ಹುಟ್ಟೂರಿನ ಅಭಿವೃದ್ಧಿಗೆ 60 ಕೋಟಿ ರೂ. ಯೋಜನೆ – ತವರಿನ ಸನ್ಮಾನ ಸ್ವೀಕರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾವು ಹುಟ್ಟಿ, ಬೆಳೆದ ಊರು ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿಯಲ್ಲಿ ಮಂಗಳವಾರ ಅದ್ಧೂರಿ ಸನ್ಮಾನ ಸ್ವೀಕರಿಸಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಲಪ್ರಭಾ ನದಿಗೆ ಅಡ್ಡಲಾಗಿ ವೀರಭದ್ರೇಶ್ವರ ದೇವಸ್ಥಾನದ ಬಳಿ ಬ್ರಿಜ್ ಕಂ ಬ್ಯಾರೇಜ್, ತಡೆಗೋಡೆ, ಕಲ್ಯಾಣ ಮಂಟಪ ಮತ್ತಿತರ ಕಾಮಗಾರಿಗಳಿಗೆ ಒಟ್ಟಾರೆ 60 ಕೋಟಿ ರೂ. ಯೋಜನೆ ತಯಾರಿಸಿರುವುದಾಗಿ ಪ್ರಕಟಿಸಿದ್ದಾರೆ.
ಜೊತೆಗೆ, ಚಿಕ್ಕಹಟ್ಟಿಹೊಳಿ ಹಾಗೂ ಸುತ್ತಲಿನ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಹ ಯೋಜನೆ ರೂಪಿಸುವುದಾಗಿ ಘೋಷಿಸಿದ್ದಾರೆ.
ಚಿಕ್ಕಹಟ್ಟಿಹೊಳಿ ಹಾಗೂ ಜಕನೂರ ಗ್ರಾಮಗಳ ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಬೃಹತ್ ಮೆರವಣಿಗೆಯಲ್ಲಿ ಸ್ವಾಗತಿಸಿದ ಗ್ರಾಮಸ್ಥರು, ಅಪಾರ ಜನಸ್ತೋಮದ ಮಧ್ಯೆ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಹೆಬ್ಬಾಳಕರ್, ಗ್ರಾಮದಲ್ಲಿ ತಾವು ಬೆಳೆದ ಸನ್ನಿವೇಶ, ಸಂದರ್ಭಗಳನ್ನು ನೆನಪಿಸಿಕೊಂಡು, ರಾಜ್ಯಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಹುಟ್ಟೂರಿಗೆ ಹೆಸರು ತರುವುದಾಗಿ ಭರವಸೆ ನೀಡಿದರು. ಇದೇ ಊರಿನಲ್ಲಿ ಹುಟ್ಟಿ, ಬೆಳೆದು, ಸಾಮಾನ್ಯ ಸರಕಾರಿ ಬಸ್ ನಲ್ಲಿ ಓಡಾಡುತ್ತಿದ್ದ ನನಗೆ ಇಂದು ಇಡೀ ರಾಜ್ಯದ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ಇಲ್ಲಿಗೆ ಬಂದು ನಿಮ್ಮೆಲ್ಲರ ಹೃದಯ ಗೆದ್ದು, ಸನ್ಮಾನ ಸ್ವೀಕರಿಸುತ್ತಿರುವುದು ನನಗೆ ಅವಿಸ್ಮರಣೀಯ ಕ್ಷಣ ಎಂದರು.
ಗುರಿ ಸಾಧನೆಗೆ ಛಲ ಮುಖ್ಯ. ಒಂದು ಇರುವೆಗೆ ಕೂಡ ಬದುಕು ಕಟ್ಟಿಕೊಳ್ಳುವ ಛಲ ಇರುತ್ತದೆ. ನಾವು ಮನುಷ್ಯರಾಗಿ ಅಂತಹ ಛಲ ಇಲ್ಲದಿದ್ದರೆ ಅದಕ್ಕೆ ಅರ್ಥವಿಲ್ಲ. ನಾನು ಕೂಡ ಬಾಲ್ಯದಿಂದ ಛಲದಿಂದಲೇ ಬೆಳೆದವಳು. ಇಂದು ರಾಜ್ಯದ ಬಹಳಷ್ಟು ಯುವತಿಯರು ನಾವೂ ಲಕ್ಷ್ಮೀ ಹೆಬ್ಬಾಳಕರ್ ರೀತಿ ಆಗಬೇಕು ಎಂದು ಹೇಳುವುದನ್ನು ಕೇಳಿದ್ದೇನೆ. ಈ ಮಟ್ಟಿಗೆ ಬೆಳೆದು, ಯುವತಿಯರಿಗೆ ಪ್ರೇರಣೆಯಾಗಿರುವುದು ನನಗೆ ಎಲ್ಲಿಲ್ಲದ ಖುಷಿಯ ಸಂಗತಿ ಎಂದರು.
ನನ್ನ ತವರೂರು ಇದಾದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೂ ನನ್ನನ್ನು ಮನೆ ಮಗಳೆಂದೇ ಕರೆಯುತ್ತಾರೆ. ಲಕ್ಷ್ಮೀ ಅಕ್ಕ ಎಂದು ಕರೆಯುತ್ತಾರೆ. ಹಾಗಾಗಿ ನಾನೀಗ ಇಡೀ ರಾಜ್ಯದ ಮಗಳಾಗಿದ್ದೇನೆ. ಇಡೀ ರಾಜ್ಯದ ಹೊಣೆ ನನ್ನ ಮೇಲಿದೆ. ಹಾಗಂತ ಹುಟ್ಟೂರನ್ನು, ಕ್ಷೇತ್ರವನ್ನು, ಜಿಲ್ಲೆಯನ್ನು ಮರೆಯಲು ಸಾಧ್ಯವಿಲ್ಲ. ನಿಮ್ಮೆಲ್ಲರಿಗೆ ಹೆಮ್ಮೆ ತರುವಂತಹ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ನಮ್ಮ ಸರಕಾರ ರೈತರು, ಬಡವರ ಸರಕಾರ. ಗ್ಯಾರಂಟಿ ಯೋಜನೆಗಳ ಮೂಲಕ ಈಗಾಗಲೆ ಜನರ ಮೆಚ್ಚುಗೆ ಗಳಿಸಿದೆ. ಗ್ಯಾರಂಟಿ ಯೋಜನೆಗಳು ಕೇವಲ ಮಹಿಳೆಯರಿಗಷ್ಟೇ ಅಲ್ಲ, ಮಹಿಳೆಯರ ಮೂಲಕ ಪುರುಷರ, ಮನೆಯ ಯಜಮಾನರ ಕಿಸೆಗಳನ್ನು ಗಟ್ಟಿ ಮಾಡಲು ನಾವು ಮುಂದಾಗಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಇದೇ ಗ್ರಾಮದಲ್ಲಿ ಓದಿದ ನಾನು ಗುರುಗಳು ಹೇಳಿದಂತೆ ನಡೆದುಕೊಂಡಿದ್ದರಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ನಮ್ಮ ತಂದೆಯವರು ಸಹ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ನಾವು ಬೆಳೆದಿದ್ದೇವೆ. ತಾಯಿಯ ಎದುರಿನಲ್ಲಿ ನಮಗೆ ಇಂತಹ ಸನ್ಮಾನ ಎಂದೂ ಮರೆಯದಂತದ್ದು ಎಂದರು.
ಇಡೀ ಗ್ರಾಮದ ಅಭಿವೃದ್ಧಿಯನ್ನು ಪಕ್ಷಾತೀತವಾಗಿ ಮಾಡುತ್ತೇವೆ. ಎಲ್ಲರ ಸಹಕಾರವಿರಲಿ. ನಿಮ್ಮ ಕಷ್ಟಕ್ಕೆ ನಾವು ಸ್ಪಂದಿಸುತ್ತೇವೆ ಎಂದು ಅವರು ಭರವಸೆ ನೀಡಿದರು.
ಇದಕ್ಕೂ ಮೊದಲು ಗ್ರಾಮದಲ್ಲಿ ಅದ್ಧೂರಿಯ ಸನ್ಮಾನ ನಡೆಯಿತು. ಪೂರ್ಣಕುಂಭ ಸ್ವಾಗತ ಮಾಡಿ, ಕುದುರೆ, ವಾದ್ಯ ಮೇಳಗಳೊಂದಿಗೆ ಗ್ರಾಮಕ್ಕೆ ಸ್ವಾಗತಿಸಲಾಯತು. ಮನೆಗಳ ಮುಂದೆ ರಂಗವಲ್ಲಿ ಹಾಕಿ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು. ಮಹಿಳೆಯರು ಆರತಿ ಎತ್ತಿ ಗೌರವಿಸಿದರು.
ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ರಾಜ್ಯಕ್ಕೇ ಹೆಸರು ಮಾಡಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಅವರು ಅಭಿವೃದ್ಧಿ ಕೆಲಸಗಳನ್ನು ತರುವ ವಿಶ್ವಾಸವಿದೆ. ನಾವೆಲ್ಲ ಅವರ ಬೆನ್ನಿಗೆ ನಿಲ್ಲೋಣ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಮುತ್ನಾಳ ಕೇದಾರ ಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಚಿಕ್ಕಹಟ್ಟಿಹೊಳಿಯ ವೇದಮೂರ್ತಿ ಚಂಬಯ್ಯ ಸ್ವಾಮಿಗಳು, ಜಕನೂರಿನ ವೇದಮೂರ್ತಿ ಶಿವಬಸಯ್ಯ ಸ್ವಾಮಿಗಳು ವಹಿಸಿದ್ದರು. ವಿಶ್ರಾಂತ ಕುಲಪತಿ ವಿ.ಜಿ.ತಳವಾರ, ಯುವ ಮುಖಂಡ ಮೃಣಾಲ ಹೆಬ್ಬಾಳಕರ್, ಗಿರಿಜಾ ಹಟ್ಟಿಹೊಳಿ, ಶ್ರೀಥರ ಲಾವಗಿ, ಗ್ರಾಮಸ್ಥರು, ದೇವಸ್ಥಾನ ಕಮೀಟಿ ಪ್ರಮುಖರು ಉಪಸ್ಥಿತರಿದ್ದರು.
ಐ.ಎಂ.ಹೊನ್ನನ್ನವರ್ ಸ್ವಾಗತಿಸಿದರು. ಬಸವರಾಜ ಹಟ್ಟಿಹೊಳಿ ಹಾಗೂ ಸಾಗರ ಸಣ್ಣಕ್ಕಿ ಪ್ರಾಸ್ತಾವಿಕ ಮಾತನಾಡಿದರು. ವಿವೇಕ ಕುರಗುಂದ ನಿರೂಪಿಸಿದರು.
ಇದಕ್ಕೂ ಮುನ್ನ, ಲಕ್ಷ್ಮೀ ಹೆಬ್ಬಾಳಕರ್ ಅವರ ಮನೆಯ ಆರಾಧ್ಯ ದೈವ ವೀರಭದ್ರೇಶ್ವರ ಗುಡಿಯಲ್ಲಿ ಸಹ ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ ಮತ್ತು ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ