ಪ್ರಗತಿವಾಹಿನಿ ಸುದ್ದಿ; ಕೊಲಂಬೊ: ಹೈದರಾಬಾದ್‌ನ ಬಲಗೈ ವೇಗದ ಬೌಲರ್ ಮೊಹಮದ್ ಸಿರಾಜ್ (21ಕ್ಕೆ 6) ಅಬ್ಬರದ ಬೌಲಿಂಗ್ ನೆರವಿನಿಂದ ಭಾರತ ತಂಡ 8ನೇ ಬಾರಿಗೆ ಏಷ್ಯಾಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಆರ್.ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್‌ಗಳಿಂದ ಆತಿಥೇಯ ಶ್ರೀಲಂಕಾ ತಂಡವನ್ನು ಸೋಲಿಸಿತು. ಭಾರತ ತಂಡ ಪ್ರತಿಷ್ಠಿತ ಪ್ರಶಸ್ತಿಯೊಂದಿಗೆ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿತು.
ಪಂದ್ಯಕ್ಕೂ ಬಿದ್ದ ಮಳೆಯಿಂದಾಗಿ ಪಂದ್ಯ ಸುಮಾರು 40 ನಿಮಿಷಗಳ ಕಾಲ ವಿಳಂಬಗೊಂಡಿತು. ಟಾಸ್ ಜಯಿಸಿದ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಬ್ಯಾಟಿಂಗ್ ಆಯ್ಕೆಮಾಡಿಕೊಂಡರು. ಆದರೆ, ಲಂಕಾ ಬ್ಯಾಟರ್‌ಗಳು ನಾಯಕ ನಿರೀಕ್ಷೆಯಲ್ಲಿ ಹುಸಿಗೊಳಿಸಿದರು. ಕೇವಲ 15.2 ಓವರ್‌ಗಳಲ್ಲಿ ಲಂಕಾ ತಂಡ ಕೇವಲ 50 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಈ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ 6.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್‌ಗಳಿಸಿ ಗೆಲುವು ದಾಖಲಿಸಿತು.
ಲಂಕಾಗೆ ಸಿರಾಜ್ ಶಾಕ್:
ಮೂರು ದಿನಗಳ ಹಿಂದಷ್ಟೇ ಟೂರ್ನಿ ನಿರ್ಣಾಯಕ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದ ಶ್ರೀಲಂಕಾ ತಂಡದ ಬ್ಯಾಟರ್‌ಗಳು ಭಾರತದ ಎದುರು ಸಂಪೂರ್ಣ ಮಂಕಾದರು. ತವರು ಪ್ರೇಕ್ಷಕರ ಭರ್ಜರಿ ಬೆಂಬಲದೊಂದಿಗೆ ಉತ್ತಮ ಆರಂಭದ ನಿರೀಕ್ಷೆಯಲ್ಲಿ ಲಂಕಾ ತಂಡಕ್ಕೆ ಭಾರತದ ಜಸ್‌ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲೇ ಶಾಕ್ ನೀಡಿದ್ರು. ಇನಿಂಗ್ಸ್ನ 4ನೇ ಓವರ್‌ನಲ್ಲಿ 4 ವಿಕೆಟ್ ಕಬಳಿಸಿ ಆತಿಥೇಯರಿಗೆ ಆಘಾತ ನೀಡಿದ್ರು. ಕೇವಲ 12 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ಲಂಕಾ ಪಡೆ ಸುಧಾರಣೆ ಕಾಣಲಿಲ್ಲ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (3ಕ್ಕೆ 3) ಕೆಳಕ್ರಮಾಂಕಕ್ಕೆ ಪೆಟ್ಟು ನೀಡಿದರು. ಕುಸಾಲ್ ಮೆಂಡಿಸ್ (17) ಹಾಗೂ ದುಶಾನ್ ಹೆಮಂತ (13*) ಮಾತ್ರ ಲಂಕಾ ಪರ ಒಂದಂಕಿ ಮೊತ್ತ ದಾಟಿದರು.
ಬಳಿಕ ಈ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಭಾರತ ಗೆಲುವಿನ ನಗೆ ಬೀರಿತು. ಇಶಾನ್ ಕಿಶನ್ (23) ಹಾಗೂ ಶುಭಮಾನ್ ಗಿಲ್ (27) ಅಜೇಯರಾಗಿ ಉಳಿದರು.
ಸಂಕ್ಷೀಪ್ತ ಸ್ಕೋರ್: ಶ್ರೀಲಂಕಾ: 15.2 ಓವರ್‌ಗಳಲ್ಲಿ 50 (ಕುಸಾಲ್ ಮೆಂಡಿಸ್ 17, ದುಶಾನ್ ಹೆಮಂತ 13, ಜಸ್‌ಪ್ರೀತ್ ಬುಮ್ರಾ (23ಕ್ಕೆ1), ಮೊಹಮದ್ ಸಿರಾಜ್ 21ಕ್ಕೆ 6, ಹಾರ್ದಿಕ್ ಪಾಂಡ್ಯ 3ಕ್ಕೆ 3). ಭಾರತ: 6.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 (ಇಶಾನ್ ಕಿಶನ್ 23, ಶುಭಮಾನ್ ಗಿಲ್ 27*).
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ