ಕೂ ಅವಕಾಶ ಕೊಡುವುದಿಲ್ಲ. ಸೂಕ್ತವಾಗಿ ತನಿಖೆ ನಡೆಸಲಾಗುತ್ತಿದೆ ಎಂದರು.
ಈ ವಿಚಾರದಲ್ಲಿ ನಾವು ಯಾವ ಪ್ರಭಾವಕ್ಕೂ ಮಣಿಯಲ್ಲ. ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿದ ಸಿಎಂ, ಆಕಸ್ನಿಕವಾಗಿ ನಡೆದ ಕೊಲೆ ಇರಬಹುದು. ಹನುಮಜಯಂತಿ ದಿನ ಸೂಕ್ತ ಭದ್ರತೆ ಕಲ್ಪಿಸಲಾಗಿತ್ತು. ಈ ಪ್ರಕರಣವನ್ನೂ ತನಿಖೆ ನಡೆಸಲಾಗುತ್ತಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ