Kannada NewsKarnataka NewsLatestPolitics

*ಮಕ್ಕಳಿಂದ ಶೌಚ ಗುಂಡಿ ಸ್ವಚ್ಛಗೊಳಿಸಿದ ಪ್ರಕರಣ; ಇನ್ನಿಬ್ಬರು ಆರೋಪಿಗಳನ್ನು 2 ದಿನದಲ್ಲಿ ಬಂಧಿಸಬೇಕು; ಪೊಲೀಸರಿಗೆ ಸಿಎಂ ಖಡಕ್ ತಾಕೀತು*

ಪ್ರಗತಿವಾಹಿನಿ ಸುದ್ದಿ; ಕೋಲಾರ: ಕೋಲಾರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಶೌಚ ಗುಂಡಿಗೆ ಮಕ್ಕಳನ್ನು ಇಳಿಸಿ ಸ್ವಚ್ಛ ಮಾಡಿಸಿದ್ದ ಪ್ರಕರಣದ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಿಲ್ಲ ಯಾಕೆ ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು.

ಮಲ ಗುಂಡಿಗೆ ಮಕ್ಕಳನ್ನು ಇಳಿಸಿ ಶುಚಿಗೊಳಿಸಿದ ಪ್ರಕರಣದಲ್ಲಿ ಮೂವರನ್ನು ಮಾತ್ರ ಜೈಲಿಗೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳನ್ನು ಏಕೆ ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ ಸಿಎಂ ಅವರನ್ನು ತಕ್ಷಣ ಬಂಧಿಸಿ ಎಂದು ಸೂಚಿಸಿದರು.

ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಪಡೆದ ಸಿಎಂ ಇದೊಂದು ಕ್ರೂರ ಕೃತ್ಯ. ಇಂಥಾದ್ದನ್ನು ನಾವು ಅಪ್ಪಿತಪ್ಪಿಯೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ ಸಿಎಂ ಎರಡು ದಿನಗಳಲ್ಲಿ ಉಳಿದಿಬ್ಬರನ್ನು ಬಂಧಿಸಿ ಎಂದು ಸೂಚಿಸಿದರು.

ಈ ಘಟನೆ ಇಡೀ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಒಂದು ಪಾಠ. ಯಾವುದೇ ಕಾರಣಕ್ಕೂ ಇದು ಮರುಕಳಿಸಬಾರದು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಎಲ್ಲಾ ಹೋಬಳಿಗಳಲ್ಲೂ ಇರುವ ವಸತಿ ಶಾಲೆಗಳಲ್ಲಿ ಆಯಾ ಹೋಬಳಿಗಳಲ್ಲೇ ಇರುವ ವಸತಿ ಶಾಲೆಗಳಿಗೆ ಸೇರುವಂತೆ, ಈ ವಿಚಾರದಲ್ಲಿ ಇರುವ ಗೊಂದಲ ಬಗೆಹರಿಸುವಂತೆ ಸೂಚಿಸಿದರು.

ವಸತಿ ಶಾಲೆಗಳ ಒಳಗೆ ಪೋಷಕರು ಪ್ರವೇಶಿಸಲು ಅವಕಾಶ ನೀಡಬೇಕು. ಇದರಿಂದ ಪೋಷಕರಿಗೆ ವಸತಿ ಶಾಲೆಗಳ ಗುಣಮಟ್ಟ ಗೊತ್ತಾಗುತ್ತದೆ. ಹೀಗೆ ಮಾಡುವುದರಿಂದ ವಸತಿ ಶಾಲೆಗಳು ಜೈಲುಗಳು ಎನ್ನುವ ಭಾವನೆ ಹೋಗುತ್ತದೆ ಎನ್ನುವ ಸಲಹೆ ಜಿಲ್ಲಾ ಸಚಿವರಾದ ಬೈರತಿ ಸುರೇಶ್, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಮತ್ತು ಶಾಸಕರುಗಳಿಂದ ವ್ಯಕ್ತವಾಯಿತು. ಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು.

ರೆವೆನ್ಯು ಮತ್ತು ಅರಣ್ಯ ಭೂಮಿ ಗುರುತಿಸುವ ವಿಚಾರದಲ್ಲಿ ಆಗುತ್ತಿರುವ ತೊಂದರೆಗಳನ್ನು, ಗೊಂದಲಗಳನ್ನು ಪರಿಹರಿಸಲು ಎರಡೂ ಇಲಾಖೆಯ ಜಂಟಿ ಸರ್ವೆ ಮಾಡಿ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.

ಈ ಸಮಸ್ಯೆ ರಾಜ್ಯ ಮಟ್ಟದಲ್ಲೂ ಇರುವುದರಿಂದ ವಿಧಾನಸೌಧದಲ್ಲಿ ಪ್ರತ್ಯೇಕ ಉನ್ನತ ಮಟ್ಟದ ಸಭೆ ಕರೆಯುತ್ತೇನೆ. ಅಲ್ಲಿಯವರೆಗೂ ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ಎಂದು ಯಾರನ್ನೂ ತೆರವುಗೊಳಿಸಬಾರದು ಎಂದು ಸಿಎಂ ಮತ್ತು ಜಿಲ್ಲಾ ಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಬರಗಾಲದ ಸಮಸ್ಯೆ ಜಿಲ್ಲೆಯಲ್ಲಿ ಯಾವ ಪ್ರಮಾಣದಲ್ಲಿದೆ? ಎಷ್ಟು ಗ್ರಾಮಗಳಲ್ಲಿ ಟ್ಯಾಂಕರ್ ನೀರು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಪ್ರಶ್ನಿಸಿ, ಇತರೆ ಯಾವುದೇ ನೀರಿನ ಮೂಲಗಳು ಇಲ್ಲದಿದ್ದಾಗ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬೋರ್ ವೆಲ್ ಕೊರೆಸಲು ಅವಕಾಶ ಮಾಡಿಕೊಳ್ಳಬಹುದು ಎಂದರು

ರೀಡ್ರಿಲ್ ಮಾಡುವುದಕ್ಕಿಂತ ಹೊಸ ಬೋರ್ ಕೊರೆಯುವುದೇ ಖರ್ಚು ಕಡಿಮೆ. ರೀಡ್ರಿಲ್ಗೆ ಸಿಕ್ಕಾಪಟ್ಟೆ ಖರ್ಚು ಬರುತ್ತದೆ. ಹಣದ ಹೊರೆ ಆಗುತ್ತದೆ ಎನ್ನುವ ಅಭಿಪ್ರಾಯ ಶಾಸಕರುಗಳಿಂದ ವ್ಯಕ್ತವಾಯಿತು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button