*ಅವರು ಟೋಪಿ ಹಾಕಿ ಹೋಗಿದ್ದಾರೆ, ನಿಮ್ಮ ಜತೆ ನಾನಿರುತ್ತೇನೆ; ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಮುಖಂಡರಿಗೆ ಧೈರ್ಯ ತುಂಬಿದ ಮಾಜಿ ಸಿಎಂ HDK*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಧೃತಿಗೆಡಬೇಡಿ. ನಿಮ್ಮನ್ನು ಉಳಿಸಿ, ರಕ್ಷಣೆ ಮಾಡಿಕೊಳ್ಳುವ ಹೊಣೆ ನನ್ನದು ಎಂದು ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ಮುಖಂಡರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಧೈರ್ಯ ತುಂಬಿದರು.
ಬಿಡದಿ ತೋಟದಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಕ್ಷೇತ್ರದ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು; ಪಕ್ಷದ ನಿಷ್ಠಾವಂತರನ್ನು ಕಡೆಗಣಿಸುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ಕುತಂತ್ರಗಳು ನಡೆಯಲ್ಲ, ಅದಕ್ಕೆ ಹೆದರುವ ಪ್ರಶ್ನೆಯೂ ಇಲ್ಲ ಎಂದರು ಮಾಜಿ ಮುಖ್ಯಮಂತ್ರಿಗಳು.
ಪಕ್ಷ ಬಿಟ್ಟವರ ಬಗ್ಗೆ ಅತೀವ ಬೇಸರ:
ದಾಸರಹಳ್ಳಿ ಕ್ಷೇತ್ರದಲ್ಲಿ ನಮ್ಮ ಪಕ್ಷ ಪ್ರಬಲವಾಗಿದೆ. ನಮ್ಮೆಲ್ಲರ ದುಡಿಮೆ, ಶ್ರಮದಿಂದ ಗೆದ್ದು ಶಾಸಕರಾದವರು ಈ ಬಾರಿ ಸೋತೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಸೇರಿದ್ದಾರೆ. ಅವರು ಕಾಂಗ್ರೆಸ್ ನಿಂದ ನಮ್ಮ ಪಕ್ಷಕ್ಕೆ ಬಂದವರು,
ಈಗ ಆ ಪಕ್ಷವನ್ನೇ ಸೇರಿದ್ದಾರೆ. ಸೋತು ಬೇಸರದಲ್ಲಿ ಇದ್ದ ಅವರನ್ನು ಎರಡು ಮೂರು ಸಲ ಕರೆದು ಮಾತನಾಡಿದೆ. ಮುಂದೆ ಒಳ್ಳೆಯ ಅವಕಾಶ ಬರುತ್ತದೆ, ಕಾಯಿರಿ, ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ದುಡುಕಬೇಡಿ, ಕಾರ್ಯಕರ್ತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದೆ. ದುರಂತ ಎಂದರೆ; ಕಾರ್ಯಕರ್ತರ ರಕ್ಷಣೆ ಮಾಡಬೇಕು, ಅವರ ಮೇಲೆ ಕಾಂಗ್ರೆಸ್ ನವರು ಸುಳ್ಳು ಕೇಸು ಹಾಕ್ತಾ ಇದ್ದಾರೆ ಎಂದು ಕಾರ್ಯಕರ್ತರ ಕಾರಣ ಕೊಟ್ಟೆ ಅವರು ಕಾಂಗ್ರೆಸ್ ಸೇರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ದೇವೇಗೌಡರು ಅವರ ಮನೆಗೆ ಹೋಗಿದ್ದರು. ಅಷ್ಟಾದರೂ ಅವರಿಗೆ ಆ ಬಗ್ಗೆ ಸ್ಮರಣೆ ಇಲ್ಲ. ಅಧಿಕಾರ ಬರುತ್ತೆ, ಹೋಗುತ್ತೆ. ಆದರೆ ಕಾರ್ಯಕರ್ತರಿಗೆ ಮೋಸ ಮಾಡಿ ಹೋಗಿದ್ದು ನನಗೆ ನೋವು ಉಂಟು ಮಾಡಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸರಕಾರದ ಪಾಪದ ಕೊಡ ತುಂಬಿದೆ
ಈ ಸರಕಾರದ ಪಾಪದ ಕೊಡ ತುಂಬಿದೆ. ಪ್ರತಿಪಕ್ಷಗಳ ಮುಖಂಡರು, ಕಾರ್ಯಕರ್ತರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಕ್ಯಾಟಗರಿ ಮಾಡಿಕೊಡುತ್ತೇವೆ ಎಂದು ಆಸೆ ಹುಟ್ಟಿಸುತ್ತಿದ್ದಾರೆ. ಆಸೆಯಿಂದ ಹೋದವರಿಗೆ ನಿರಾಶೆ ತಪ್ಪಿದ್ದಲ್ಲ. ಲೋಕಸಭೆ ಚುನಾವಣೆ ಮುಗಿಯುವವರೆಗೂ ಇವರು ಪಾಲಿಕೆ ಚುನಾವಣೆ ಮಾಡಲ್ಲ ಎಂದರು ಅವರು.
ನಮ್ಮ ಕಾರ್ಯಕರ್ತರಿಗೆ ಆಸೆ ಆಮಿಷ ಒಡ್ಡುತ್ತಿದ್ದಾರೆ. ನಿಮ್ಮ ಶ್ರಮ, ದುಡಿಮೆ, ನಿಷ್ಠೆ ಬಗ್ಗೆ ನನಗೆ ಗೊತ್ತಿದೆ, ನಿಮ್ಮ ಹಿತ ಕಾಯುತ್ತೇನೆ. ಏಕಾಂಗಿಯಾಗಿ ಹೋರಾಟ ಮಾಡ್ತಾ ಇದ್ದೇನೆ. ದ್ವೇಷಕ್ಕೆ, ಅಸೂಯೆಗೆ ನಾನು ಸರಕಾರದ ಬಗ್ಗೆ ಚರ್ಚೆ ಮಾಡ್ತಿಲ್ಲ. ಆದರೆ, ಇಂಥ ಕಷ್ಟದ ಕಾಲದಲ್ಲಿ ನಾನು ಮೌನಕ್ಕೆ ಶರಣಾದರೆ ನಾನು ಜನತೆಗೆ ದ್ರೋಹ ಬಗೆದಂತೆ. ನನ್ನ ಕರ್ತವ್ಯ ಮಾಡ್ತಾ ಇದೀನಿ. ವಿದ್ಯುತ್ ಕಳ್ಳ ಎಂದು ಹಣೆಪಟ್ಟಿ ಕಟ್ಟಿದರು. ನನ್ನನ್ನು ಮಾನಸಿಕವಾಗಿ ಕುಂದಿಸುವ ಕೆಲ್ಸ ಮಾಡ್ತಾ ಇದಾರೆ. ಅಧಿವೇಶನದಲ್ಲಿ ಇದೆಲ್ಲವನ್ನೂ ಎದುರಿಸುತ್ತೇನೆ. ನಿಮ್ಮ ನೈತಿಕ ಬೆಂಬಲ ಇದ್ದರೆ ಎಂಥದ್ದೇ ಸವಾಲು ಎದುರಿಸುತ್ತೇನೆ
ದಾಸರಹಳ್ಳಿ ಕ್ಷೇತ್ರದಲ್ಲಿ ಆದಂತೆಯೇ ಮಹಾಲಕ್ಷ್ಮಿ ಲೇಔಟ್ ನಲ್ಲಿಯೂ ಆಯಿತು. ಅಲ್ಲಿಯೂ ಇಬ್ಬರು ಇದೇ ರೀತಿ ಎರಡು ಬಾರಿ ಟೋಪಿ ಹಾಕಿ ಹೋದರು. ಹಲವಾರು ಕ್ಷೇತ್ರಗಳಲ್ಲಿ ಹೀಗೆಯೇ ಆಗಿದೆ. ಆದರೆ ಎಂದೂ ನನಗೆ ಕಾರ್ಯಕರ್ತರು ನಂಗೆ ಮೋಸ ಮಾಡಿಲ್ಲ. ಅವರಿಗಾಗಿ ನಾನು ಬದುಕುತ್ತೇನೆ ಎಂದು ಭಾವುಕರಾಗಿ ನುಡಿದರು ಅವರು.
ಒಂದು ವರ್ಷದಲ್ಲಿ ನಮ್ಮ ಪಕ್ಷ ಬಲವಾಗುತ್ತದೆ. ಲೋಕಸಭೆ ಚುನಾವಣೆ ನಂತರ ನಮ್ಮ ಪಕ್ಷದ ಬಲ ಏನೆಂದು ನಿಮಗೆ ಅರ್ಥ ಆಗುತ್ತದೆ. ಕಾರ್ಯಕರ್ತರು ಏನೇ ಸಮಸ್ಯೆ ಇದ್ದರೂ ನೇರವಾಗಿ ನನ್ನ ಬಳಿ ಬನ್ನಿ. ನಿಮ್ಮನ್ನು ಉಳಿಸಿಕೊಳ್ಳುವ ಹೊಣೆ ನನ್ನದು ಎಂದು ಧೈರ್ಯ ತುಂಬಿದರು ಮಾಜಿ ಮುಖ್ಯಮಂತ್ರಿಗಳು.
ಶಪಥ ಮಾಡಿದ ಮುಖಂಡರು:
ದಾಸರಹಳ್ಳಿ ಕ್ಷೇತ್ರದಲ್ಲಿ ಪಕ್ಷ ಬಲವಾಗಿದೆ. ಮತ್ತೆ ತಳಮಟ್ಟದಿಂದ ಪಕ್ಷ ಕಟ್ಟುತ್ತೇವೆ ಎಂದು ದಾಸರಹಳ್ಳಿ ಕ್ಷೇತ್ರದ ಮುಖಂಡರು ಶಪಥ ಮಾಡಿದರು.
ದೇವೇಗೌಡರು, ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಅಚಲ ನಿಷ್ಠೆ ವ್ಯಕ್ತಪಡಿಸಿದ ಮುಖಂಡರು, ಕಾಂಗ್ರೆಸ್ ಪಕ್ಷದ ಆಮಿಷಗಳಿಗೆ ಬಲಿ ಆಗುವ ಪ್ರಶ್ನೆ ಇಲ್ಲ ಎಂದು ಕುಮಾರಸ್ವಾಮಿ ಅವರಿಗೆ ವಚನ ಕೊಟ್ಟ ಮುಖಂಡರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಅಂದಾನಪ್ಪ, ಕ್ಷೇತ್ರದ ಅಧ್ಯಕ್ಷಮುನಿಸ್ವಾಮಿ, ಲೋಕೇಶ್ ಗೌಡ, ಶಿವರಾಮಯ್ಯ, ಮುನೇಗೌಡ, ನರಸಿಂಹ ಮೂರ್ತಿ, ಲಾರಿ ಮಂಜಣ್ಣ, ಭೈರಣ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ರಾಣಿ ಪ್ರತಾಪ್, ಸುರೇಶ್ ಗೌಡ, ಮಲ್ಲೇಶ್ ಗೌಡ, ಮುದ್ದಣ್ಣ, ಭರತ್ ಗುಂಡಣ್ಣ, ಚಂದನ್ ಸೇರಿ ನೂರಾರು ಪ್ರಮುಖ ಮುಖಂಡರು ಈ ಸಂದರ್ಭದಲ್ಲಿ ಇದ್ದರು.
ಇದೇ ವೇಳೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಚನ್ನಕೃಷ್ಣ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು. ಅವರನ್ನು ಮಾಜಿ ಮುಖ್ಯಮಂತ್ರಿ ಅವರು ಪಕ್ಷಕ್ಕೆ ಬರ ಮಾಡಿಕೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ