ಬೆಳಗಾವಿ: ನಿರ್ಬಂಧವಿದ್ದರೂ ಜಲಪಾತದ ಬಳಿ ಅಧಿಕಾರಿಗಳಿಂದಲೇ ಎಣ್ಣೆ ಪಾರ್ಟಿ ಮಾಡಿ ಹುಚ್ಚಾಟ; ಕೇಸ್ ದಾಖಲು
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪೊಲೀಸರು ನಿರ್ಬಂಧ ವಿಧಿಸಿದ್ದರೂ ಅಧಿಕಾರಿಗಳೇ ಜಲಪಾತದ ಬಳಿ ಗುಂಡು ತುಂಡಿನ ಪಾರ್ಟಿ ಮಾಡಿ ಹುಚ್ಚಾಟ ಮೆರೆದಿರುವ ಘಟನೆ ಬೆಳಗಾವಿಯ ಜಾಂಬೋಟಿ ಬಳಿ ನಡೆದಿದೆ.
ಹೆಸ್ಕಾಂ ಅಧಿಕಾರಿಗಳು, ವೈದ್ಯರ ತಂಡ ಜಾಂಬೋಟಿ ಬಳಿಯ ಬಟವಡೆ ಫಾಲ್ಸ್ ಬಳಿ ಟಿಕಾಣಿ ಹೂಡಿ, ಅಲ್ಲಿಯೇ ಭರ್ಜರಿ ಎಣ್ಣೆ ಪಾರ್ಟಿ ಮಾಡಿ, ಅಡುಗೆ ಮಾಡಿ ಸಂಭ್ರಮಿಸಿದ್ದಾರೆ. ಭಾರಿ
ಮಳೆ ಹಿನ್ನೆಲೆಯಲ್ಲಿ ಜಲಪಾತ, ನದಿಗಳು ಬೋರ್ಗರೆದು ಹರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ಜಲಪಾತದ ಬಳಿ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಹೀಗಿದ್ದರೂ ಅಧಿಕಾರಿಗಳು, ವೈದ್ಯರ ಗುಂಪು ಪೊಲೀಸರು, ಅರಣ್ಯ ಇಲಾಖೆ ಕಣ್ತಪ್ಪಿಸಿ ಜಲಪಾತದ ಬಳಿ ಹೋಗಿ ಮೋಜು-ಮಸ್ತಿ ಮಾಡಿ ಬೇಜವಬ್ದಾರಿ ಮೆರೆದಿದ್ದಾರೆ.
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಗ್ಯಾಸ್ ಸ್ಟೋವ್, ಅಡುಗೆ ಸಾಮಾನು, ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ನಿರ್ಬಂಧಿತ ಪ್ರದೇಶದಲ್ಲಿ ಅನುಮತಿ ಇಲ್ಲದೇ ಪ್ರವೇಶ ಮಾಡಿರುವ ಕಾರಣಕ್ಕೆ ವೈಲ್ಡ್ ಲೈಫ್ ಆಕ್ಟ್ 7 ಅಡಿ ಜಾಂಬೋಟಿ ವಲಯ ಅರಣ್ಯ ಕಚೇರಿಯಲ್ಲಿ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ