ನನ್ನನ್ನು ಕೆಣಕಿದರೆ ನನ್ನ ವರಸೆ ತೋರಿಸಬೇಕಾಗುತ್ತೆ: ಎಚ್ ಡಿಕೆ, ರೇವಣ್ಣಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ, ಹಾಸನ: “ನನ್ನನ್ನು ಕೆಣಕಿದರೆ ನಾನೂ ನನ್ನ ವರಸೆ ತೋರಿಸಬೇಕಾಗುತ್ತದೆ” ಎಂದು ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಎಚ್.ಡಿ.ರೇವಣ್ಣಗೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಮುನಿಸಿಕೊಂಡು ಪಕ್ಷದಿಂದ ಹೊರಬಂದ ಒಕ್ಕಲಿಗ ನಾಯಕರನ್ನು ಚುನಾವಣೆಯಲ್ಲಿ ಸೋಲಿಸುತ್ತಾ ಬಂದವರು, ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ ಎಂಬ ಹತಾಶೆಯಿಂದ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರು ಸುಖಾಸುಮ್ಮನೆ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಅವರು ಇದೇ ರೀತಿ ಮುಂದುವರಿದರೆ ನನ್ನ ವರಸೆ ತೋರಿಸಬೇಕಾಗುತ್ತದೆ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಎಚ್ಚರಿಕೆ ನೀಡಿದರು.
“ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ನನ್ನ ಹೆಸರು ಹೇಳುವುದಿಲ್ಲ, ನನ್ನನ್ನು ‘ಅರಸೀಕೆರೆಯವನು’ ಎಂದು ಸಂಬೋಧಿಸುತ್ತಾರೆ. ನಾನೂ ಮನಸ್ಸು ಮಾಡಿದರೆ ಅವರನ್ನು ಚನ್ನಪಟ್ಟಣ ಶಾಸಕ ಅನ್ನಬಹುದು, ಆದರೆ ನಾನು ಹಾಗೆ ಮಾತನಾಡುವುದಿಲ್ಲ. ನಮ್ಮಪ್ಪ ನನಗೂ ಹೆಸರಿಟ್ಟಿದ್ದಾನೆ. ನಮ್ಮ ಹೆಸರು ಹೇಳೋ ಸೌಜನ್ಯ ಅವರಿಗೆ ಇಲ್ಲದ ಮೇಲೆ ನಮ್ಮ ಬಗ್ಗೆ ಏಕೆ ಮಾತಾಡಬೇಕು?”ಎಂದು ಪ್ರಶ್ನಿಸಿದರು.
“ಇತ್ತೀಚೆಗೆ ನನ್ನನ್ನು ಮಜ್ಜಿಗೆ ಮಾರುವವನು ಎಂದು ಟೀಕಿಸಲು ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಗಂಡಸಿ ಶಾಲೆಗೆ ಸೈಕಲ್‌ನಲ್ಲಿ ಬರುತ್ತಿದ್ದೆ. ಆಗ ಹಾಲು-ಮೊಸರನ್ನು ಕ್ಯಾನ್‌ನಲ್ಲಿ ತುಂಬಿ ಕಳುಹಿಸುತ್ತಿದ್ದರು. ಅದನ್ನು ತಂದು ಗಂಡಸಿ ಹೋಟೆಲ್‌ಗೆ ಕೊಡುತ್ತಿದೆ, ಇದು ತಪ್ಪೇ? ಮಜ್ಜಿಗೆ ಏನು ಸ್ಮಗ್ಲಿಂಗ್ ಗೂಡ್ಸೇ? ಎಂದು ಪ್ರಶ್ನಿಸಿದರಲ್ಲದೆ, ”ನಾನು ಮಜ್ಜಿಗೆ, ಮೊಸರು ಮಾರುವವನು ಎಂದು ವ್ಯಂಗ್ಯವಾಡುವುದಾದರೆ ಎಚ್.ಡಿ.ಕುಮಾರಸ್ವಾಮಿ ಹಿಂದೆ ಬಿಬಿಎಂಪಿ ಕಸದ ಟೆಂಡರ್ ಪಡೆದಿದ್ದರಲ್ಲ, ಅದಕ್ಕೆ ಏನನ್ನಬೇಕು” ಎಂದು ವ್ಯಂಗ್ಯವಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ