ಪ್ರಗತಿವಾಹಿನಿ ಸುದ್ದಿ, ಪಟನಾ: ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ ಅಮಾನವೀಯ ಘಟನೆಯೊಂದು ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮೋತಿಹಾರಿಯಲ್ಲಿರುವ ಜಾನಕಿ ಸೇವಾ ಸದನ ನರ್ಸಿಂಗ್ ಹೋಮ್ ನಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ದಿಗ್ಭ್ರಮೆ, ಆಕ್ರೋಶಕ್ಕೆ ಕಾರಣವಾಗಿದೆ.
ಅತ್ಯಾಚಾರ, ಕೊಲೆಗೀಡಾದ ನರ್ಸ್ ಪತಿ ತೀರಿಕೊಂಡಿದ್ದರು. ಹೀಗಾಗಿ ತಮ್ಮ ತಾಯಿ ಹಾಗೂ 4 ವರ್ಷದ ಮಗನೊಂದಿಗೆ ಅವರು ವಾಸವಾಗಿದ್ದರು. ಅವರು ಆಸ್ಪತ್ರೆಗೆ ಸೇರಿಕೊಳ್ಳುತ್ತಲೇ ಅವರ ಜತೆ ಅಸಭ್ಯ ವರ್ತನೆಗಳು ಪ್ರಾರಂಭವಾದ್ದರಿಂದ ಅವರು ಕೆಲಸ ಬಿಟ್ಟಿದ್ದರು. ಆದರೆ ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿ ಪುಸಲಾಯಿಸಿ ಮತ್ತೆ ಕೆಲಸಕ್ಕೆ ಕರೆಸಿಕೊಳ್ಳಲಾಗಿತ್ತು.
ಆದರೆ ಆ.8ರಂದು ಕರ್ತವ್ಯದ ಮೇಲೆ ಹೋಗಿದ್ದ ನರ್ಸ್ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಈ ವೇಳೆ ಡಾ. ಜಯಪ್ರಕಾಶ ಎಂಬಾತ ಮೃತ ನರ್ಸ್ ಮನೆಗೆ ಕರೆ ಮಾಡಿ ಆಕೆಯ ಆರೋಗ್ಯ ಹದಗೆಟ್ಟಿದ್ದು, ಮುಜಪ್ಪರ್ ಆಸ್ಪತ್ರೆಗೆ ದಾಖಲಿಸಿದ್ದಾಗಿ ಹೇಳಿದ. ಆದರೆ ಮೃತರ ತಾಯಿ ಮುಜಪ್ಪರ್ ಆಸ್ಪತ್ರೆಗೆ ಹೋಗಿ ನೋಡಿದರೆ ಅಲ್ಲಿ ಮಗಳಿರಲಿಲ್ಲ. ಹುಡುಕಾಟ ಮುಂದುವರಿಸಿದಾಗ ಕೊನೆಗೆ ಆಸ್ಪತ್ರೆಯ ಆ್ಯಂಬುಲೆನ್ಸ್ ನಲ್ಲಿ ನರ್ಸ್ ಶವ ಪತ್ತೆಯಾಯಿತು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ