Kannada NewsKarnataka NewsLatest

*ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೋ ಇಲ್ಲವೋ? ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಕಿಡಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದ ಸಂಸತ್ತಿನ ಮೇಲೆ ನಡೆದ ದಾಳಿ ವಿಚಾರವಾಗಿ ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರಿಂದ ಉತ್ತರ ಕೇಳಿದ ಕಾರಣಕ್ಕೆ ವಿರೋಧ ಪಕ್ಷಗಳ 146 ಸಂಸದರನ್ನು ಸದನದಿಂದ ಅಮಾನತು ಮಾಡಲಾಗಿರುವ ಕ್ರಮ ಖಂಡನೀಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.

ಸಂಸದರ ಅಮಾನತು ಖಂಡಿಸಿ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಗವಹಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಪ್ರಜಾಪ್ರಭುತ್ವ ಹಾಗೂ ಅದರ ಮೌಲ್ಯಗಳನ್ನು ಉಳಿಸುವ ಉದ್ದೇಶದಿಂದ ಸರ್ಕಾರದ ವೈಫ್ಯಲ್ಯ ಹಾಗೂ ಭದ್ರತಾ ಲೋಪದ ಬಗ್ಗೆ ಸದನದಲ್ಲಿ ಚರ್ಚೆಗೆ ಆಗ್ರಹಿಸಲಾಯಿತು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತು ಪಡಿಸಿ ಉಳಿದವರನ್ನು ಅಮಾನತು ಮಾಡಿದ್ದಾರೆ.

ನೂತನ ಸಂಸತ್ ಭವನದಲ್ಲಿ ವಿರೋಧ ಪಕ್ಷದ ಸಂಸದರ ವಿರುದ್ಧದ ದಾಳಿ, ಕೇಂದ್ರ ಸರ್ಕಾರದ ದುರಾಡಳಿತ, ಸಂವಿಧಾನ ವಿರೋಧಿ ನೀತಿ ಖಂಡಿಸಿ ಸಂಸತ್ ಆವರಣದ ಮಹಾತ್ಮ ಗಾಂಧಿ ಅವರ ಪ್ರತಿಮೆ ಮುಂದೆ ನಮ್ಮ ಸಂಸತ್ ಸದಸ್ಯರು ಪ್ರತಿಭಟನೆ ಮಾಡಿದ್ದಾರೆ. ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತಿದೆ ಎಂದರು.

ಸ್ಪೀಕರ್ ಅವರ ಬಳಿ ಕಾಗದ ಹರಿದಿದ್ದಾರೆ ಎಂದು ವಿರೋಧ ಪಕ್ಷಗಳ ಕೆಲವು ಸದಸ್ಯರ ನಡೆಯನ್ನು ಹಕ್ಕುಬಾಧ್ಯತಾ ಸಮಿತಿಯ ಪರಿಶೀಲನೆಗೆ ಒಳಪಡಿಸಿದ್ದಾರೆ. ಆಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೋ ಇಲ್ಲವೋ ಎಂಬ ಪ್ರಶ್ನೆಯನ್ನು ನಾವು ಜನರ ಮುಂದೆ ಇಡಬೇಕಿದೆ. ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯ ಗೆದ್ದಿದ್ದೇವೆ, ನಾವು ಏನು ಬೇಕಾದರೂ ಮಾಡಬಹುದು ಎಂದು ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಜನ ಯಾವಾಗ ಬೇಕಾದರೂ ತಮ್ಮ ನಿರ್ಧಾರವನ್ನು ಬದಲಿಸಬಹುದು. ರಾಜ್ಯ ವಿಧಾನಸಭೆ ನಂತರ ಲೋಕಸಭೆ ಚುನಾವಣೆಯಲ್ಲಿ ಜನ ಬೇರೆ ರೀತಿಯ ಫಲಿತಾಂಶ ಕೊಟ್ಟಿರುವ ಉದಾಹರಣೆಗಳಿವೆ. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ವಿಧಾನಸಭೆ ಚುನಾವಣೆ ನಂತರ ಎರಡೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನರ ತೀರ್ಪು ಬದಲಾಗಿತ್ತು. ಹೀಗಾಗಿ ನಾವು ಹತಾಶರಾಗುವುದು ಬೇಡ. ನಾವು ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದು, ಬಿಜೆಪಿಯ ಸರ್ವಾಧಿಕಾರಿ ಸರ್ಕಾರಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ನಮ್ಮ ರಾಜ್ಯದಲ್ಲಿ, ಜನರ ಸಮಸ್ಯೆ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆ ಮಾಡಿ ಎಂದರೆ ವಿರೋಧ ಪಕ್ಷದ ನಾಯಕರು ಚರ್ಚೆ ಮಾಡಲಿಲ್ಲ. ಕೊನೆಯ ದಿನ ಅವರು ಹೊರಗೆ ಪ್ರತಿಭಟನೆ ಮಾಡಿದ್ದರು. ಜನ ಸದನದ ಒಳಗೆ ಚರ್ಚೆ ಮಾಡಲು ಬಿಜೆಪಿಯ 65 ನಾಯಕರನ್ನು ಆರಿಸಿ, ಕಳುಹಿಸಿದ್ದಾರೆ.

ಈ ಹೋರಾಟವನ್ನು ಜನರ ಮಧ್ಯೆ ತೆಗೆದುಕೊಂಡು ಹೋಗಬೇಕು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು, ಸಂವಿಧಾನದ ಹಕ್ಕುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ನಮ್ಮ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಿದೆಯೇ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳ ನಾಯಕರು ಎತ್ತುತ್ತಿದ್ದಾರೆ. ಶೇ.98 ರಷ್ಟು ಫಲಾನುಭವಿಗಳಿಗೆ ನಮ್ಮ ಯೋಜನೆಗಳು ತಲುಪಿವೆ. ಸುಮಾರು 59 ಸಾವಿರ ಕೋಟಿಯಷ್ಟು ಹಣವನ್ನು ನಾವು ಈ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದ್ದೇವೆ. ಕೊಟ್ಟ ಮಾತು ಉಳಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಬದ್ಧತೆ.

ಕಾರ್ಯಕರ್ತರಿಂದಲೇ ಈ ಪಕ್ಷ. ನಿಮ್ಮ ಹೋರಾಟವೇ ನಮಗೆ ಸ್ಫೂರ್ತಿ. ನಿಮ್ಮ ವಿಶ್ವಾಸ ಸದಾ ನಮ್ಮ ಜತೆ ಇರಲಿ ಎಂದು ಮನವಿ ಮಾಡುತ್ತೇನೆ.

ಕೇಂದ್ರದ ಬಿಜೆಪಿ ಸರ್ಕಾರ ದೇಶದ ಚರಿತ್ರೆಯಲ್ಲಿ ದಾಖಲಾಗುವಂತಹ ಕೆಲಸವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಸ್ಪೀಕರ್ ಅವರಿಂದ ಮಾಡಿಸಿದೆ ಎಂದು ಕಿಡಿಕಾರಿದರು. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗೆ ಭಂಗವಾಗುತ್ತಿದ್ದು, ಸಂಸತ್ ಭದ್ರತಾ ಲೋಪದ ಬಗ್ಗೆ ಸರ್ಕಾರ ಅಧಿಕೃತ ಹೇಳಿಕೆಯನ್ನು ಸದನದಲ್ಲಿ ನೀಡಬೇಕು ಎಂದು ಆಗ್ರಹಿಸಿದೆವು. ಈ ಬಗ್ಗೆ ಹೇಳಿಕೆ ನೀಡಲು ಅವರಿಂದ ಸಾಧ್ಯವಾಗದೇ ವಿರೋಧ ಪಕ್ಷಗಳ ಸಂಸತ್ ಸದಸ್ಯರನ್ನು ಅಮಾನತು ಮಾಡಿ ತಮಗೆ ಬೇಕಾದ ಮಸೂದೆ ಮಂಡನೆ ಮಾಡಿ ಅನುಮೋದನೆ ಪಡೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಮಾನ. ಈ ವಿಚಾರವಾಗಿ ಜನರ ಗಮನ ಸೆಳೆಯಲು ದೇಶದಾದ್ಯಂತ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಾವು ಪ್ರಜಾಪ್ರಭುತ್ವ ಉಳಿಸಬೇಕು. ಲೋಕಸಭೆ ಚುನಾವಣೆವರೆಗೂ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ, ಕೇಂದ್ರ ಸರ್ಕಾರದ ವೈಫಲ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button