ಕೆಪಿಎಲ್‌ಗೆ ನಾಲ್ವರು ಹೊಸ ನಾಯಕರು
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಸ್ಪರ್ಧಿಸಲಿರುವ ಏಳು ತಂಡಗಳಲ್ಲಿ ನಾಲ್ಕು ತಂಡಗಳು ಈ ಬಾರಿ ಹೊಸ ನಾಯಕರನ್ನು ಆಯ್ಕೆ ಮಾಡಿವೆ. ಶನಿವಾರ ಈ ಬೆಳವಣಿಗೆ ಕಂಡು ಬಂದಿದೆ.
ಬೆಂಗಳೂರು ಬ್ಲಾಸ್ಟರ್ಸ್ ತಂಡ ರಾಬಿನ್ ಉತ್ತಪ್ಪ ಅವರ ಸ್ಥಾನದಲ್ಲಿ ಜೊನಾಥನ್ ರಾಂಗ್‌ಸೆನ್ ಅವರನ್ನು ನೇಮಿಸಿದರೆ, ಬೆಳಗಾವಿ ಪ್ಯಾಂಥರ್ಸ್ ತಂಡದ ನಾಯಕ ಸ್ಟುವರ್ಟ್ ಬಿನ್ನಿ ಬದಲಿಗೆ ಮಿರ್ ಕೌನೇನ್ ಅಬ್ಬಾಸ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಕಡಿಮೆ ಪಂದ್ಯಗಳು ಇರುವುದರಿಂದ ಅಭಿಮನ್ಯು ಮಿಥುನ್ ಶಿವಮೊಗ್ಗ ಲಯನ್ಸ್ ತಂಡದ ನಾಯಕರಾಗಲಿದ್ದಾರೆ. ಜೆ, ಸುಚಿತ್ ಅವರ ಬದಲಿಗೆ ಮೈಸೂರು ವಾರಿಯರ್ಸ್ ತಂಡದ ನಾಯಕತ್ವವನ್ನು ಅಮಿತ್ ವರ್ಮಾ ನಿಭಾಯಿಸಲಿದ್ದಾರೆ.
ಬಿಜಾಪುರ ಬುಲ್ಸ್, ಹುಬ್ಬಳ್ಳಿ ಟೈಗರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡಗಳು ಸಾಂಪ್ರದಾಯಿಕವಾಗಿ ಭರತ್ ಚಿಪ್ಲಿ, ಆರ್. ವಿನಯ್ ಕುಮಾರ್ ಹಾಗೂ ಸಿ.ಎಂ. ಗೌತಮ್ ಅವರನ್ನು ನಾಯಕತ್ವ ಸ್ಥಾನದಲ್ಲೇ ಮುಂದುವರಿಸಲಿವೆ. ಟ್ರೋಫಿ ಅನಾವರಣ ಸಂದರ್ಭದಲ್ಲಿ ವಿನಯ್ ಕುಮಾರ್ ಹಾಗೂ ಅಭಿಮನ್ಯು ಮಿಥುನ್ ಬೇರೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಹಾಜರಿರಲಿಲ್ಲ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೆಲವು ಪದಾಧಿಕಾರಿಗಳು ಹಾಗೂ ತಂಡದ ಮಾಲೀಕರು ಈ ಸಂದರ್ಭದಲ್ಲಿ ಹಾಜರಿದ್ದರು.
‘ಈ ಋತುವಿನಲ್ಲಿ ನಾವು ಮತ್ತೊಂದು ಪ್ರಶಸ್ತಿ ಗೆಲ್ಲುತ್ತೇವೆಂಬ ಆತ್ಮವಿಶ್ವಾಸವಿದೆ,‘ ಎಂದು ಬಿಜಾಪುರ ಬುಲ್ಸ್‌ನ ಭರತ್ ಚಿಪ್ಲಿ ಹೇಳಿದ್ದಾರೆ. ‘ನಮ್ಮನ್ನು ಯಾವಾಗಲೂ ಪ್ರಶಸ್ತಿ ಗೆಲ್ಲುವ ತಂಡವೆಂದು ಬಿಂಬಿಸಲಾಗುತ್ತಿದೆ, ಇದು ನಮ್ಮಲ್ಲಿ ಹೆಚ್ಚು ಒತ್ತಡವನ್ನುಂಟು ಮಾಡುತ್ತಿದೆ. ಅದೇ ರೀತಿ ಯಾವುದೇ ಅಡ್ಡಿ ಇದ್ದರೂ ಇದನ್ನು ನಿಭಾಯಿಸಿ ಹೋರಾಟ ನೀಡುವ ಆತ್ಮವಿಶ್ವಾಸ ಕೂಡ ಇದರಿಂದ ನಮಗೆ ಸಿಕ್ಕಿದೆ, ನಾವು ಅತ್ಯಂತ ಆತ್ಮವಿಶ್ವಾಸದಲ್ಲಿದ್ದೇವೆ,‘ ಎಂದು ಚಿಪ್ಲಿ ಹೇಳಿದ್ದಾರೆ.
ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಜೊನಾಥನ್ ರಾಂಗ್‌ಸೇನ್ ಮಾತನಾಡಿ, ‘ನೋಡಲು ನಮ್ಮ ತಂಡ ಉತ್ತಮವಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅದು ನಿಜವೆಂದೆನಿಸುತ್ತಿದೆ, ನಾವು ಈ ಎಲ್ಲ ಪ್ರತಿಭೆಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕಾಗಿದೆ. ಆರಂಭವಾದಾಗಿನಿಂದ ನಾವು ಪ್ರಶಸ್ತಿ ಗೆದ್ದಿರಲಿಲ್ಲ, ನನ್ನಲ್ಲಿರುವ ಎಲ್ಲ ಅನುಭವವನ್ನು ಕಾರ್ಯರೂಪಕ್ಕೆ ತಂದು ಈ ಬಾರಿ ಪ್ರಶಸ್ತಿ ಗೆಲ್ಲುತ್ತೇವೆಂಬ ಆತ್ಮವಿಶ್ವಾಸವಿದೆ,‘ ಎಂದರು.
ಗೋವಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲು ಸಜ್ಜಾಗಿರುವ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರ ಸ್ಥಾನದಲ್ಲಿ ಜೆ. ಅಭಿರಾಮ್ ಅವರು, ರಣಜಿ ಟ್ರೋಫಿ ಆಯ್ಕೆ ಸಮಿತಿಯ ಸದಸ್ಯರಾಗಲಿದ್ದಾರೆ ಎಂದು ಕೆಎಸ್‌ಸಿಎ ಅಧ್ಯಕ್ಷ ಸಂಜಯ್ ದೇಸಾಯಿ ಪ್ರಕಟಿಸಿದರು. ಕೆಎಸ್‌ಸಿಎ ತರಬೇತಿ ಶಿಬಿರದಲ್ಲಿ ಹುಬ್ಬಳ್ಳಿ, ಬೆಳಗಾವಿ, ಮೈಸೂರು ಹಾಗ ಶಿವಮೊಗ್ಗದ ಸರಕಾರಿ ಶಾಲೆಯಿಂದ 20 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಈ ಯೋಜನೆಗೆ ಕಾರ್ಯರೂಪ ತರುವಲ್ಲಿ ಪ್ರಮುಖ ಪಾತ್ರವಹಿಸಿರುವ ಭಾರತದ ಮಾಜಿ ಕ್ರಿಕೆಟಿಗ ಬಿಎಸ್ ಚಂದ್ರಶೇಖರ್ ಅವರು ಶಿಬಿರವನ್ನು ನಿರ್ವಹಿಸಲಿದ್ದಾರೆ.
ನೆರೆಗೆ ಪರಿಹಾರ
ಕರ್ನಾಟಕದಲ್ಲಿ ನೆರೆಹಾವಳಿಯಿಂದ ತತ್ತರಿಸಿರುವ ಜಿಲ್ಲೆಗಳಿಗೆ ಪರಿಹಾರ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಫ್ರಾಂಚೈಸಿ ಮಾಲೀಕರು ಮುಂದೆ ಬಂದಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಸಂಭವಿಸಿರುವ ವರುಣನ ಆರ್ಭಟಕ್ಕೆ ಈಗಾಗಲೇ 70ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಅದರಲ್ಲಿ ಹೆಚ್ಚಿನ ಸಂಖ್ಯೆ ಉತ್ತರ ಕರ್ನಾಟಕ ಹಾಗೂ ಕೊಡಗು ಜಿಲ್ಲೆಯದ್ದಾಗಿದೆ. ಉತ್ತರದ ಜಿಲ್ಲೆಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ, ಆದರೆ ದಕ್ಷಿಣದ ಜಿಲ್ಲೆಗಳಲ್ಲಿ ವಿಷಮ ಪರಿಸ್ಥಿತಿ ಮುಂದುವರಿದಿದೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಕೆಎಸ್‌ಸಿಎ ಹಲವಾರು ವರ್ಷಗಳಿಂದ ತನ್ನ ಸಿಎಸ್‌ಆರ್ ನಿಧಿಯ ಮೂಲಕ ಹಲವಾರು ಸಾಮಾಜಿಕ ನೆರವಿನ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಈಗ ಅಗತ್ಯ ನೆರವು ನೀಡಲು ಫ್ರಾಂಚೈಸಿ ಸಿಗಳೂ ಕೈ ಜೋಡಿಸಿದ್ದಾರೆ. ‘ಕಳೆದ ಕೆಲವು ದಿನಗಳಿಂದ ನಾವು ಸಾಕಷ್ಟು ಪರಿಹಾರ ಸಾಮಗ್ರಿಗಳನ್ನು ರವಾನಿಸಿದ್ದೇವೆ, ನೆರೆ ಸಂತೃಸ್ತರಿಗೆ ನೆರವು ಮಾಡುವುದು ನಮ್ಮ ಉದ್ದೇಶವಾಗಿದೆ, ಪರಿಹಾರ ನೀಡಲು ನಾವು ಸ್ಥಳೀಯ ಎನ್‌ಜಿಒಗಳ ಜತೆ ಕಾರ್ಯನಿರ್ವಹಿಸುತ್ತಿದ್ದೇವೆ,‘ ಎಂದು ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗಾ ಹೇಳಿದ್ದಾರೆ.
‘ಟಾರ್ಪಲಿನ್, ಬೆಡ್‌ಶೀಟ್, ಮೇಣದಬತ್ತಿ, ಆಹಾರ ಸಾಮಗ್ರಿ, ರೈನ್ ಕೋಟ್ಸ್ ಹಾಗೂ ಅಗತ್ಯವಿರುವ ವಸ್ತುಗಳನ್ನು ನಾವು ನೆರೆಪೀಡಿತ ಪ್ರದೇಶಗಳಿಗೆ ಕಳುಹಿಸಿದ್ದೇವೆ, ಬಿಜಾಪುರ ಹಾಗೂ ಬಾಗಲಕೋಟೆ ಪ್ರದೇಶಗಳಲ್ಲಿ ಸಾಕಷ್ಟು ಹಾನಿಯಾಗಿದೆ, ನಮ್ಮಿಂದಾ ನೆರವನ್ನು ನೀಡುತ್ತಿದ್ದೇವೆ,‘ ಎಂದು ಬಿಜಾಪುರ ಬುಲ್ಸ್‌ನ ಮಾಲೀಕ ಕಿರಣ್ ಕಟ್ಟೀಮನಿ ಹೇಳಿದ್ದಾರೆ.
‘ಅಲ್ಲಿ ನಾವು ಅಭ್ಯಾಸ ಮಾಡುವಾಗ ಜನರನ್ನು ಸ್ಥಳಾಂತರಿಸಲು ಅಗತ್ಯವಿರುವ ನೆರವನ್ನು ನೀಡಲು ನಮ್ಮ ಬಿ ತಂಡದ ಜತೆಯಲ್ಲಿ 25 ಸ್ವಯಂ ಸೇವಕರನ್ನು ಕಳುಹಿಸಿದ್ದೇವೆ, ಮಳೆ ನಿಂತ ನಂತರ ಅಲ್ಲಿ ಡೇಂಘ್ಯೂ ಕಾಣಿಸಿಕೊಳ್ಳುತ್ತದೆ, ಅದಕ್ಕಾಗಿ ನಾವು ಡೇಂಘ್ಯೂ ಶಿಬಿರ ಸ್ಥಾಪಿಸಲು ಯೋಚಿಸಿದ್ದೇವೆ,‘ ಎಂದರು.
ಹುಬ್ಬಳ್ಳಿ ಆತಿಥ್ಯ ಕಳೆದುಕೊಳ್ಳಲು ಪ್ರತಿಕೂಲ ಹವಮಾನವೇ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ನಡೆಯಬೇಕಾಗಿದ್ದ ಪಂದ್ಯಗಳನ್ನು ಮೈಸೂರು ಹಾಗೂ ಬೆಂಗಳೂರಿಗೆ ಹಂಚಲಾಗಿದೆ. ಆಗಸ್ಟ್ 16ರಂದು ಟೂರ್ನಿ ಬೆಂಗಳೂರಿನಲ್ಲಿ ಆರಂಭಗೊಳ್ಳಲಿದೆ. ನಂತರ ಪಂದ್ಯಗಳು ಮೈಸೂರಿಗೆ ಸ್ಥಳಾಂತರಗೊಳ್ಳಿದ್ದು, ಸೆಪ್ಪಂಬರ್ 1ರಂದು ಫೈನಲ್ ಪಂದ್ಯ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ