Belagavi NewsBelgaum NewsKannada NewsKarnataka News

ನಿಪ್ಪಾಣಿಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ಪಾದಯಾತ್ರೆಯೊಂದಿಗೆ ವಿಜಯೋತ್ಸವ ರ‍್ಯಾಲಿ



ಕೇಂದ್ರದಲ್ಲಿ ಇನ್ನುಮುಂದೆ ೧೮೦ರಷ್ಟು ಮಹಿಳಾ ಸಂಸದರಿರುವರು – ಶಾಸಕಿ ಶಶಿಕಲಾ ಜೊಲ್ಲೆ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ’ಕೇಂದ್ರದಲ್ಲಿ ೧೧ ಜನರು ಮಹಿಳಾ ಸಚಿವರು ಸೇರಿ ೮೦ ಜನ ಸಂಸದರಿದ್ದಾರೆ. ಶೇ.೩೩ರಂತೆ ಇನ್ನುಮುಂದೆ ೧೮೦ ಮಹಿಳಾ ಸಂಸದರಿರಲಿದ್ದಾರೆ. ಇನ್ನು ಮುಂದೆ ವಿಶ್ವದ ಸಿಂಹಾಸನದ ಮೇಲೆ ಭಾರತವು ಆಸೀನವಾಗುವುದು ಬಹಳ ದೂರವಿಲ್ಲ’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.


ಪ್ರಧಾನಿ ಮೋದಿಯವರು ರಾಜಕೀಯ ಕ್ಷೇತ್ರದಲ್ಲಿ ಶೇ.೩೩ರಷ್ಟು ಮಹಿಳೆಯರಿಗೆ ಮೀಸಲಾತಿಯನ್ನು ದೊರಕಿಸಿ ಕೊಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ತಮ್ಮ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿ ಅವರು ಮಾತನಾಡಿದರು. ’ರಾಜಕೀಯದಲ್ಲಿ ಶೇ.೩೩ರಷ್ಟು ಮಹಿಳೆಯರಿಗೆ ಮೀಸಲಾತಿ ಇದು ೨೦೨೩ರ ನಮ್ಮ ಭಾರತ ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸಂತಸದ ಸುದ್ದಿ. ಆಯಾ ಯುಗಕ್ಕೆ ತಕ್ಕಂತೆ ಕೆಲ ಐತಿಹಾಸಿಕ ಮಹಿಳೆಯರು ಮುಂದೆ ಬಂದು ಸಮಾಜದ ರಕ್ಷಣೆ ಮಾಡಿದ ಉದಾಹರಣೆಗಳಿವೆ.ಪ್ರಧಾನಿ ಮೋದಿಯವರು ಮಹಾತ್ಮಾ ಬಸವೇಶ್ವರರ, ಛತ್ರಪತಿ ಶಿವಾಜಿ ಮಹಾರಾಜರ, ಡಾ. ಬಿ.ಆರ್. ಅಂಬೇಡ್ಕರರ ರೂಪದಲ್ಲಿ ಇಂದು ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಸುಮಾರು ೮೦೦ ವರ್ಷಗಳ ಹಿಂದೆ ಮಹಾತ್ಮಾ ಬಸವೇಶ್ವರರು ಪಾರ್ಲಿಮೆಂಟ್‌ನ ಪರಿಕಲ್ಪನೆಯನ್ನು ಇಟ್ಟುಕೊಂಡು ಅನುಭವ ಮಂಟಪವನ್ನು ಆರಂಭಿಸಿ ಮಹಿಳೆಯರಿಗೆ ಮುಂಚೂಣಿಯಲ್ಲಿದ್ದು ಕಾರ್ಯ ಮಾಡಲು ಅವಕಾಶ ಕಲ್ಪಿಸಿದ್ದರು. ಅದೇ ರೀತಿ ಇಂದು ಪ್ರಧಾನಿ ಮೋದಿಯವರು ತೆಗೆದುಕೊಂಡ ಈ ನಿರ್ಣಯ ಒಂದು ಧೈರ್ಯಯುತವಾದ ನಿರ್ಣಯವಾಗಿದೆ’ ಎಂದರು.


’ಚಂದ್ರಯಾನ-೩ ಯೋಜನೆಯಲ್ಲಿ ಅನೇಕ ಮಹಿಳೆಯರೂ ಸಹ ವಿಜ್ಞಾನಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಆಟೋಚಾಲಕಿಯರಿಂದ ಹಿಡಿದು ಪ್ರತಿಯೊಂದ ಕ್ಷೇತ್ರದಲ್ಲಿ ಮಹಿಳೆಯರು ಮುಂದೆ ಬಂದು ತಮ್ಮದೆ ಆದ ನಿಟ್ಟಿನಲ್ಲಿ ಸಮಾಜದ, ದೇಸದ ಸೇವೆ ಮಾಡಿದ್ದಾರೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಮಹಿಳೆಯರು ಹಿಂದುಳಿದಿದ್ದರು. ಈಗ ಅದನ್ನೂ ಸಹ ಪ್ರಧಾನಿ ಮೋದಿಯವರು ನೀಗಿಸಿದ್ದಾರೆ’ ಎಂದರು.


ಆರಂಭದಲ್ಲಿ ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಬಳಿ ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕಾರ್ಯಕರ್ತರು ಸಿಹಿಯನ್ನು ಹಂಚಿದರು. ನಂತರ ಕಾರ್ಯಕರ್ತರೊಂದಿಗೆ ಅಲ್ಲಿಂದ ಹಳೆಯ ಪಿ.ಬಿ. ರಸ್ತೆ ಮೂಲಕ ಧರ್ಮವೀರ ಸಂಭಾಜಿ ವೃತ್ತದವರೆಗೆ ವಿಜಯೋತ್ಸವ ಪಾದಯಾತ್ರೆ ತೆಗೆಯುವ ಮೂಲಕ ಸಂಭ್ರಮಾಚರಣೆ ಆಚರಿಸಿದರು.


ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಭಾವರಿ ಖಾಂಡಕೆ, ನಗರಸಭೆ ಮಾಜಿ ಅಧ್ಯಕ್ಷ ಜಯವಂತ ಭಾಟಲೆ, ಮಾಜಿ ಉಪಾಧ್ಯಕ್ಷೆ ನೀತಾ ಬಾಗಡೆ, ರಾಜೇಂದ್ರ ಗುಂದೇಶಾ, ಗೀತಾ ಪಾಟೀಲ, ರುಮಾ ಕೋಠಿವಾಲೆ, ಮೊದಲಾದವರು ಸಹಿತ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕರು, ನಗರಸಭೆ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button