*ಬೆಳಗಾವಿ: ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿದ ಯೋಧ ಭೀಮು ಅಶೋಕ ಭಾಪಕರ ಅಂತ್ಯಕ್ರಿಯೆ*
ಪ್ರಗತಿವಾಹಿನಿ ಸುದ್ದಿ; ಬಾವನ ಸೌಂದತ್ತಿ; ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಯೋಧ ಭೀಮು(ದಿಗ್ವಿಜಯ)ಅಶೋಕ ಭಾಪಕರ (೩೫)ಅವರು ಪಂಜಾಬ್ ನ ಚಂಡಿಗಡದಲ್ಲಿ ಹುತಾತ್ಮರಾಗಿದ್ದು, ಇಂದು ಸಕಲ ಸರಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಭಾರತೀಯ ಸೇನಾಪಡೆಯ 67ಎಂಇಡಿ ರೆಜಮೆಂಟ್ ನಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಭೀಮು ಬಾಪಕರ ಅವರು ಸೇನೆ ವತಿಯಿಂದ ಆಯೋಜಿಸಿದ್ದ ಕ್ರಿಡೆಯಲ್ಲಿ ಭಾಗವಹಿಸಿ ಆಟದ ವೇಳೆ ಗಾಯಗೊಂಡಿದ್ದರು. ಅವರನ್ನು ಚಂಡಿಗಡ ಸೇನಾಪಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ನಂತರ ಅವರ ಮನೆಯ ಹತ್ತಿರ ಪಾರ್ಥಿವ ಶರೀರ ಹೋಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತು. ಪಾರ್ಥಿವ ಶರೀರಕ್ಕೆ ಆರತಿ ಬೆಳಗಿ ಹಾಗೂ ಮಹಿಳೆಯರು ಮೊಂಬತ್ತಿ ಹಚ್ಚಿ ನಮನಗಳನ್ನು ಸಲ್ಲಿಸಿದರು. ನಂತರ ಗ್ರಾಮದ ಸೊಸೈಟಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಸಹಸ್ರಾರು ಜನರು ಆಗಮಿಸಿ ಯೋಧನ ದರ್ಶನ ಪಡೆದರು. ಸಿಪಿಐ ಎಚ್ ಡಿ ಮುಲ್ಲಾ ಬಿಗಿಬಂದೋಬಸ್ತ್ ಏರ್ಪಾಡು ಮಾಡಿದ್ದರು. ಯೋಧನ ಪಾರ್ಥಿವ ಶರೀರ ಅಂತಿಮ ದರ್ಶನವನ್ನು ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಓಂಕಾರ ಆಶ್ರಮಮಠದ ಶಿವಶಂಕರ ಸ್ವಾಮೀಜಿ, ಈರಗೌಡ ಪಾಟೀಲ, ಗ್ರಾಮಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕಾಟೆ, ಉಪಾಧ್ಯಕ್ಷ ಅಜಾದ ತಾಸೀವಾಲೆ, ತಾತ್ಯಾಸಾಹೇಬ್ ಕಾಟೆ, ದೂಳಗೌಡ ಪಾಟೀಲ, ಅನೀಲ ಹಂಜೆ, ಗಣೇಶ ಮೊಹಿತೆ, ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಗ್ರಾಮಸ್ಥರು ಪಡೆದರು.
ತೆರೆದ ವಾಹನದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಯೋಧನ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಹೂಗಳನ್ನು ಹಾರಿಸುವುದು, ವಂದೇ ಮಾತರಾಂ ಎಂದು ಘೋಷಣೆ ಕೂಗುವ ಮೂಲಕ ಹಾಗೂ ದೇಶ ಭಕ್ತಿಗೀತೆಗಳ ಹಾಡು ಹಾಕುವ ಮೂಲಕ ಯೋಧನಿಗೆ ನಮನ ಸಲ್ಲಿಸಲಾಯಿತು. ನಂತರ ಕೃಷ್ಣಾ ನದಿ ದಡದ ಭಾಗದಲ್ಲಿರುವ ಸ್ಮಶಾನದಲ್ಲಿ ಮರಾಠ ಸಮಾಜದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ