ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ರೈತರ ನೀರಾವರಿ ಪಂಪ್‌ಸೆಟ್‌ಗಳ ಪ್ರತಿದಿನ ಹತ್ತು ತಾಸುಗಳ ವಿದ್ಯುತ್ ಪೂರೈಕೆ ಕುರಿತಂತೆ ಪರಿಶೀಲಿಸಲಾಗುವುದು ಎಂದು ರಾಜ್ಯ ವಿಧಾನ ಸಭೆಯಲ್ಲಿ ಮಂಗಳವಾರ ಭರವಸೆ ನೀಡಿದ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಅನಧಿಕೃತ ಪಂಪ್‌ಸೆಟ್‌ಗಳ ಸಕ್ರಮಗೊಳಿಸಲು ಪಡೆಯುತ್ತಿರುವ ಹತ್ತು ಸಾವಿರ ರೂ ನೋಂದಣಿ ಶುಲ್ಕವನ್ನು ರದ್ದುಪಡಿಸುವತ್ತ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಪ್ರಕಟಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸುರಪುರ ಶಾಸಕ ನರಸಿಂಹ ನಾಯಕ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರತಿ ನೀರಾವರಿ ಪಂಪಸೆಟ್‌ಗೆ ಸರಾಸರಿ ಒಂದು ಲಕ್ಷ ರೂ ವೆಚ್ಚವಾಗುತ್ತದೆ. ಈ ಮೊತ್ತವನ್ನು ಭರಿಸಲು ರೈತರಿಗೆ ಕಷ್ಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ನೊಂದಣಿ ಶುಲ್ಕವನ್ನು ಕೇವಲ ೧೦ ಸಾವಿರ ರೂ ಗಳಿಗೆ ನಿಗದಿಪಡಿಸಲಾಗಿತ್ತು. ಆದರೆ, ರೈತರ ಸಂಕಷ್ಟವನ್ನು ಪುನರ್ಪರಿಶೀಲಿಸಿ ಈ ಮೊತ್ತವನ್ನೂ ಪಡೆಯದೆಯೇ ಸಂಪರ್ಕ ಕಲ್ಪಿಸಲು ಗಂಭೀರ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ೪,೮೨,೬೬೨ ಅನಧಿಕೃತ ನೀರಾವರಿ ಪಂಪ್ ಸೆಟ್‌ಗಳಿದ್ದು ಇವುಗಳನ್ನು ಅಧಿಕೃತಗೊಳಿಸಿ ಮೂಲ ಸೌಕರ್ಯ ಕಲ್ಪಿಸಲು ಐದು ಸಾವಿರ ಕೋಟಿ ರೂ ಅಗತ್ಯವಿದೆ. ಈ ವರ್ಷ ೧೨,೫೦೦ ಕೋಟಿ ರೂ ವಿದ್ಯುತ್ ಸಹಾಯ ಧನವನ್ನು ಒದಗಿಸಲಾಗಿದೆ. ಮೂಲ ಶುಲ್ಕ ರದ್ದುಪಡಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಮೂರು ಸಾವಿರ ಕೋಟಿ ರೂ ಹೊರೆ ಬೀಳಲಿದೆ ಎಂದು ಮುಖ್ಯಮಂತ್ರಿ ಅಂಕಿ-ಅಂಶವನ್ನು ನೀಡಿದರು.
ಸಿರಗುಪ್ಪ ಶಾಸಕ ಎಂ ಎಸ್ ಸೋಮಲಿಂಗಪ್ಪ ಅವರು ತಮ್ಮ ಕ್ಷೇತ್ರದ ಸಿರಗುಪ್ಪ ಭಾಗದ ತೆಕ್ಕಲಕೋಟೆಯ ತುಂಗಭದ್ರಾ ಮತ್ತು ವೇದಾವತಿ ನದಿಗಳಿಗೆ ಅಳವಡಿಸಿರುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೊರತೆ ನೀಗಿಸುವ ಕುರಿತಂತೆ ಉತ್ತರಿಸಿದ ಕುಮಾರಸ್ವಾಮಿ ಅವರು ಜೆಸ್ಕಾಮ್ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ಪ್ರಸ್ತುತ ೨೪ ಗಂಟೆಗಳ ವಿದ್ಯುತ್ ಪೂರೈಸಲಾಗುತ್ತಿದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆಗಳ ಅವದಿಗೆ ತ್ರೀ-ಫೇಸ್ ಹಾಗೂ ಸಂಜೆ ೬-೦೦ ರಿಂದ ಬೆಳಿಗ್ಗೆ ೬-೦೦ ಗಂಟೆಯವರೆಗೆ ಅಪರಾಹ್ನ ೧೨-೦೦ ಗಂಟೆಗಳ ವರೆಗೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ನಿರಂತರ ಜ್ಯೋತಿ ಯೋಜನೆ ಪೂರ್ಣಗೊಂಡ ಗ್ರಾಮೀಣ ಪ್ರದೇಶಗಳ ಫೀಡರ್‌ಗಳಿಗೆ ದಿನವಹಿ ಸರಾಸರಿ ೨೨ ರಿಂದ ೨೪ ಗಂಟೆಗಳ ವಿದ್ಯುತ್ ಪೂರೈಸಲಾಗುತ್ತದೆ ಎಂದು ತಿಳಿಸಿದರು.
ಶಾಸಕ ಎಸ್ ಕುಮಾರ ಬಂಗಾರಪ್ಪ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ಸೊರಬ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲು ನಾಲ್ಕು ತಾಸು ಹಾಗೂ ರಾತ್ರಿ ಮೂರು ತಾಸಿನಂತೆ ಏಳು ಗಂಟೆ ಮೂರು ಫೇಸ್ ವಿದ್ಯುತ್ ಪೂರೈಸಲಾಗುತ್ತದೆ. ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಉಳವಿ ಮಾವಲಿ ಹಾಗೂ ಕುಪ್ಪಗಡ್ಡೆ ಗ್ರಾಮಗಳಲ್ಲಿ ೧೧೦/೧೧ ಕೆ ವಿ ವಿದ್ಯುತ್ ಉಪಕೇಂದ್ರಗಳ ಆರಂಭಿಸಲು ಕ್ರಮ ವಹಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ನಿವಾರಿಸಲು ದೀನದಯಾಳು ಗ್ರಾಮ ಜ್ಯೋತಿ ಯೋಜನೆಯಡಿಯಲ್ಲಿ ೧೧ ಕೆ ವಿ ಸಾಮರ್ಥ್ಯದ ೧೭ ಮಾರ್ಗಗಳನ್ನು ವ್ಯವಸಾಯ ಮತ್ತು ವ್ಯವಸಾಯೇತರ ಮಾರ್ಗಗಳಾಗಿ ವಿಭಜಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಹಗಲು ವೇಳೆ ನಿರಂತರ ಏಳು ತಾಸು ಗುಣಮಟ್ಟದ ವಿದ್ಯುತ್ ಪೂರೈಸಲು ಮೂಲ ಸೌಕರ್ಯಗಳನ್ನು ಬಲಪಡಿಸಿ ಬೇಡಿಕೆ ಪ್ರಮಾಣದಲ್ಲಿ ವಿದ್ಯುತ್ ಪೂರೈಸಲಾಗುವುದು ಎಂದು ಅವರು ಹೇಳಿದರು.
ಈ ಮುನ್ನ ಪ್ರತಿಪಕ್ಷ ನಾಯಕ ಬಿ. ಎಸ್. ಯಡಿಯೂರಪ್ಪ ಅವರು ಮಾತನಾಡಿ ರಾಜ್ಯಾದ್ಯಂತ ತೀವ್ರ ಬರಗಾಲವಿದೆ. ಕೊಳವೆ ಬಾವಿ ಆದರಿಸಿ ರೈತರಿಗೆ ಕನಿಷ್ಠ ೧೦ ತಾಸು ವಿದ್ಯುತ ಪೂರೈಸುವ ಕುರಿತಂತೆ ಸರ್ಕಾರ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ