*ಕೌಟುಂಬಿಕ ಕಲಹ ತಪ್ಪಿಸಲು ಹೋದಾಗ ಅಂಗನವಾಡಿ ಸಹಾಯಕಿಗೆ ಪೆಟ್ಟು; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*
ಪ್ರಗತಿವಾಹಿನಿ ಸುದ್ದಿ; ಧಾರವಾಡ: ಬೆಳಗಾವಿಯ ಬಸುರ್ತೆ ಗ್ರಾಮದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯ ಮೇಲಿನ ಹಲ್ಲೆ ಪ್ರಕರಣವು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ತನಿಖೆ ಮುಂದುವರಿದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಧಾರವಾಡದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಇಬ್ಬರ ಜಗಳದಲ್ಲಿ ಮಧ್ಯಸ್ಥಿಕೆ ಮಾಡಲು ಹೋಗಿ ಅಂಗನವಾಡಿ ಕಾರ್ಯಕರ್ತೆಗೆ ಪೆಟ್ಟಾಗಿದೆ. ಇಲ್ಲಿ ಅತ್ತಿಗೆ- ಮೈದುನನ ನಡುವೆ ನಡೆದಿರುವ ಕೌಟುಂಬಿಕ ಕಲಹ ತಪ್ಪಿಸಲು ಹೋದಾಗ ಅಂಗನವಾಡಿ ಸಹಾಯಕಿಗೆ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಇನ್ನು ತನಿಖಾ ಹಂತದಲ್ಲಿದೆ. ಈಗ ಏನೇ ಹೇಳಿಕೆ ನೀಡಿದರೂ ಅದು ತಪ್ಪಾಗುತ್ತದೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದು, ಯಾವುದೇ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು.
ಬೆಳಗಾವಿಯಲ್ಲೇ ಇಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚೆಚ್ಚು ನಡೆಯುತ್ತಿವೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಗೇನಿಲ್ಲ, ಘಟನೆ ಎಲ್ಲೇ ನಡೆದರೂ ಸರಕಾರ ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಸೂಕ್ತ ಕ್ರಮವನ್ನೂ ತೆಗೆದುಕೊಳ್ಳಲಾಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ