ಯಶಸ್ಸು ಯಾರ ಸ್ವತ್ತೂ ಅಲ್ಲ, ಪರಿಶ್ರಮ ಮತ್ತು ಧೈರ್ಯದಿಂದ ಯಶಸ್ಸು ಸಿಗುತ್ತದೆ – ಡಿ.ಕೆ.ಶಿವಕುಮಾರ
*ಹುಕ್ಕೇರಿ ಮಠದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು*
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ನಾವು ಯಶಸ್ಸು ಸಾಧಿಸಬೇಕಾದರೆ ಧರ್ಮರಾಯನ ಧರ್ಮತ್ವ, ದಾನಶೂರ ಕರ್ಣನ ದಾನತ್ವ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ, ಕೃಷ್ಣನ ತಂತ್ರ ಇರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದಲ್ಲಿ ಬುಧವಾರ ಸಂಜೆ ನವರಾತ್ರಿ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ರೇಣುಕಶ್ರೀ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಯಶಸ್ಸು ಯಾರ ಸ್ವತ್ತೂ ಅಲ್ಲ. ಪರಿಶ್ರಮ ಮತ್ತು ಧೈರ್ಯದಿಂದ ಯಶಸ್ಸು ಸಿಗುತ್ತದೆ. ನಾವು ಮಾನವೀಯತೆ ಉಳಿಸಿಕೊಂಡು ಭಗವಂತ ನೀಡಿರುವ ಅವಕಾಶದಲ್ಲಿ ಸಮಾಜಕ್ಕೆ ಸೇವೆ ಮಾಡಬೇಕು ಎಂದು ಅವರು ಹೇಳಿದರು.
ನೋಣವಿನ ಕೆರೆಯ ಗಂಗಾಧರ ಶ್ರೀಗಳು “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ಸಂದೇಶ ಸಾರಿದ್ದಾರೆ. ನಾನು ಅಜ್ಜಯ್ಯನ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನನ್ನ ಹಾಗೂ ಅವರ ನಡುವಣ ಸಂಬಂಧ ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧ. ಇದರ ಬಗ್ಗೆ ನನಗೆ ಹಾಗೂ ನಮ್ಮ ಅಜ್ಜಯ್ಯನಿಗೆ ಗೊತ್ತು. ಆ ಪೀಠದಲ್ಲಿ ಇರುವ ಶಕ್ತಿಯನ್ನು ಅನುಭವಿಸಿದವನಿಗಷ್ಟೆ ಗೊತ್ತು. ನಾನು ಬಿಡಿಸಿ ಹೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಧರ್ಮ ಯಾವುದಾದರೂ ತತ್ವವೊಂದೆ, ನಾಮ ನೂರಾದರೂ ದೈವವೊಂದೆ, ಪೂಜೆ ಯಾವುದಾದರೂ ಭಕ್ತಿವೊಂದೆ, ಕರ್ಮ ಹಲವಾದರೂ ನಿಷ್ಠೆವೊಂದೆ. ದೇವನೊಬ್ಬ ನಾಮ ಹಲವು. ಅದರಂತೆ ನಾವು ಮಾನವೀಯತೆಯಿಂದ ಬದುಕುತ್ತಿದ್ದೇವೆ. ನಾವು ಹುಟ್ಟುವಾಗ ಅರ್ಜಿ ಹಾಕಿ ಹುಟ್ಟುವುದಿಲ್ಲ. ಒಕ್ಕಲಿಗ ಸಮುದಾಯದಲ್ಲಿದ್ದು, ಈ ಮಠಕ್ಕೆ ಭಕ್ತನಾಗಿರುವ ಬಗ್ಗೆ ಅನೇಕ ಚರ್ಚೆ ಆಗಿವೆ. ಇಲ್ಲಿ ನಂಬಿಕೆ ಮುಖ್ಯ. ಪ್ರತಿ ಮನುಷ್ಯ ತನ್ನದೇ ಆದ ನಂಬಿಕೆ ಹೊಂದಿರುತ್ತಾನೆ.
ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ದೇವರು ನಮಗೆ ಎರಡು ಆಯ್ಕೆ ಕೊಟ್ಟಿದ್ದಾನೆ. ಒಂದು ಕೊಟ್ಟು ಹೋಗುವುದು, ಎರಡನೆಯದು ಬಿಟ್ಟು ಹೋಗುವುದು. ನಾವು ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಇಂದು ಸ್ವಾಮೀಜಿಗಳು ತಮ್ಮ ಆಚಾರ ವಿಚಾರ ಪಾಲನೆ ಮಾಡುತ್ತಾ ಸಮಾಜದ ಎಲ್ಲಾ ಭಕ್ತರಿಗೆ ಆಶೀರ್ವಾದ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಮಾನವೀಯತೆ ಕೆಲಸ ಮಾಡಿರುವುದಕ್ಕೆ ರೇಣುಕಾ ಪ್ರಶಸ್ತಿ ಬಂದಿದೆ ಎಂದು ಹೇಳಿದರು.
ಸೂರ್ಯನ ಬೆಳಕು, ಕುಡಿಯುವ ನೀರು, ಕಣ್ಣೀರಿನ ಉಪ್ಪು, ಮೈಯಲ್ಲಿ ಹರಿಯುವ ರಕ್ತಕ್ಕೆ ಜಾತಿ, ಧರ್ಮದ ಬೇಧ ಇದೆಯಾ? ಇದೆ ಮಾನವ ಧರ್ಮ. ಪ್ರಶಸ್ತಿಗೆ ಭಾಜನವಾಗಿರುವ ಶ್ರೀಗಳಿಗೆ ನಾನು ಅಧಿಕಾರದಲ್ಲಿರುವ ಸಚಿವನಾಗಿ ಪ್ರಶಸ್ತಿ ನೀಡಲಿಲ್ಲ. ಅವರ ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ. ಈ ಅವಕಾಶ ಸಿಕ್ಕಿರುವುದು ನಮ್ಮ ಭಕ್ತ. ದೇವರು ನಮಗೆ ವರ ಮತ್ತು ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ.
ಯಶಸ್ಸು ಯಾರ ಸ್ವತ್ತೂ ಅಲ್ಲ. ಪರಿಶ್ರಮ ಮತ್ತು ಧೈರ್ಯದಿಂದ ಯಶಸ್ಸು ಸಿಗುತ್ತದೆ. ನಾವು ಮಾನವೀಯತೆ ಉಳಿಸಿಕೊಂಡು ಭಗವಂತ ನೀಡಿರುವ ಅವಕಾಶದಲ್ಲಿ ಸಮಾಜಕ್ಕೆ ಸೇವೆ ಮಾಡಬೇಕು. ನೀವೆಲ್ಲ ನಮಗೆ ದೊಡ್ಡ ಜವಾಬ್ದಾರಿ ನೀಡಿದ್ದೀರಿ. ನಾವು ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ. ಅಧಿಕಾರ ಬರುತ್ತದೆ ಹೋಗುತ್ತದೆ. ಅಧಿಕಾರದಲ್ಲಿ ಇದ್ದಾಗ ಹೇಗೆ ಕೆಲಸ ಮಾಡುತ್ತೇವೆ ಎಂಬುದು ಮುಖ್ಯ.
ನಮ್ಮ ಧಾರ್ಮಿಕ ಪರಂಪರೆ ಉಳಿಸಿಕೊಂಡು ನಾವು ಕೆಲಸ ಮಾಡೋಣ. ಹುಕ್ಕೇರಿ ಮಠದ ಶ್ರೀಗಳು 60 ಸಾವಿರ ಮಕ್ಕಳಿಗೆ ವಿದ್ಯೆ, ಅನ್ನ ದಾಸೋಹ ಮಾಡುತ್ತಿದ್ದಾರೆ. ವೇದ ಕಲಿಸುತ್ತಿದ್ದಾರೆ. “ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ” ಎಂಬ ಶ್ಲೋಕ ಇದೆ. ಅಂದರೆ ಅರ್ಚಕನ ಪ್ರಭಾವ ಮತ್ತು ಸಂಸ್ಕಾರದಿಂದ ಶಿಲೆಯಾದ ಮೂರ್ತಿ ಶಂಕರನಾಗುತ್ತೆ. ನಾವು ನಮ್ಮ ಮನೆ ಜೊತೆಗೆ ಮಠವನ್ನು ಕಾಪಾಡಿಕೊಳ್ಳಬೇಕು.
ಲಕ್ಷ್ಮಿ ಫೋಟೋಗೆ ಪೂಜೆ ಮಾಡಿದಾಕ್ಷಣ ಹಣ ಸಿಗುವುದಿಲ್ಲ. ವಿಘ್ನೇಶ್ವರ ಫೋಟೋಗೆ ಪೂಜೆ ಮಾಡಿದಾಕ್ಷಣ ನಮ್ಮ ಕಷ್ಟ ಬಗೆ ಹರಿಯುವುದಿಲ್ಲ. ಸರಸ್ವತಿ ಫೋಟೋಗೆ ಪೂಜೆ ಮಾಡಿದಾಕ್ಷಣ ವಿದ್ಯೆ ಸಿಗುವುದಿಲ್ಲ, ಹನುಮಂತನ ಫೋಟೋಗೆ ಪೂಜೆ ಮಾಡಿದಾಕ್ಷಣ ಶಕ್ತಿ ಸಿಗುವುದಿಲ್ಲ. ನಾನು ಮಾಡುವ ಪ್ರಯತ್ನ, ಶ್ರಮ ಹಾಗೂ ನಂಬಿಕೆ ಇರಬೇಕು. ಶ್ರೀಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಿರುವುದಕ್ಕೆ ಇಂದು ಈ ಪ್ರಶಸ್ತಿ ಲಭಿಸಿದೆ ಎಂದು ಶಿವಕುಮಾರ ಹೇಳಿದರು.
ಭಗವಂತ ಅವರಿಗೆ ಇನ್ನಷ್ಟು ಶಕ್ತಿ ನೀಡಲಿ. ಸಮಾಜ ಸೇವೆ ಮಾಡುವ ಭಾಗ್ಯ ಅವರಿಗೆ ದೊರೆಯಲಿ ಎಂದು ಗಂಗಾಧರ ಅಜ್ಜನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಎಲ್ಲಾ ಶ್ರೀಗಳ ಆಶೀರ್ವಾದ ಪಡೆಯುವ ಭಾಗ್ಯ ಸಿಕ್ಕಿದೆ. ನಾವು ಯಶಸ್ಸು ಸಾಧಿಸಬೇಕಾದರೆ ಧರ್ಮರಾಯನ ಧರ್ಮತ್ವ, ದಾನಶೂರ ಕರ್ಣನ ದಾನತ್ವ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ, ಕೃಷ್ಣನ ತಂತ್ರ ಇರಬೇಕು. ಈ ಎಲ್ಲಾ ಗುಣ ನಿಮ್ಮಲ್ಲಿ ಬೆಳೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದರು.
ದಸರಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತುಮಕೂರು ನೊಣವಿನಕೆರೆಯ ಶ್ರೀ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಶ್ರೀ ಕರೀವೃಷಭ ದೇಶೀಕೇಂದ್ರ ಶಿವಯೋಗಿ ಸ್ವಾಮೀಜಿ ಅವರಿಗೆ ರೇಣುಕಶ್ರೀ ಪುರಸ್ಕಾರ ಪ್ರದಾನ ಮಾಡಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ನಿಡಸೋಸಿ ಸಿದ್ಧ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಮಾಜಿ ಸಚಿವ ಎ ಬಿ ಪಾಟೀಲ, ಪ್ರಕಾಶ್ ಹುಕ್ಕೇರಿ ಮತ್ತು ನಿಖಿಲ್ ಉಮೇಶ್ ಕತ್ತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ