ಪ್ರಗತಿವಾಹಿನಿ ಸುದ್ದಿ; ವಿಜಯನಗರ: ವಿಶ್ವ ವಿಖ್ಯಾತ ಹಂಪಿ ವಿರೂಪಾಕ್ಷ ದೇಗುಲದ ಕಂಬಕ್ಕೆ ಮೊಳೆ ಹೊಡೆದ ಆರೋಪದಲ್ಲಿ ಗುಮಾಸ್ತರೊಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಐತಿಹಾಸಿಕ ಸ್ಮಾರಕ ಎಂದಾಕ್ಷಣ ಹಂಪಿಯಲ್ಲಿನ ಒಂದೊಂದು ಸ್ಮಾರಕಗಳು, ಕಲ್ಲಿನ ಕಂಬ, ದೇವಾಲಯಗಳು ಅಲ್ಲಿನ ಕೆತ್ತನೆಗಳು ಕಣ್ಮುಂದೆ ಬರುತ್ತವೆ. ಪುರಾತನ ಸ್ಮಾರಕಗಳನ್ನು, ದೇವಾಲಗಳನ್ನು ರಕ್ಷಣೆ ಮಾಡಬೇಕಾಗಿದ್ದ ಧಾರ್ಮಿಕ ದತ್ತಿ ಇಲಾಖೆಯೇ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಕಲ್ಲಿನ ಕಂಬಕ್ಕೆ ಮೊಳೆ ಹೊಡೆದಿದೆ.
ಈ ಪ್ರಕರಣ ಸಂಬಂಧ ಇದೀಗ ಗುಮಾಸ್ತ ಬಿ.ಜಿ.ಶ್ರೀನಿವಾಸ್ ಅವರನ್ನು ಅಮಾನತು ಮಾಡಿ ಧಾರ್ಮಿಕ ದತ್ತಿ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಗರ್ಭಗುಡಿಯ ಉತ್ತರ ದಿಕ್ಕಿನ ದ್ವಾರದ ಎರಡು ಕಂಬಗಳಲ್ಲಿ ಗೇಟ್ ಕೂರಿಸಲು ಧಾರ್ಮಿಕ ದತ್ತಿ ಇಲಾಖೆ ಮೊಳೆ ಹೊಡೆದಿತ್ತು. ಈ ಮೂಲಕ ಸ್ಮಾರಕಗಳಿಗೆ ಹಾನಿ ಉಂಟುಮಾಡಿದ್ದು, ಭಾರತೀಯ ಪುರಾತತ್ವ ಇಲಾಖೆ ಆಕ್ಷೇಪ ವ್ಯಕ್ತಪಡಿಸಿ ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದಿತ್ತು. ಅಲ್ಲದೇ ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಪುರಾತತ್ವ ಇಲಾಖೆಯ ಅನುಮತಿಯನ್ನೂ ಪಡೆದುಕೊಂಡಿರಲಿಲ್ಲ ಈ ಹಿನ್ನೆಲೆಯಲ್ಲಿ ನೋಟಿಸ್ ಕೂಡ ಜಾರಿಯಾಗಿತ್ತು. ಇದೀಗ ಈ ಪ್ರಕರಣದಲ್ಲಿ ಗುಮಾಸ್ತ ಬಿ.ಜಿ. ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ