ಅಂತೂ ಇಂತು ಮಂಗಳವಾರಕ್ಕೆ ಮುಂದೂಡಲು ಮೈತ್ರಿ ಯಶಸ್ವಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಅಂತೂ ಇಂತು ಮಂಗಳವಾರಕ್ಕೆ ವಿಶ್ವಾಸಮತ ಯಾಚನೆಯನ್ನು ಮುಂದೂಡಲು ಮೈತ್ರಿ ಪಕ್ಷಗಳು ಯಶಸ್ವಿಯಾಗಿವೆ.
ಮಂಗಳವಾರ ಸಂಜೆ 6 ಗಂಟೆಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು, 6 ಗಂಟೆಯ ನಂತರ ಒಂದು ನಿಮಿಷವೂ ಕುಳಿತುಕೊಳ್ಳುದಿಲ್ಲ ಎಂದು ಸ್ಪೀಕರ್ ಪ್ರಕಟಿಸಿ, ನಾಳೆ ಬೆಳಗ್ಗೆ 10 ಗಂಟೆಗೆ ಸದನ ಮುಂದೂಡಿದರು.
ಇಂದು ಬೆಳಗ್ಗೆಯಿಂದಲೂ ಇಂದೇ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಸ್ಪೀಕರ್ ಹೇಳುತ್ತಲೇ ಬಂದಿದ್ದರು. ಬಿಜೆಪಿ ಕೂಡ ಅತ್ಯಂತ ಶಾಂತವಾಗಿ ಕುಳಿತುಕೊಂಡಿತ್ತು. ಆಡಳಿತ ಪಕ್ಷದ ಸದಸ್ಯರು ಆಗಾಗ ಅನಗತ್ಯ ಕಾಲಹರಣಕ್ಕೆ ಶರಣಾಗುತ್ತ ರಾತ್ರಿ 11.45ರವರೆಗೂ ಯಾವುದೇ ಫಲಪ್ರದ ಚರ್ಚೆ ಇಲ್ಲದೆ ಕಳೆದರು.
ಆಡಳಿತ ಪಕ್ಷದ ಪ್ರತಿಭಟನೆ, ಅಡ್ಡಿ
ರಾತ್ರಿ 8 ಗಟೆಯಿಂದಲೇ ಸದನವನ್ನು ಮುಂದೂಡುವಂತೆ ಆಗ್ರಹಿಸತೊಡಗಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು, ಸದನ ನಡೆಯಲು ಹಲವಾರು ಬಾರಿ ಅಡ್ಡಿಪಡಿಸಿದರು. ಆದರೆ ಸ್ಪೀಕರ್ ಮಾತ್ರ ಇಂದೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಾನು ವಚನಭ್ರಷ್ಠನಾಗಲಾರೆ ಎಂದು ಹೇಳುತ್ತಲೇ ಬಂದಿದ್ದರು.
ರಾತ್ರಿ 11.30ರ ಹೊತ್ತಿಗೆ ಸಚಿವ ಆರ್.ವಿ.ದೇಶಪಾಂಡೆ, ನಾಳೆ ಪ್ರಕ್ರಿಯೆ ಪೂರ್ಣಗೊಳಿಸೋಣ. ಇಂದು ಮುಂದೂಡಿ ಎಂದು ವಿನಂತಿಸಿದರು. ಆಗ ಸ್ಪೀಕರ್ ರಮೇಶ ಕುಮಾರ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅಭಿಪ್ರಾಯ ಕೇಳಿದರು.
ಯಡಿಯೂರಪ್ಪ ಅದಕ್ಕೆ ಸುತಾರಾಂ ಒಪ್ಪದೆ, ಅವರು ಅನಗತ್ಯ ಕಾಲಹರಣ ಮಾಡುತ್ತಿದ್ದಾರೆ. ಅವರಿಗೆ ಮುಗಿಸುವುದು ಬೇಕಿಲ್ಲ. ನೀವು, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಶುಕ್ರವಾರ ಮಾತುಕೊಟ್ಟಂತೆ ಇಂದೇ ಪ್ರಕ್ರಿಯೆ ಪೂರ್ಣಗೊಳಿಸಿ. ರಾತ್ರಿ 1 ಗಂಟೆಯಾದರೂ ನಾವು ಕುಳಿತುಕೊಳ್ಳುತ್ತೇವೆ ಎಂದರು.
ಜಮೀರ್ ಸಲಹೆ
ಈ ಮಧ್ಯೆ ಕಾಂಗ್ರೆಸ್ ನ ಜಮೀರ್ ಅಹ್ಮದ್ ಎದ್ದುನಿಂತು, ನಮ್ಮಿಂದ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ನೀವೇ ಒಂದು ನಿರ್ಧಾರ ಪ್ರಕಟಿಸಿಬಿಡಿ ಎಂದು ಸ್ಪೀಕರ್ ಗೆ ಸಲಹೆ ನೀಡಿದರು.
ಆದರೆ ಆಡಳಿತ ಪಕ್ಷದ ಸದಸ್ಯರು ಹಸಿವಾಗಿದೆ, ಊಟವಿಲ್ಲ. ಈಗ ಸದನ ಮುಂದೂಡಿ ಎನ್ನುತ್ತ ಮತ್ತಷ್ಟು ಕಾಲಹರಣ ಮಾಡಿದರು.
ಈ ವೇಳೆ ಸಿದ್ದರಾಮಯ್ಯ ಎದ್ದು ನಿಂತು, ನಾಳೆ ಯಾವುದೇ ಕಾರಣದಿದ ಮುಗಿಸುತ್ತೇವೆ. ನಾಳೆ ರಾತ್ರಿ 8 ಗಂಟೆಯವರೆಗೆ ಅವಕಾಶಕೊಡಿ ಎಂದು ವಿನಂತಿಸಿದರು.
ಆಗ ರಮೇಶ ಕುಮಾರ, ನಾಳೆ ಸಂಜೆ 4 ಗಂಟೆಯೊಳಗೆ ಮುಗಿಸಿ, ನಂತರ ಒಂದು ನಿಮಿಷವೂ ನಾನು ಕುಳಿತುಕೊಳ್ಳುವುದಿಲ್ಲ ಎಂದರು. ಇದಕ್ಕೊಪ್ಪದ ಸಿದ್ದರಾಮಯ್ಯ ಸಂಜೆ 6 ಗಂಟೆಯೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಇದಕ್ಕೆ ಒಪ್ಪಿದ ಸ್ಪೀಕರ್, ಸಂಜೆ 6 ಗಂಟೆಯೊಳಗೆ ಎಲ್ಲ ಪ್ರಕ್ರಿಯೆ ಮುಗಿಸಬೇಕು. ನಂತರ ಒದು ನಿಮಿಷವೂ ನಾನು ಬಿಡುವುದಿಲ್ಲ ಎಂದು ಸದನ ಮುಂದೂಡಿದರು. ಆದರೆ ಬಿಜೆಪಿ ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ವಿರೋಧವನ್ನು ದಾಖಲಿಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ