ಪ್ರಗತಿವಾಹಿನಿ ಸುದ್ದಿ; ಉಡುಪಿ: ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಹಿಂದೂ ಹೋರಾಟಗಾರ್ತಿ ಚೈತ್ರಾ ಕುಂದಾಪುರಳ ವಿರುದ್ಧ ಇದೀಗ ಮತ್ತೊಂದು ಕೇಸ್ ದಾಖಲಾಗಿದೆ.
ಎಂಎಲ್ ಸಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಎಂಬುವವರಿಗೆ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ 5 ಕೋಟಿ ವಂಚನೆ ಪ್ರಕರಣ ಹಿನ್ನೆಲೆಯಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು, ಚೈತ್ರಾ ಕುಂದಾಪುರ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಚೈತ್ರಾ ಕುಂದಾಪುರ ವಿರುದ್ಧ 5 ಲಕ್ಷ ರೂಪಾಯಿ ವಂಚನೆ ಕೇಸ್ ಕೂಡ ದಾಖಲಾಗಿದೆ.
ಕೋಟ ಹಾಗೂ ಉಡುಪಿಯಲ್ಲಿ ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ಹೇಳಿ ಚೈತ್ರಾ ಕುಂದಾಪುರ 5 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೊಪಿಸಿ, ಸುದಿನ ಎಂಬುವವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2018ರಿಂದ ಈವರೆಗೆ ಚೈತ್ರಾ ಕುಂದಾಪುರ ಖಾತೆಗೆ ಹಂತ ಹಂತವಾಗಿ 5 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದೇನೆ. ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ಹೇಳಿದ್ದ ಬಗ್ಗೆ ಕೇಳಿದರೆ ಪಕ್ಷದ ಮುಖಂಡರ ಭೇಟಿ, ಭಾಷಣ ಕಾರ್ಯಕ್ರಮ, ಕಾರ್ಯಕರ್ತರ ಸಭೆ, ಕಾರ್ಯಕಾರಿಣಿ ಸಭೆ, ಚುನಾವಣಾ ಪ್ರಚಾರ ಹೀಗೆ ಒಂದಲ್ಲ ಒಂದು ನೆಪಗಳನ್ನು ಹೇಳುತ್ತಾ ತಪ್ಪಿಸಿಕೊಳ್ಳುತ್ತಲೇ ಇದ್ದರು. ಇದರಿಂದ ಅನುಮಾನ ಬಂದು ಕೂಡಲೆ ಬಟ್ಟೆ ಅಂಗಡಿ ಹಾಕಿಸಿಕೊಡಿ ಇಲ್ಲವೇ ಕೊಟ್ಟ ಹಣ ವಾಪಸ್ ನೀಡಿ ಎಂದು ಕೇಳಿದ್ದೆ. ಅದಕ್ಕೆ ಚೈತ್ರಾ ಕುಂದಾಪುರ ಬೆದರಿಕೆ ಹಾಕಿದ್ದರು. ನಿನ್ನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹಾಗೂ ಬಾಡಿಗೆ ಗೂಂಡಾಗಳನ್ನು ಬಿಟ್ಟು ಹತ್ಯೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದರು ಎಂದು ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ