Belagavi NewsBelgaum NewsKannada NewsKarnataka NewsLatestPolitics

*ಮೋಡ ಬಿತ್ತನೆ ಕನಸು ಇಂದು ಈಡೇರಿಕೆ: ಸಚಿವ ಸತೀಶ್‌ ಜಾರಕಿಹೊಳಿ*

ಬೆಳಗಾವಿ ಜಿಲ್ಲೆಯಾದ್ಯಂತ ಮೋಡ ಬಿತ್ತನೆ ಆರಂಭ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಮೋಡ ಬಿತ್ತನೆ ಮಾಡಬೇಕೆಂದು ಬಹಳ ದಿನಗಳ ಹಿಂದೆಯೇ ನಿರ್ಧರಿಸಿದ್ದೆ, ಆದರೆ ಮೋಡ ಬಿತ್ತನೆ ಕನಸು ಇಂದು ಈಡೇರಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹುದಲಿಯ ಬೆಳಗಾಂ ಶುಗರ್ಸ್ ಪ್ರೈ.ಲಿಮಿಟಡ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋಡ ಬಿತ್ತನೆಗೆ ಕೇಂದ್ರದಿಂದ ಅನುಮತಿ ಪಡೆಯಲು 20 ದಿನ ಬೇಕಾಯಿತು. ಸೆ. 28ಕ್ಕೆ ಅನುಮತಿ ದೊರೆತಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಮೂರು ದಿನ ಮೋಡ ಬಿತ್ತನೆಯ ಗುರಿ ಇಟ್ಟುಕೊಂಡಿದ್ದು, ಮೊದಲ ದಿನ ಗೋಕಾಕ ಮತ್ತು ಖಾನಾಪುರದಲ್ಲಿ ಬಿತ್ತನೆ ಕಾರ್ಯಾಚರಣೆ ನಡೆದಿದೆ. ನಾಳೆ, ನಾಡಿದ್ದು ಎಲ್ಲಿ ಮೋಡ ಇರುತ್ತವೆ ಅಲ್ಲಿ ಕಾರ್ಯಾಚರಣೆ ನಡೆಸಲಿದ್ದಾರೆಂದು ತಿಳಿಸಿದರು.

ಕೆಲವೊಂದು ಬಾರಿ ಒಂದು ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಿದಾಗ ಮತ್ತೊಂದು ಜಿಲ್ಲೆಯಲ್ಲಿ ಮಳೆಯಾದ ಉದಾಹರಣೆಗಳು ಇವೆ, ಒಟ್ಟಾರೆ ಎಲ್ಲಿ ಮಳೆಯಾದರು ಅಲ್ಲಿಯ ರೈತರಿಗೆ ಅನುಕೂಲವಾದರೆ ಸಾಕು. ಪ್ರತಿ ದಿನ ಮೂರು ಗಂಟೆ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಒಂದು ಬಾರಿ ವಿಮಾನ ಮೇಲೆ ಹೋದರೆ ಮೂರು ಗಂಟೆ ಆಕಾಶದಲ್ಲಿ ಇರುವ ಸಾಮರ್ಥ್ಯ ಇದೆ. 9 ರಿಂದ 10 ಗಂಟೆ ಮೋಡ ಬಿತ್ತನೆ ಮಾಡಬೇಕೆಂದು ನಮ್ಮ ಗುರಿ ಇದೆ ಎಂದರು.

ಮೋಡ ಬಿತ್ತನೆಯಿಂದ ಜಿಲ್ಲೆಯಲ್ಲಿ ಮಳೆಯಾದರೆ ಬಹಳ ಒಳ್ಳೆಯದು, ಇಲ್ಲಿ ಸಕ್ಸೆಸ್‌ ಆದರೆ ಕಾವೇರಿ ಭಾಗದಲ್ಲಿಯೂ (ಮಡಿಕೇರಿ, ಹಾಸನ) ದಲ್ಲಿ ಸರ್ಕಾರ ಅನುಮತಿ ಕೊಟ್ಟರೆ ಬೆಳಗಾಂ ಶುಗರ್ಸ್ ಪ್ರೈ.ಲಿಮಿಟಡ್ ನಿಂದ ಮೋಡ ಬಿತ್ತನೆ ಮಾಡಲಾಗುವುದು ಎಂದು ತಿಳಿಸಿದರು.

ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆಯಿಂದ 5 ರಿಂದ 30 ಎಂ.ಎಂ ವರೆಗೆ ಮಳೆಯಾಗಿದೆ. ಇಲ್ಲಿಯೂ ಅದೇ ರೀತಿ ಮೋಡ ಬಿತ್ತನೆ ನಡೆಯುತ್ತಿದೆ. ಕ್ಯಾಪ್ಟನ್ ವೀರೇಂದ್ರ ಸಿಂಗ್, ಕ್ಯಾಪ್ಟನ್ ಆದರ್ಶ ಪಾಂಡೆ ನೇತೃತ್ವದಲ್ಲಿ ವಿಟಿ-ಕೆಸಿಎಂ ವಿಮಾನವು ಮೋಡ ಬಿತ್ತನೆ ಮಾಡಲಿದೆ ಎಂದರು.

ಕಡಿಮೆ ಎತ್ತರದಲ್ಲಿರುವ ಮೋಡಗಳ ಆಕರ್ಷಣೆಗೆ ಸಿಎಸಿಎಲ್-2 ಅಯೋಡೈಡ್ ಹಾಗೂ 20 ಸಾವಿರ ಅಡಿ ಮೇಲೆ ಎತ್ತದರದಲ್ಲಿರುವ ಮೋಡಗಳ ಆಕರ್ಷಣೆಗೆ ಸಿಲ್ವರ್ ಐಯೋಡೈಡ್ ರಾಸಾಯನಿಕ ಸಿಂಪಡಿಸಲಾಗುತ್ತದೆ. ಒಂದು ವೇಳೆ ನಿರ್ದಿಷ್ಟ ಪ್ರದೇಶದ ವ್ಯಾಪ್ತಿಯಲ್ಲಿ ಮೋಡಗಳು ಇದ್ದರೆ ರಾಸಾಯನಿಕ ಸಿಂಪಡಣೆ ಮಾಡಿದ ಐದು ನಿಮಿಷಗಳಲ್ಲಿ ಮಳೆ ಬರಬಹುದು ಎಂದು ಮಾಹಿತಿ ನೀಡಿದರು.

ಬೆಳಗಾವಿ ಉತ್ತರ ಶಾಸಕ ಆಶೀಪ್‌ (ರಾಜು) ಸೇಠ್‌, ವಿಧಾನ ಪರಿಷತ್‌ ಸದಸ್ಯ ಚೆನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕ ಎಸ್.ಬಿ. ಘಾಟಗೆ, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಸತೀಶ್‌ ಶುಗರ್ಸ್‌ ಲಿ. ನಿರ್ದೇಶಕ ರಾಹುಲ್‌ ಜಾರಕಿಹೊಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್‌ ಹಣಮನ್ನವರ್‌ ಸೇರಿದಂತೆ ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button